ಉಡುಪಿ: ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಇಂದು ಸಹ ದಿನವಿಡೀ ಮಳೆ ಸುರಿಯುತಿದ್ದು, ಉಡುಪಿ- ಕುಂದಾಪುರ- ಬೈಂದೂರು ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆಯ ವಾತಾವರಣ ಮತ್ತು ತಗ್ಗು ಪ್ರದೇಶಗಳಲ್ಲಿ ನೆರೆಯ ವಾತಾವರಣ ಕಂಡು ಬರುತ್ತಿದೆ. ಕಳೆದ 24 ಗಂಟೆಗಳಲ್ಲಿ ಗಾಳಿ - ಮಳೆಯಿಂದ ಮನೆ ಹಾನಿ, ಬೆಳೆ ಹಾನಿಯ 40ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ.
ಸತತ ಮಳೆ ಹಾಗೂ ಆಗಾಗ ಬೀಸುವ ಗಾಳಿಯಿಂದ ಜಿಲ್ಲೆಯ ನದಿಗಳು ತುಂಬಿ ಹರಿಯುತ್ತಿವೆ. ಹೀಗಾಗಿ ಅಕ್ಕ ಪಕ್ಕದ ತಗ್ಗು ಪ್ರದೇಶಗಳಿಗೆ ಆಗಾಗ ನೀರು ನುಗ್ಗಿ ಜನ - ಜಾನುವಾರುಗಳಿಗೆ ಆತಂಕದ ಕ್ಷಣಗಳು ಸೃಷ್ಟಿ ಯಾಗುತ್ತಿವೆ. ಬೆಳಗಿನಿಂದ ಬಿಟ್ಟು ಬಿಟ್ಟು ಸುರಿಯುತಿದ್ದ ಮಳೆ ಸಂಜೆಯಾಗುತಿದ್ದಂತೆ ಬಿರುಸಿನಿಂದ ಸುರಿಯುತ್ತಿದೆ. ಹೀಗಾಗಿ ನದಿಪಾತ್ರದ ಜನತೆ ನೆರೆಯ ಭೀತಿಯಲ್ಲಿ ರಾತ್ರಿಯಿಡೀ ಕಳೆಯುವಂತಾಗಿದೆ. ಬ್ರಹ್ಮಾವರ – ಕುಂದಾಪುರ ಹಾಗೂ ಬೈಂದೂರು ತಾಲೂಕಿನಾದ್ಯಂತ ಬಿರುಸಿನ ಗಾಳಿಯೊಂದಿಗೆ ದಿನವಿಡೀ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಪ್ರಮುಖ ನದಿಗಳು, ಹಳ್ಳಕೊಳ್ಳಗಳು ಮೈದುಂಬಿ ಹರಿಯುತ್ತಿದೆ.
ಶನಿವಾರವೂ ಶಾಲೆಗೆ ರಜೆ:ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಹವಾಮಾನ ಇಲಾಖೆಯು ನಾಳೆಯೂ ರೆಡ್ ಅಲರ್ಟ್ ನೀಡಿದೆ. ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಅಂಗನವಾಡಿಗಳು ಮತ್ತು ಸರ್ಕಾರಿ, ಅನುದಾನಿತ, ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ಜುಲೈ 20ರಂದು ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ರಜೆ ಘೋಷಿಸಿದ್ದಾರೆ. ಉಳಿದಂತೆ ಎಲ್ಲ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್, ಐಟಿಐಗಳಿಗೆ ರಜೆ ಇರುವುದಿಲ್ಲ.
