ಕರ್ನಾಟಕ

karnataka

ETV Bharat / state

ಆನೆಗಳ ಸಾವು ಪ್ರಕರಣ: ಕೆಪಿಟಿಸಿಎಲ್, ಎಸ್ಕಾಂಗಳಿಗೆ ಹೈಕೋರ್ಟ್ ನೋಟಿಸ್ ಜಾರಿ - High Court

ಆನೆಗಳು ಹಾಗೂ ವನ್ಯಜೀವಿಗಳ ಸಾವು ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಬೆಸ್ಕಾಂ ಹಾಗೂ ಎಸ್ಕಾಂಗಳಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

high court
ಕಾಡಾನೆಗಳು, ಹೈಕೋರ್ಟ್ (ETV Bharat)

By ETV Bharat Karnataka Team

Published : Jul 19, 2024, 7:16 PM IST

ಬೆಂಗಳೂರು:ರಾಜ್ಯದಲ್ಲಿ ಆನೆಗಳೂ ಸೇರಿದಂತೆ ವನ್ಯಜೀವಿಗಳು ವಿದ್ಯುತ್ ತಂತಿ ತಗುಲಿ ಸಾವನ್ನಪ್ಪುತ್ತಿರುವ ಸಂಬಂಧ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಬೆಸ್ಕಾಂ ಸೇರಿದಂತೆ ರಾಜ್ಯದ ಎಲ್ಲ ಎಸ್ಕಾಂಗಳಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಅಶ್ವತ್ಥಾಮ ಆನೆ ಸಾವಿನ ಸಂಬಂಧ ಪತ್ರಿಕೆಗಳ ವರದಿ ಆಧರಿಸಿ ಹೈಕೋರ್ಟ್ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠ ನಡೆಸಿತು. ಪೀಠವು ಎಲ್ಲ ಎಸ್ಕಾಂಗಳನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿಸಿದೆ. ಅಲ್ಲದೇ, ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ, ವಿಚಾರಣೆಯನ್ನು ಆಗಸ್ಟ್ 12ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ವಾದ ಮಂಡಿಸಿದ ಸರ್ಕಾರಿ ಪರ ವಕೀಲರು, ''ವನ್ಯಜೀವಿಗಳ ಸಾವಿಗೆ ಸಂಬಂಧಿಸಿದಂತೆ ವನ್ಯಜೀವಿ ಧಾಮಗಳಲ್ಲಿ ಅಳವಡಿಸಿರುವ ವಿದ್ಯುತ್ ತಂತಿಗಳು ಮುಖ್ಯ ಕಾರಣವಾಗಿದೆ. ಈ ವಿದ್ಯುತ್ ತಂತಿಗಳನ್ನು ನಿಗದಿತವಾಗಿ ನಿರ್ವಹಣೆ ಮಾಡದಿರುವುದು ಹಾಗೂ ಅರಣ್ಯದಂಚಿನ ಕೃಷಿ ಭೂಮಿಗಳಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕಗಳನ್ನು ಪಡೆದುಕೊಳ್ಳಲಾಗುತ್ತಿದೆ. ನಿಗದಿತ ಎತ್ತರಕ್ಕಿಂತಲೂ ಕಡಿಮೆ ಎತ್ತರದಲ್ಲಿ ತಂತಿಗಳ ಅಳವಡಿಸಲಾಗಿದೆ. ಇದರಿಂದ ವನ್ಯಜೀವಿಗಳ ಜೀವಕ್ಕೆ ಹಾನಿಯಾಗುತ್ತಿದೆ'' ಎಂದರು.

''ಅಲ್ಲದೇ, ಅರಣ್ಯ ಇಲಾಖೆಯಿಂದ ಈ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ಎಲ್ಲ ಎಸ್ಕಾಂಗ್‌ಗಳ ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಹಲವು ಬಾರಿ ಪತ್ರಗಳನ್ನು ಬರೆಯಲಾಗಿದೆ. ಆದರೆ, ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಜೊತೆಗೆ, ನಿರ್ವಹಣೆ ಮಾಡುವುದಕ್ಕೆ ಮುಂದಾಗಿಲ್ಲ'' ಎಂದು ಆರೋಪಿಸಿದರು.

