ಬೆಂಗಳೂರು : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೆದ್ದಿರುವ ವರುಣಾ ಕ್ಷೇತ್ರದ ಮತದಾನಕ್ಕೆ ಬಳಸಲಾಗಿದ್ದ ಇವಿಎಂ- ವಿವಿಪ್ಯಾಟ್ಗಳನ್ನು ಮುಂದಿನ ಲೋಕಸಭಾ ಚುನಾವಣೆಗೆ ಉಪಯೋಗಿಸಿಕೊಳ್ಳಲು ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಅನುಮತಿ ನೀಡಿದೆ.
ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ಉಚಿತ ಗ್ಯಾರಂಟಿಗಳ ಆಮಿಷವೊಡ್ಡುವ ಮೂಲಕ ವಿಧಾನಸಭಾ ಚುನಾಣೆಯಲ್ಲಿ ವರುಣಾ ಕ್ಷೇತ್ರದಿಂದ ಜಯಶೀಲರಾಗಿದ್ದಾರೆ ಎಂಬುದಾಗಿ ಆರೋಪಿಸಿ, ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಮೈಸೂರಿನ ವರುಣಾ ಹೋಬಳಿಯ ಕೊಡನಹಳ್ಳಿ ನಿವಾಸಿ ಕೆ ಎಂ ಶಂಕರ್ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ಸಂದರ್ಭದಲ್ಲಿ ಮೈಸೂರು ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗಳ ಪರವಾಗಿ ಹಾಜರಾದ ವಕೀಲರು, ಚುನಾವಣಾ ತಕರಾರು ಅರ್ಜಿ ವಿಚಾರಣೆಗೆ ಬಾಕಿ ಇರುವುದರಿಂದ ವರುಣಾ ಕ್ಷೇತ್ರದಲ್ಲಿ ಬಳಸಲಾಗಿದ್ದ ಇವಿಎಂ-ವಿವಿಪ್ಯಾಟ್ಗಳನ್ನು ಜಿಲ್ಲಾ ಇವಿಎಂ ವೇರ್ ಹೌಸ್ನಲ್ಲಿ ಇಡಲಾಗಿದೆ. ಲೋಕಸಭಾ ಚುನಾವಣೆ ಸನಿಹ ಬರುವುದರಿಂದ ಇವಿಎಂ-ವಿವಿಪ್ಯಾಟ್ಗಳನ್ನು ಬಳಸಿಕೊಳ್ಳಲು ಅವುಗಳನ್ನು 'ಎಫ್ಎಸ್ಎಲ್' ಪ್ರಥಮ ಹಂತದ ತಪಾಸಣೆ ಮಾಡಬೇಕಾಗಿದೆ. ಆದ್ದರಿಂದ ವರುಣಾ ಕ್ಷೇತ್ರದ ಮತದಾನಕ್ಕೆ ಬಳಸಿಕೊಳ್ಳಲಾಗಿದ್ದ 314 ಇವಿಎಂ ಹಾಗೂ 338 ವಿವಿಪ್ಯಾಟ್ಗಳನ್ನು ಬಳಸಿಕೊಳ್ಳಲು ಅನುಮತಿ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.