ದಾವಣಗೆರೆ:ತಡರಾತ್ರಿ ದಾವಣಗೆರೆ ಸುತ್ತ ಮುತ್ತ ಭಾರಿ ಮಳೆಯಾಗಿದೆ. ಮಳೆಯಿಂದ ಕೆರೆಕಟ್ಟೆಗಳಿಗೆ ಜೀವ ಕಳೆ ಬರುತ್ತಿದೆ. ರೈತ ಮೊಗದಲ್ಲಿ ಮಂದಹಾಸ ಮೂಡಿದೆ. ದಾವಣಗೆರೆ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಎರಡು ಗಂಟೆಗೂ ಅಧಿಕವಾಗಿ ಸುರಿದ ಮಳೆಗೆ ಗ್ರಾಮದ ಕೆರೆಗೆ ಜೀವಜಲ ಹರಿದು ಬರುತ್ತಿದೆ. ಭೀಕರ ಬರಗಾಲದಿಂದ ಬೇಸತ್ತಿದ್ದ ಈ ಭಾಗದ ರೈತರ ಮೊಗದಲ್ಲಿ ಸ್ವಂತ ಮನೆ ಮಾಡಿದೆ. ಬರಗಾಲಕ್ಕೆ ತುತ್ತಾಗಿ ಈ ಕೆರೆ ಸಂಪೂರ್ಣವಾಗಿ ನೀರಿಲ್ಲದೇ ಭಣಗುಡುತ್ತಿತ್ತು. ಆದರೆ ಇದೀಗ ಒಂದೇ ಮಳೆಗೆ ಅರ್ಧದಷ್ಟು ಕೆರೆ ತುಂಬಿದೆ.
ಹಾಗೇ ನಿನ್ನೆ ಸುರಿದ ಮಳೆಗೆ ಅಡಿಕೆ ತೋಟಗಳಲ್ಲಿ ನದಿಯಂತೆ ನೀರು ನಿಂತುಕೊಂಡಿದ್ದು, ಕೆಲ ರೈತರಿಗೆ ತಲೆನೋವಾಗಿದೆ. ಇದಲ್ಲದೇ ಆನಗೋಡು, ಹೆಬ್ಬಾಳು, ಹುಣಸೆಕಟ್ಟೆ, ಮಂಡ್ಲೂರು ಗ್ರಾಮದಲ್ಲೂ ಮಳೆರಾಯ ಕೃಪೆ ತೋರಿದ್ದು, ಅ ಭಾಗದ ರೈತರು ಕೂಡ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.
ನೀರು ಜೊತೆ ತ್ಯಾಜ್ಯ: ನೀರು ಹರಿದು ಬರುತ್ತಿರುವ ಜೊತೆ ಜೊತೆಗೆ ತ್ಯಾಜ್ಯ ಕೂಡ ಹರಿದು ಬರುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ತ್ಯಾಜ್ಯ ಎಸೆಯಿತ್ತಿರುವ ಅಂಗಡಿ ಮಾಲೀಕರಿಗೆ ತಾಕೀತು ಮಾಡಬೇಕು ಎಂದೂ ಗ್ರಾಮ ಪಂಚಾಯತ್ಗೆ ಮನವಿ ಮಾಡಿದ್ದಾರೆ. ಹೆಬ್ಬಾಳು ಗ್ರಾಮಕ್ಕೆ ರಾಷ್ಟ್ರೀಯ ಹೆದ್ದಾರಿ ಟೋಲ್ ಇರುವ ಕಾರಣ ಪೆಟ್ಟಿಗೆ ಅಂಗಡಿಗಳು ಹೆಚ್ಚಿವೆ. ಪೆಟ್ಟಿಗೆ ಅಂಗಡಿಯವರ ಪೇಪರ್ ಲೋಟಗಳು ಮತ್ತು ನೀರಿನ ಬಾಟಲ್ ಗಳ ತ್ಯಾಜ್ಯ ಹೆಚ್ಚು ಸುರಿಯುತ್ತಿದ್ದರಿಂದ ಇವುಗಳು ಹೆಬ್ಬಾಳ ಕೆರೆಗೂ ಹರಿದು ಬರುತ್ತಿದೆ. ಹೋಟೆಲ್ನವರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ವಿಜಯಪುರದ ಹಲವೆಡೆ ಮಳೆ ಅವಾಂತರ:ಜಿಲ್ಲೆಯಲ್ಲಿ ತಡರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೆಲ ರಸ್ತೆಗಳು ಕೆರೆಯಂತಾಗಿದ್ದು, ವಿವಿಧೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ನಗರದ ಮೀನಾಕ್ಷಿ ವೃತ್ತ ಜಲಾವೃತವಾಗಿದ್ದು, ವಾಹನ ಸವಾರರು ಪರದಾಡುವಂತಾಗಿತ್ತು. ಜುಮನಾಳ, ಸಾರವಾಡ, ಹೊನಗನಹಳ್ಳಿ ಸೇರಿ ಹಲವೆಡೆ ಭಾರಿ ಮಳೆಯಾಗಿದ್ದು, ರೈತನ ಮೊಗದಲ್ಲಿ ಸಂತಸ ಮೂಡಿದೆ. ನಿನ್ನೆ ಸಾಯಂಕಾಲದಿಂದ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದ್ದು, ಇದುವರೆಗೆ 87.4 ಮಿ.ಮೀ. ಸುರಿದ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸಿಡಿಲು ಬಡಿದು ಹಸು ಸಾವು: ಸಿಡಿಲು ಬಡಿದು ಹಸು ಅಸುನೀಗಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಿವಯೋಗಿ ಹೊಸಮನಿ ಎಂಬವರಿಗೆ ಸೇರಿದ ಹಸು ಹೊಲದಲ್ಲಿ ಕಟ್ಟಿದ್ದ ವೇಳೆ ಮೃತಪಟ್ಟಿದೆ.