ಕೊಪ್ಪಳ: ಮುಂಗಾರು ರಾಜ್ಯವನ್ನು ಆವರಿಸಿದೆ. ನಿನ್ನೆ ಮತ್ತು ಇಂದಿಗೆ ರಾಜ್ಯದ 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬಹುತೇಕ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕೊಪ್ಪಳ ಜಿಲ್ಲಾದ್ಯಂತ ಕಳೆದೆರಡು ದಿನದಿಂದ ವ್ಯಾಪಕ ಮಳೆಯಾಗುತ್ತಿದ್ದು, ಕೃಷಿ ಹೊಂಡದ ಒಡ್ಡು, ರಸ್ತೆ, ಫಲವತ್ತಾದ ಮಣ್ಣು ಕೊಚ್ಚಿಹೋಗಿದೆ. ಭಾರಿ ಮಳೆ ಹಿನ್ನೆಲೆ ಕೆಲವೆಡೆ ತಾತ್ಕಾಲಿಕ ಜಲಪಾತ ನಿರ್ಮಾಣಗೊಂಡಿದೆ.
ಮಳೆಗೆ ಕೊಚ್ಚಿ ಹೋದ ಕೃಷಿ ಹೊಂಡದ ಒಡ್ಡು: ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ್ದ ಕೃಷಿ ಹೊಂಡ ಮುಂಗಾರಿನ ಮೊದಲು ಮಳೆಗೆ ತುಂಬಿತ್ತು. ನಿನ್ನೆ ಮತ್ತೆ ಧಾರಾಕಾರವಾಗಿ ಸುರಿದ ಮಳೆಗೆ ಕೃಷಿ ಹೊಂಡದ ಒಡ್ಡು ಕೊಚ್ಚಿಹೋಗಿದೆ. ನೀರಿನ ರಭಸಕ್ಕೆ ಹೊಲದಲ್ಲಿನ ಫಲವತ್ತಾದ ಮಣ್ಣು ಕೂಡ ಕೊಚ್ಚಿಹೋಗಿದೆ.
ದಿಢೀರ್ ಪ್ರತ್ಯಕ್ಷವಾದ ದಿಡಿಗು ಜಲಪಾತ: ವರುಣಾರ್ಭಟ ಹಿನ್ನೆಲೆ ದಿಢೀರ್ ಕುಷ್ಟಗಿ ತಾಲೂಕಿನ ಬೀಳಗಿಯ ಗುಡ್ಡದಿಂದ ಜಲಧಾರೆ ಧುಮ್ಮಿಕ್ಕುವ ದೃಶ್ಯ ಕಂಡು ಬಂತು. ಬೀಳಗಿಯ ಬಸವೇಶ್ವರ ದಿಡಿಗು ಎಂದು ಕರೆಯುವ ಜಲಪಾತ ಇದಾಗಿದ್ದು, ಭಾರಿ ಪ್ರಮಾಣದಲ್ಲಿ ಮಳೆಯಾದಾಗೊಮ್ಮೆ ಈ ಜಲಪಾತ ಕಾಣಿಸಿಕೊಳ್ಳತ್ತದೆಯಷ್ಟೇ. ಇನ್ನೂ ಬೆಟಗೇರಿ ಗ್ರಾಮದಲ್ಲಿ ರಸ್ತೆಗಳೆಲ್ಲ ಹಳ್ಳಗಳಾಗಿದ್ದವು. ರಸ್ತೆ ಪಕ್ಕದ ನೀರು ಮಳೆಯ ನೀರಿನೊಂದಿಗೆ ಸೇರಿಕೊಂಡು ಕೆಲಕಾಲ ಸಂಚಾರಕ್ಕೆ ತೊಂದರೆಯುಂಟಾಗಿತ್ತು.