ಮಳೆಯ ಆರ್ಭಟಕ್ಕೆ ಬೆಳೆ, ಮನೆ, ಶಾಲೆಗೆ ಹಾನಿ: ಕುಂದಾಪುರ ತಾಲೂಕಿನ ಬಸ್ರೂರು ಗ್ರಾಮದ ಕೊಳ್ಕೆರೆ ಎಂಬಲ್ಲಿ ಸರ್ಕಾರಿ ಶಾಲೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಆದರೆ, ಇದರಿಂದ ಯಾರಿಗೂ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ. ಕುಂದಾಪುರ ಹರ್ಕೂರಿನ ಸಂತೋಷ್ ಶೆಟ್ಟಿ ಹಾಗೂ ಬೈಂದೂರು ಕಾಲ್ತೋಡಿನ ವಿನೋದ ಎಸ್.ಶೆಟ್ಟಿ ಅವರ ತೋಟಗಾರಿಕಾ ಬೆಳೆಗಳಿಗೆ ಸಾಕಷ್ಟು ಹಾನಿಯಾಗಿದೆ. ಒಟ್ಟು 40 ಸಾವಿರ ನಷ್ಟದ ಅಂದಾಜು ಮಾಡಲಾಗಿದೆ. ಇನ್ನು ಕುಂದಾಪುರ ತಾಲೂಕು ಬೇಳೂರಿನ ಪ್ರಕಾಶ್ ಶೆಟ್ಟಿ ಹಾಗೂ ಹೊಸಂಗಡಿಯ ಸುಬ್ರಾಯ ಭಂಡಾರಿ ಇವರ ಜಾನುವಾರು ಕೊಟ್ಟಿಗೆ ಮಳೆ ಯಿಂದ ಭಾಗಶಃ ಹಾನಿಗೊಳಗಾಗಿದೆ. ಇದನ್ನು ಹೊರತು ಪಡಿಸಿ ಜಿಲ್ಲೆಯಲ್ಲಿ ಮನೆ ಹಾನಿಯ 33 ಪ್ರಕರಣಗಳು ವರದಿಯಾಗಿವೆ. ಇದರಿಂದ 35ರಿಂದ 40 ಲಕ್ಷ ರೂ.ನಗಳಷ್ಟು ನಷ್ಟದ ಅಂದಾಜು ಮಾಡಲಾಗಿದೆ.
ಮೆಸ್ಕಾಂ, ಅಗ್ನಿಶಾಮಕ ದಳ ಸಿಬ್ಬಂದಿಗಳ ಕಾರ್ಯ ವೈಖರಿಗೆ ವ್ಯಾಪಕ ಪ್ರಶಂಸೆ:ಮಳೆಯನ್ನು ಲೆಕ್ಕಿಸದೇ ನೆರೆಪೀಡಿತ ಪ್ರದೇಶಗಳಲ್ಲಿ ಮರದ ಕೊಂಬೆಗಳನ್ನು ತೆರವು ಮಾಡಲು ಹಾಗೂ ರಸ್ತೆಯಲ್ಲಿ ಬಿದ್ದ ಮರಗಳನ್ನು ತೆಗೆಯುವಲ್ಲಿ ಸಹಕರಿಸುತ್ತಿರುವ ಮೆಸ್ಕಾಂ ಸಿಬ್ಬಂದಿ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಜೊತೆಗೆ ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವಲ್ಲಿ ಸಹಾಯ ಮಾಡುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು, ಬೆಳೆ ನಾಶ: ಉಡುಪಿ ಜಿಲ್ಲೆಯಲ್ಲಿ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ನದಿಗಳಾದ ಸೌಪರ್ಣಿಕಾ, ಕುಬ್ಜಾ, ಸೀತಾನದಿ, ಸುವರ್ಣಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ಕೃಷಿ ಭೂಮಿಗಳು ಮುಳುಗಡೆಯಾಗಿ ಅಪಾರ ಪ್ರಮಾಣದ ಭತ್ತ ಕೃಷಿ ನಾಶವಾಗಿದೆ. ಮಾತ್ರವಲ್ಲ ಮುಳುಗಡೆಯ ಭೀತಿಯಲ್ಲಿರುವ ಮಾಣೈ ಸೇತುವೆಯಲ್ಲಿ ನದಿಯ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಇದರಿಂದಾಗಿ ಶಿರೂರು ಮೂಲಮಠ - ಹಿರಿಯಡ್ಕ ರಸ್ತೆ ಸಂಪರ್ಕ ಕಡಿತವಾಗಿದೆ.