ಈ ಎಲ್ಲ ಅಂಶಗಳನ್ನು ದಾಖಲಿಸಿಕೊಂಡ ನ್ಯಾಯಪೀಠ, ಎಲ್ಲ ಎಸ್ಕಾಂಗಳನ್ನು ಪ್ರತಿವಾದಿಗಳನ್ನಾಗಿ ಮಾಡಿ ನೋಟಿಸ್ ಜಾರಿ ಮಾಡಿ ಆದೇಶಿಸಿತು. ವಾದ ಮುಂದುವರೆಸಿದ ಸರ್ಕಾರದ ಪರ ವಕೀಲರು, ''ಆನೆಗಳನ್ನು ಅರಣ್ಯದಿಂದ ಹೊರಬಾರದಂತೆ ನಿಯಂತ್ರಿಸಲು ಹಳೆಯ ರೈಲ್ವೆ ಕಂಬಿಗಳ ಮೂಲಕ 332.62 ಕಿಲೋಮೀಟರ್​ವರೆಗೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಇದಕ್ಕಾಗಿ ಪ್ರತಿ ಒಂದು ಕಿಲೋ ಮೀಟರ್‌ಗೆ ಸುಮಾರು 1.6 ಕೋಟಿ ರೂ.ವರೆಗೂ ವೆಚ್ಚವಾಗುತ್ತಿದೆ. ಜೊತೆಗೆ, 3,426 ಕಿಲೋಮೀಟರ್ ಉದ್ದ ಸೋಲಾರ್​​ ಫೆನ್ಸಿಂಗ್ ಹಾಕಲಾಗಿದೆ. ಎರಡು ರೀತಿಯಲ್ಲಿ ಸೋಲಾರ್ ಫೆನ್ಸ್ ಅಳವಡಿಸಲಾಗಿದೆ. 9 ವೋಲ್ಟ್​​ ವಿದ್ಯುತ್ ಇರಲಿದೆ. ಅದರಿಂದ ಪ್ರಾಣಿಗಳಿಗೆ ಜೀವಕ್ಕೆ ಯಾವುದೇ ಹಾನಿಯಾಗುವುದಿಲ್ಲ'' ಎಂದು ವಿವರಿಸಿದರು.

''ಜೊತೆಗೆ, ಆನೆಗಳು ಸೇರಿ ಇತರ ವನ್ಯ ಜೀವಿಗಳನ್ನು ರಕ್ಷಣೆ ಮಾಡುವುದಕ್ಕಾಗಿ ಅರಣ್ಯ ಭಾಗದ ಸುತ್ತಲು ಮೂರು ಮೀಟರ್ ಆಳವಾದ 2,420 ಕಿ.ಮೀ. ವರೆಗೆ ಕಂದಕ ನಿರ್ಮಾಣ ಮಾಡಲಾಗಿದೆ. ಬಾಕಿಯಿರುವ ಭಾಗಗಳಲ್ಲಿ ರೈಲ್ವೆ ತಡೆಗೋಡೆ ಪೂರ್ಣಗೊಳಿಸಲಾಗುತ್ತಿದ್ದು, ಪ್ರಕ್ರಿಯೆ ಮುಂದುವರೆದಿದೆ'' ಎಂದು ತಿಳಿಸಿದರು.

