ಕರ್ನಾಟಕ

karnataka

ETV Bharat / state

ಎಡಿಜಿಪಿ ಚಂದ್ರಶೇಖರ್‌ಗೆ ಬೆದರಿಕೆ ಆರೋಪ: ಹೆಚ್‌ಡಿಕೆ ವಿರುದ್ಧ ಆತುರದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಸೂಚನೆ - HIGH COURT

ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್‌ ನೀಡಿರುವ ದೂರಿನ ಸಂಬಂಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಯಾವುದೇ ಆತುರದ ಕ್ರಮಕ್ಕೆ ಮುಂದಾಗಬಾರದು ಎಂದು ಹೈಕೋರ್ಟ್ ಆದೇಶಿಸಿದೆ.

ಹೈಕೋರ್ಟ್
ಹೈಕೋರ್ಟ್ (ETV Bharat)

By ETV Bharat Karnataka Team

Published : Nov 6, 2024, 10:19 PM IST

ಬೆಂಗಳೂರು:ಲೋಕಾಯುಕ್ತದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಮತ್ತು ವಿಶೇಷ ಪೊಲೀಸ್‌ ತನಿಖಾ ದಳದ (ಎಸ್‌ಐಟಿ) ಮುಖ್ಯಸ್ಥರಾದ ಎಂ.ಚಂದ್ರಶೇಖರ್‌ ನೀಡಿರುವ ದೂರಿನ ಸಂಬಂಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಯಾವುದೇ ಆತುರದ ಕ್ರಮಕ್ಕೆ ಮುಂದಾಗಬಾರದು ಎಂದು ಹೈಕೋರ್ಟ್ ಆದೇಶಿಸಿದೆ.

ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆಯ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ತಮ್ಮ ವಿರುದ್ಧ ಮಾನಹಾನಿ ಹೇಳಿಕೆ ನೀಡುವುದರ ಜೊತೆಗೆ ಬೆದರಿಕೆ ಹಾಕಲಾಗಿದೆ ಎಂದು ಲೋಕಾಯುಕ್ತದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಮತ್ತು ವಿಶೇಷ ಪೊಲೀಸ್‌ ತನಿಖಾ ದಳದ (ಎಸ್‌ಐಟಿ) ಮುಖ್ಯಸ್ಥರಾದ ಎಂ ಚಂದ್ರಶೇಖರ್‌ ದಾಖಲಿಸಿದ್ದ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಹೈಕೋರ್ಟ್​ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ.

ಅಲ್ಲದೆ, ಪ್ರಕರಣ ಸಂಬಂಧ ಯಾವುದಾದರು ಕ್ರಮಕ್ಕೆ ಮುಂದಾದಲ್ಲಿ ತಕ್ಷಣ ನ್ಯಾಯಪೀಠದ ಕದ ತಟ್ಟಬಹುದು. ಜತೆಗೆ, ಅಕ್ರಮ ಗಣಗಾರಿಕೆ ಸಂಬಂಧ 10 ವರ್ಷಗಳ ಹಿಂದೆ ಮಂಜೂರಾದ ನಿರೀಕ್ಷಣಾ ಜಾಮೀನು ರದ್ದುಪಡಿಸುವ ಪ್ರಕ್ರಿಯೆ ನಡೆಸುವುದಕ್ಕೆ ಅವಕಾಶವಿಲ್ಲ ಎಂದು ಪೀಠ ಮೌಖಿಕವಾಗಿ ತಿಳಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಾಜರಾಗಿದ್ದ ಹಿರಿಯ ವಕೀಲ ಹಸ್ಮತ್​ ಪಾಷಾ, ರಾಜ್ಯದಲ್ಲಿ ಪ್ರಸ್ತುತ ಮುಖ್ಯಮಂತ್ರಿಗಳ ವಿರುದ್ಧ ತನಿಖೆಗೆ ಆದೇಶಿಸಿರುವುದರಿಂದ ನಮ್ಮ ಕಕ್ಷಿದಾರರಿಗೆ ಉದ್ದೇಶಪೂರ್ವಕವಾಗಿ ತೊಂದರೆ ನೀಡಲಾಗುತ್ತಿದೆ. ಕಳೆದ ಹತ್ತು ವರ್ಷಗಳ ಹಿಂದೆ ಮಂಜೂರಾಗಿರುವ ನಿರೀಕ್ಷಣಾ ಜಾಮೀನನ್ನು ರದ್ದ ಕೋರಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಪೀಠಕ್ಕೆ ತಿಳಿಸಿದರು.

