ಬೆಂಗಳೂರು:ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾಶರಣರ ವಿರುದ್ಧ ಅತ್ಯಾಚಾರ ಮತ್ತು ಪೋಕ್ಸೋ ಪ್ರಕರಣ ಸಂಬಂಧದ ಆರೋಪವನ್ನು ಮರು ನಿಗದಿ ಮಾಡಲು ಹೈಕೋರ್ಟ್ ವಿಶೇಷ ನ್ಯಾಯಾಲಯಕ್ಕೆ ಆದೇಶಿಸಿದೆ. 2023ರ ಏಪ್ರಿಲ್ 13 ಮತ್ತು 20 ರಂದು ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಚಿತ್ರದುರ್ಗದ ವಿಶೇಷ ನ್ಯಾಯಾಲಯವು ತಮ್ಮ ವಿರುದ್ಧ ಆರೋಪ ನಿಗದಿ ಮಾಡಿರುವ ಆದೇಶಗಳನ್ನು ವಜಾ ಮಾಡುವಂತೆ ಕೋರಿ ಡಾ. ಶಿವಮೂರ್ತಿ ಮುರುಘಾ ಶರಣರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಭಾಗಶಃ ಪುರಸ್ಕರಿಸಿದೆ.
ಜೊತೆಗೆ, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯಿದೆಯ ವಿವಿಧ ಕಾಯಿದೆಗಳಡಿ ದಾಖಲಾಗಿರು ಆರೋಪಗಳು ಮುರುಘಾಮಠಕ್ಕೆ ಅನ್ವಯಿಸುವುದಿಲ್ಲ. ಅಲ್ಲದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೇಲಿನ ದೌರ್ಜನ್ಯ ತಡೆ ಕಾಯಿದೆ ಹಾಗೂ ಬಾಲ ನ್ಯಾಯ (ಮಕ್ಕಳ ಸಂರಕ್ಷಣೆ ಹಾಗೂ ಆರೈಕೆ) ಕಾಯಿದೆ–2015ರ ಸೆಕ್ಷನ್ 75 ಅರ್ಜಿದಾರರಿಗೆ ಅನ್ವಯಿಸುವುದಿಲ್ಲ ಎಂದು ಪೀಠ ಹೇಳಿದೆ. ಅಲ್ಲದೇ, ಅರ್ಜಿದಾರರ ವಿರುದ್ಧ ತಪ್ಪಾಗಿ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ವರದಿಯಾಗುವುದಕ್ಕೂ ಮುನ್ನ ಮೂರೂವರೆ ವರ್ಷಗಳ ಹಿಂದೆ ಸಾಕ್ಷ್ಯ ನಾಶಪಡಿಸಲಾಗಿದ್ದು, ಐಪಿಸಿ ಸೆಕ್ಷನ್ 201ರ ಅಡಿ ತಪ್ಪಾಗಿ ಸಾಕ್ಷ್ಯ ನಾಶ ಆರೋಪ ಹೊರಿಸಲಾಗಿದೆ. ಈ ಆರೋಪಗಳ ಅಡಿ ದಾಖಲಾಗಿದ್ದ ಆರೋಪವನ್ನು ರದ್ದು ಪಡಿಸುತ್ತಿರುವುದಾಗಿ ಪೀಠ ತಿಳಿಸಿದೆ.
ಆದರೆ, ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್ 376(2)ಎನ್ ಮತ್ತು ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯಿದೆ–2012ರ ಸೆಕ್ಷನ್ 4 ಮತ್ತು 6ರ ಅಡಿ ಆರೋಪ ಮುಂದುವರಿಯಲಿದೆ ಪೀಠ ತನ್ನ ಆದೇಶದಲ್ಲಿ ಹೇಳಿದೆ. ಮರು ಆರೋಪ ನಿಗದಿ ಮಾಡಲು ಪ್ರಕರಣವನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಮರಳಿಸಲಾಗಿದೆ. ವಿಶೇಷ ನ್ಯಾಯಾಲಯವು ತಪ್ಪೆಸಗಿರುವ ಅಪರಾಧಗಳ ಕುರಿತು ವ್ಯಕ್ತಪಡಿಸಿರುವ ಅಭಿಪ್ರಾಯ ಗಮನದಲ್ಲಿರಿಸಿಕೊಳ್ಳಬೇಕು. ಮತ್ತೆ ಆರೋಪ ನಿಗದಿ ಮಾಡಿದ ಬಳಿಕ ವಿಶೇಷ ನ್ಯಾಯಾಲಯ ವಿಚಾರಣೆ ಮುಂದುವರಿಸಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.