ಆನೆಗಳು ನಾಡಿಗೆ ಬಾರದಂತೆ ಹಾಗೂ ಮಾನವ - ಆನೆ ಸಂಘರ್ಷ ತಡೆಯಲು ಕೊಡಗು, ಹಾಸನ, ಚಿಕ್ಕಮಗಳೂರು, ಮೈಸೂರು ಚಾಮರಾಜನಗರ, ರಾಮನಗರ, ಬಂಡೀಪುರ ಮತ್ತು ಬನ್ನೇರುಘಟ್ಟ ಸೇರಿದಂತೆ 8 ಜಿಲ್ಲೆಗಳಲ್ಲಿ ಆನೆ ಕಾರ್ಯಪಡೆ ರಚನೆ ಮಾಡಲಾಗಿದೆ. ವನ್ಯಜೀವಿ ಕಳ್ಳಬೇಟೆ ತಡೆ ಶಿಬಿರಗಳನ್ನು ಪ್ರಾರಂಭಿಸಲಾಗಿದ್ದು, ಇದಕ್ಕಾಗಿ 1,922 ಸಿಬ್ಬಂದಿಯನ್ನು ನೇಮಕ ಮಾಡಿ, ನಿಗಾ ವಹಿಸಲಾಗುತ್ತಿದೆ. ಶೀಘ್ರ ಪ್ರತಿಕ್ರಿಯೆ ತಡೆಯುವ ಶಾಶ್ವತವಾಗಿರಲಿದೆ ಎಂದು ವಿವರಿಸಿದರು.

''ಆನೆಗಳ ವರ್ತನೆ ಮತ್ತು ಅವುಗಳ ಚಲನವಲನಗಳ ಮೇಲೆ ನಿಗಾವಹಿಸಲು ರೇಡಿಯೋ ಕಾಲರ್‌ಗಳನ್ನು ಅಳವಡಿಸಿದ್ದು, ಆನೆ - ಮಾನವ ಸಂಘರ್ಷ ತಡೆಯಲು ಗಸ್ತು ತಿರುಗುವುದಕ್ಕಾಗಿ 2,730 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಸುಮಾರು 8 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ'' ಎಂದರು.

''ಆನೆಗಳು ಬರುವ ಗ್ರಾಮೀಣ ಭಾಗಗಳವರಿಗೆ ಮಾಹಿತಿ ನೀಡಲು ಗಸ್ತು ಸಿಬ್ಬಂದಿ ನೇಮಕ ಮಾಡಲಾಗಿದೆ. ಈ ಸಂಬಂಧ ಕಾಲ ಕಾಲಕ್ಕೆ ಗ್ರಾಮಸ್ಥರಿಗೆ ಸಂದೇಶಗಳನ್ನು ರವಾನಿಸಲಾಗುತ್ತಿದೆ. ಅಲ್ಲದೇ, ವನ್ಯಜೀವಿಗಳಿಗಾಗಿ ಆವಾಸಸ್ಥಾನಗಳನ್ನು ಅಭಿವೃದ್ಧಿ ಮಾಡಲು ಹುಲ್ಲುಗಾವಲುಗಳು, ಬಿದಿರು ಬೆಳೆಸಲು ಕ್ರಮ ಕೈಗೊಳ್ಳಲಾಗಿದೆ. ಕೇರಳ, ತಮಿಳುನಾಡು ಮತ್ತು ಕರ್ನಾಟಕ ಅಧಿಕಾರಿಗಳೊಂದಿಗೆ ಅಂತಾರಾಜ್ಯ ಸಮಿತಿ ರಚನೆ ಮಾಡಲಾಗಿದೆ'' ಎಂದು ಪೀಠಕ್ಕೆ ತಿಳಿಸಿದರು.

''ಆನೆಗಳ ಮೇಲೆ ನಿಗಾವಹಿಸಲು ಕೇಂದ್ರೀಕೃತ ವ್ಯವಸ್ಥೆ ಸಿದ್ಧಪಡಿಸಿದ್ದು, ಆ ಮೂಲಕ ಡ್ಯಾಷ್ ಬೋರ್ಡ್‌ನಲ್ಲಿ ಯಾರು ಬೇಕಾದರೂ ಆನ್​​ಲೈನ್‌ನಲ್ಲಿ ಆನೆಗಳನ್ನು ಪರಿಶೀಲಿಸಿ ಸ್ಥಳೀಯ ಜನರಿಗೆ ಎಚ್ಚರಿಕೆ ನೀಡಬಹುದಾಗಿದೆ. ಜೊತೆಗೆ, ಕ್ಯಾಂಪ್‌ಗಳಲ್ಲಿ ಕಾಡಾನೆಗಳನ್ನು ತಂದು ತರಬೇತಿಯನ್ನೂ ನೀಡಲಾಗುತ್ತಿದೆ'' ಎಂದು ವಕೀಲರು ವಿವರಿಸಿದರು.