ಸಂಜಯ್​ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಠಾಣಾ ಮುಖ್ಯಸ್ಥರ ಮೂಲಕ ಮ್ಯಾಜಿಸ್ಟ್ರೇಟ್​ ನ್ಯಾಯಾಲಯಕ್ಕೆ ತಲುಪಬೇಕು. ಆದರೆ, ಠಾಣಾ ಮುಖ್ಯಸ್ಥರ ಪಾತ್ರವಿಲ್ಲದೆ ದೂರುದಾರ ಅಧಿಕಾರಿಯೇ ಮ್ಯಾಜಿಸ್ಟ್ರೇಟ್​ ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಇದು ಕಾನೂನು ಪ್ರಕ್ರಿಯೆ ದುರ್ಬಳಕೆ ಎಂದು ವಾದಿಸಿದರು.

ಅರ್ಜಿಯಲ್ಲೇನಿದೆ?:ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ಚಂದ್ರಶೇಖರ್‌ ಅವರು ಜನಾಂಗೀಯ ದಾಳಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಾರದಿತ್ತು. ಅರ್ಜಿದಾರರನ್ನು ಅವಮಾನಿಸುವ ಉದ್ದೇಶದಿಂದ ಹೀಗೆ ಮಾಡಲಾಗಿದೆ. ಹಲವು ರಾಜಕೀಯ ವಿರೋಧಿಗಳು ಚಂದ್ರಶೇಖರ್‌ ಅವರನ್ನು ಪ್ರಚೋದಿಸಿದ್ದು, ಅವರು ಬರೆದಿರುವ ಪತ್ರವನ್ನು ಪೊಲೀಸ್‌ ಇಲಾಖೆಯಲ್ಲಿ ಹಂಚಿಕೆ ಮಾಡಲಾಗಿದೆ. ಈಗ ದೂರಿನಲ್ಲಿ ಮಾಡಿರುವ ಆರೋಪಗಳು ಸೃಷ್ಟಿತವಾಗಿದ್ದು, ಎಫ್‌ಐಆರ್‌ ದಾಖಲಿಸುವ ಉದ್ದೇಶದಿಂದ ಮಾಡಲಾಗಿದೆ. ಹೀಗಾಗಿ, ಅದನ್ನು ವಜಾ ಮಾಡಬೇಕು ಎಂದು ಕೋರಲಾಗಿದೆ.

ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶ ಆಧರಿಸಿ ಬೆಂಗಳೂರಿನ ಸಂಜಯ್​ನಗರ ಠಾಣಾಧಿಕಾರಿಯು ಹೆಚ್‌.ಡಿ. ಕುಮಾರಸ್ವಾಮಿ, ನಿಖಿಲ್‌ ಮತ್ತು ಸುರೇಶ್‌ ಬಾಬು ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 224 (ಸರ್ಕಾರಿ ಅಧಿಕಾರಿಗೆ ಬೆದರಿಕೆ) ಅಡಿ ಪ್ರಕರಣ ದಾಖಲಿಸಿದ್ದಾರೆ.

ಆಂಧ್ರಪ್ರದೇಶ ಮೂಲದ ಜಂತಕಲ್‌ ಮೈನಿಂಗ್‌ ಕಂಪನಿಯ ಸಹವರ್ತಿ ಸಂಸ್ಥೆಯಾಗಿರುವ ಶ್ರೀ ಸಾಯಿ ವೆಂಕಟೇಶ್ವರ್‌ ಮಿನರಲ್ಸ್‌ ಕಂಪನಿಗೆ 2007ರ ಅಕ್ಟೋಬರ್‌ 5 ರಂದು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಎನ್‌ಇಬಿ ರೇಂಜ್‌ನಲ್ಲಿ 550 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ಲೀಸ್‌ ನೀಡಲು ಪರವಾನಗಿಗೆ ಅನುಮೋದನೆ ಕಡತಕ್ಕೆ ಸಹಿ ಹಾಕಿದ್ದರು.

