ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದ ತನಿಖೆಯನ್ನು ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಸುವಂತೆ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನಿರ್ದೇಶನ ನೀಡಬೇಕು ಎಂದು ಕೋರಿ ಬಿಜೆಪಿ ಮುಖಂಡರಾದ ಬಸವನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ ಮತ್ತು ಕುಮಾರ್ ಬಂಗಾರಪ್ಪ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಸಿಬಿಐಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ವೆಂಕಟೇಶ್ ದಳವಾಯಿ, ''ಪ್ರಕರಣ ಸಂಬಂಧ ಈಗಾಗಲೇ ಸಿಬಿಐ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಪ್ರಕರಣದಲ್ಲಿ ರಾಜಕಾರಣಿಗಳು ಮತ್ತು ಹಿರಿಯ ಅಧಿಕಾರಿಗಳ ವಿರುದ್ಧ ಸರಿಯಾದ ರೀತಿಯಲ್ಲಿ ತನಿಖೆಯಾಗಬೇಕಾದರೆ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಯಬೇಕು'' ಎಂದರು.
''ದೀನದಲಿತರಿಗೆ ಸೇರಬೇಕಾದ ಹಣವನ್ನು ಲೂಟಿ ಮಾಡಲಾಗಿದೆ. ಇದಕ್ಕೆ ಪ್ರಮುಖ ಕಾರಣರಾದವರನ್ನೂ ಈವರೆಗೂ ವಿಚಾರಣೆಗೆ ಒಳಪಡಿಸಿಲ್ಲ. ಈ ಹಿನ್ನೆಲೆಯಲ್ಲಿ ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡದೇ ಮೇಲ್ವಿಚಾರಣೆ ಮಾಡವುದಕ್ಕೆ ಹೈಕೋರ್ಟ್‌ಗೆ ಅಧಿಕಾರವಿದೆ'' ಎಂದು ಪೀಠಕ್ಕೆ ತಿಳಿಸಿದರು.