ಮಂಗಳೂರು (ದಕ್ಷಿಣ ಕನ್ನಡ) : ಜಿಲ್ಲೆಯಲ್ಲಿ ಇಂದಿನಿಂದ ಕರಾವಳಿ ಉತ್ಸವ ಆರಂಭವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹೆಲಿಟೂರಿಸಂ ಆಯೋಜಿಸಿದೆ. ಈ ಮೂಲಕ ಕುಡ್ಲದ ಸೌಂದರ್ಯವನ್ನು ಬಾನಂಗಳದಿಂದ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ನಗರದಲ್ಲಿ ಇಂದಿನಿಂದ ಹೆಲಿಟೂರಿಸಂಗೆ ಚಾಲನೆ ದೊರಕಿದೆ. ಇಂದಿನಿಂದ 9 ದಿನಗಳ ಕಾಲ ಇರುವ ಈ ಹೆಲಿಟೂರಿಸಂ ನಗರದ ಸೌಂದರ್ಯವನ್ನು ಬಾನಂಗಳದಿಂದ ನೋಡುವ ಅವಕಾಶವನ್ನು ಒದಗಿಸುತ್ತಿದೆ. ತುಂಬಿ ಏರ್ ಟ್ಯಾಕ್ಸ್ ಕಂಪೆನಿಯ ಸಹಯೋಗದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ಹೆಲಿಟೂರಿಸಂ ಅನ್ನು ಆಯೋಜಿಸಿದೆ.
ಸ್ವತಃ ದ. ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಎಸ್ಪಿ ಯತೀಶ್ ಸೇರಿದಂತೆ ಅಧಿಕಾರಿಗಳು ದ. ಕ ಜಿಲ್ಲೆಯ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಹಾಗೂ ಮಹಾಲಿಂಗ ನಾಯ್ಕರೊಂದಿಗೆ ಹೆಲಿಕಾಪ್ಟರ್‌ನಲ್ಲಿ ರೌಂಡ್ ಹೊಡೆದು ನಗರದ ಸೌಂದರ್ಯವನ್ನು ಮೇಲಿನಿಂದ ಕಣ್ತುಂಬಿಕೊಂಡರು.
ಬಾನಂಗಳದಲ್ಲಿ ಕುಡ್ಲದ ಸೌಂದರ್ಯ ವೀಕ್ಷಿಸಲು ಬಯಸುವವರಿಗೆ ಡಿಸೆಂಬರ್ 21 ರಿಂದ 31ರ ವರೆಗೆ ಹೆಲಿಕಾಪ್ಟರ್ ಪ್ರಯಾಣಕ್ಕೆ ಅವಕಾಶವಿದೆ. ಒಂದು ರೌಂಡ್ 6-7 ನಿಮಿಷಗಳ ಕಾಲ ತೆಗೆದುಕೊಳ್ಳುತ್ತದೆ. ಹೆಲಿಕಾಪ್ಟರ್‌ನಲ್ಲಿ ರೌಂಡ್ ಹೊಡೆದು ಮಂಗಳೂರು ನಗರ, ನೇತ್ರಾವತಿ ನದಿ ತೀರ, ಪಣಂಬೂರು ಬೀಚ್ ಸೌಂದರ್ಯವನ್ನು ವೀಕ್ಷಿಸಬಹುದಾಗಿದೆ. ಪ್ರತೀ ರೌಂಡ್‌ನಲ್ಲಿ ಆರು ಮಂದಿಗೆ ಹೆಲಿಕಾಪ್ಟರ್ ಸುತ್ತಾಟಕ್ಕೆ ಅವಕಾಶವಿದೆ. ಇದಕ್ಕೆ ಕೇವಲ 4,500 ರೂ. ಪಾವತಿಸಿದರೆ ಸಾಕು, ಯಾರು ಬೇಕಾದರೂ ಹೆಲಿಕಾಪ್ಟರ್ ಪ್ರಯಾಣ ಮಾಡಬಹುದಾಗಿದೆ. ಮಂಗಳೂರಿನ ನದಿ ಸಮುದ್ರವನ್ನು ಮೇಲಿನಿಂದಲೇ ನೋಡಬಹುದಾಗಿದೆ.