ಈ ವೇಳೆ ಸಲ್ಲಿಕೆಯಾಗಿದ್ದ 29 ಅರ್ಜಿಗಳ ಪೈಕಿ ಕೊನೆಯದಾಗಿ ಸಲ್ಲಿಕೆಯಾಗಿದ್ದ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ ಅರ್ಜಿಯನ್ನು ಸರ್ಕಾರ ನಿಯಮಾವಳಿ ಉಲ್ಲಂಘಿಸಿ ಅನುಮೋದಿಸಿ ಮಂಜೂರು ಮಾಡಲಾಗಿತ್ತು ಎಂಬುದು ಕುಮಾರಸ್ವಾಮಿ ಅವರ ಮೇಲಿರುವ ಆರೋಪವಾಗಿದೆ. ಈ ಪ್ರಕರಣದಲ್ಲಿ ಹೆಚ್ಚುವರಿ ಸಾಕ್ಷ್ಯಾಧಾರಗಳು ದೊರೆತಿದ್ದರಿಂದ ಕಾನೂನು ಕ್ರಮಕೈಗೊಳ್ಳಲು ಅನುಮತಿ ನೀಡುವಂತೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರಿಗೆ ಎಸ್‌ಐಟಿ ಮುಖ್ಯಸ್ಥರಾಗಿರುವ ಎಂ ಚಂದ್ರಶೇಖರ್‌ ಮನವಿ ಮಾಡಿದ್ದರು.

ಇದರಿಂದ ಕೆರಳಿದ ಕುಮಾರಸ್ವಾಮಿ ಅವರು ಸೆಪ್ಟೆಂಬರ್‌ 28 ಮತ್ತು 29ರಂದು ಮಾಧ್ಯಮಗೋಷ್ಠಿ ನಡೆಸಿ ತನ್ನ ವಿರುದ್ಧ ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪ ಮಾಡಿ, ಬೆದರಿಕೆ ಹಾಕಿದ್ದಾರೆ. ಕರ್ನಾಟಕ ಕೇಡರ್‌ನಿಂದ ಬೇರೆ ರಾಜ್ಯಕ್ಕೆ ಕಳುಹಿಸುವುದಾಗಿ ಮೌಖಿಕವಾಗಿ ಬೆದರಿಕೆ ಹಾಕಿದ್ದು, ತಮ್ಮ ಕುಟುಂಬದ ವಿರುದ್ಧ ಸುಳ್ಳು ಆರೋಪ ಮಾಡಿ, ತೊಂದರೆ ಕೊಡುವುದಾಗಿ ಬೆದರಿಕೆ ಹಾಕಿದ್ದಾರೆ. ತಾನು ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಯಲ್ಲಿ ನಕಲಿ ವೈದ್ಯಕೀಯ ದಾಖಲೆ ಪಡೆದು ಕರ್ನಾಟಕ ಕೇಡರ್‌ಗೆ ಸೇರ್ಪಡೆಯಾಗಿರುವುದಾಗಿ ಆರೋಪಿಸಿದ್ದಾರೆ. ಅಲ್ಲದೇ, ತಾನು ಲಂಚ ಸ್ವೀಕರಿಸುತ್ತಿರುವುದಾಗಿ ಸುಳ್ಳು ಆರೋಪ ಮಾಡಿದ್ದಾರೆ.

ಆನಂತರ ಜೆಡಿಎಸ್‌ ಶಾಸಕ ಸುರೇಶ್‌ ಬಾಬು ಅವರು ತನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಕ್ರಮಕ್ಕೆ ಆಗ್ರಹಿಸಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಬೆದರಿಕೆ ಹಾಕಿದ್ದಾರೆ ಎಂದು ಚಂದ್ರಶೇಖರ್‌ ಅವರ ದೂರಿನಲ್ಲಿ ವಿವರಿಸಲಾಗಿದೆ.

ಈ ಎಫ್​ಐಆರ್​ ರದ್ದುಕೋರಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಅವರ ಪುತ್ರ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿರುವ ನಿಖಿಲ್‌ ಕುಮಾರಸ್ವಾಮಿ ಮತ್ತು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಹಾಗೂ ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್‌ ಬಾಬು ಅವರು ಎಫ್‌ಐಆರ್‌ ರದ್ದತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ:ಸಿಪಿ ಯೋಗೇಶ್ವರ್ ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಂತೆ ನಿಶಾ ಯೋಗೇಶ್ವರ್​​ಗೆ ಹೈಕೋರ್ಟ್ ನಿರ್ಬಂಧ

ABOUT THE AUTHOR

...view details