ಪ್ರಕರಣದಲ್ಲಿ ಅಮೈಕಾಸ್ ಕ್ಯೂರಿ (ನ್ಯಾಯಾಲಯಕ್ಕೆ ನೆರವು ನೀಡುವ ವಕೀಲರು) ರಮೇಶ್ ಪುತ್ತಿಗೆ, ''ದೇಶದಲ್ಲಿ 2023ರಲ್ಲಿ ನಡೆದ ಆನೆ ಗಣತಿಯ 27 ಸಾವಿರ ಆನೆಗಳಿದ್ದು, ಅದರಲ್ಲಿ ಕರ್ನಾಟಕದಲ್ಲಿ 7,000 (ಶೇ.25) ಆನೆಗಳಿವೆ. ಆನೆ ಸಂತತಿ ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು, ಗಂಡಾನೆ ಮತ್ತು ಹೆಣ್ಣಾನೆಯಲ್ಲಿ ಸರಾಸರಿ ಸಮಾನವಾಗಿದೆ. ಆದರೆ, ವಯಸ್ಕ ಆನೆಗಳಲ್ಲಿ ಸರಾಸರಿಯಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಗಂಡಾನೆಗಳಿಗಿಂತಲೂ ಹೆಣ್ಣಾನೆಗಳ ಪ್ರಮಾಣ ಶೇ. 50ರಷ್ಟು ಕಡಿಮೆಯಿದೆ. ಗಂಡಾನೆಗಳನ್ನು ಕಳ್ಳತನಕ್ಕೆ ಬಳಕೆ ಮಾಡಲಾಗುತ್ತಿದ್ದು, ಅವುಗಳನ್ನು ಕೊಂದು, ದಂತ ಮತ್ತು ಮೂಳೆಗಳನ್ನು ಅಕ್ರಮ ವ್ಯಾಪಾರಕ್ಕೆ ಬಳಕೆ ಮಾಡಲಾಗುತ್ತಿದೆ'' ಎಂದು ವಿವರಿಸಿದರು.

''ಅನಾರೋಗ್ಯದಿಂದ ಆಶ್ವತ್ಥಾಮ ಆನೆಯ ಸಾವಾಗಿದೆ ಎಂದು ಹೇಳಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಸೋಲಾರ್ ವಿದ್ಯುತ್ ತಂತಿ ತಗುಲಿ ಎಂದು ತಿಳಿದುಬಂದಿದೆ'' ಎಂದ ರಮೇಶ್ ಪುತ್ತಿಗೆ, ಸುಪ್ರೀಂಕೋರ್ಟ್‌ನ ವಿವಿಧ ತೀರ್ಪುಗಳನ್ನು ಪ್ರಸ್ತಾಪಿಸಿ, ''ಸುಪ್ರೀಂಕೋರ್ಟ್ ಆದೇಶದಂತೆ ಸೋಲಾರ್ ವಿದ್ಯುತ್ ತಡೆಗೋಡೆ ಹಾಕವುದನ್ನು ನಿರ್ಬಂಧಿಸಲಾಗಿದೆ'' ಎಂದು ಪೀಠಕ್ಕೆ ತಿಳಿಸಿದರು.

ಇದನ್ನೂ ಓದಿ:ಮೈಸೂರು - ಕೊಡಗು ಲೋಕಸಭಾ ಕ್ಷೇತ್ರಕ್ಕೆ ಹೊಸದಾಗಿ ಚುನಾವಣೆ ನಡೆಸಲು ಸೂಚಿಸಲು ಕೋರಿ ಹೈಕೋರ್ಟ್‌ಗೆ ಅರ್ಜಿ - Petition to High Court

ABOUT THE AUTHOR

...view details