ಬೆಂಗಳೂರು:ಭೂ ಸ್ವಾಧೀನಕ್ಕೆ ಅಧಿಸೂಚನೆ ಪ್ರಕಟವಾಗುವ ಮುನ್ನ ಭೂ ಮಾಲೀಕರು ಬಡಾವಣೆ ನಕ್ಷೆಗೆ ಅನುಮತಿ ಕೋರಿದರೆ ಅಂತಹ ಅರ್ಜಿಗಳನ್ನು ಪ್ರಾಧಿಕಾರಗಳು ತಿರಸ್ಕರಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ.
ಭೂ ಸ್ವಾಧೀನಕ್ಕೂ ಮುನ್ನ ಬಡಾವಣೆಗೆ ನಕ್ಷೆ ಅನುಮತಿ ಕೋರಿದ್ದ ಕ್ರಮವನ್ನು ತಿರಸ್ಕರಿಸಿದ್ದ ಭೂ ಸ್ವಾಧೀನಾಧಿಕಾರಿ ಕ್ರಮವನ್ನು ರದ್ದುಪಡಿಸಿದ್ದ ಏಕ ಸದಸ್ಯ ಪೀಠದ ವಿರುದ್ಧ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ನ್ಯಾಯಮೂರ್ತಿ ಆರ್. ದೇವದಾಸ್ ಮತ್ತು ನ್ಯಾಯಮೂರ್ತಿ ಜಿ. ಬಸವರಾಜ ಅವರಿದ್ದ ವಿಭಾಗೀಯಪೀಠ ಈ ಆದೇಶ ಮಾಡಿದೆ.
ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ, ಮಹಾವೀರ್ ಒಸ್ವಾಲ್ ಅವರಿಗೆ ಬಡಾವಣೆ ನಕ್ಷೆ ಯೋಜನೆಗೆ ಅನುಮತಿ ನೀಡಬೇಕು ಎಂದು ಏಕ ಸದಸ್ಯಪೀಠದ ಆದೇಶವನ್ನು ವಿಭಾಗೀಯಪೀಠ ಎತ್ತಿಹಿಡಿದಿದೆ.
ಬಡಾವಣೆ ನಕ್ಷೆಯನ್ನು ಅನುಮತಿಯನ್ನು ನಿರಾಕರಿಸುವ ಹಕ್ಕು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಇರುತ್ತದೆ. ಆದರೆ ಬಡಾವಣೆ ಅಭಿವೃದ್ಧಿ ಯೋಜನೆಗಳ ಕುರಿತು ಅಧಿಸೂಚನೆಯನ್ನು ಪ್ರಾಧಿಕಾರ ಹೊರಡಿಸುವ ಮುನ್ನ ನಕ್ಷೆ ಅನುಮೋದನೆ ಕೋರಿರುವ ಅರ್ಜಿಗಳನ್ನು ತಿರಸ್ಕರಿಸುವಂತಿಲ್ಲ ಎಂದು ಹೇಳಿದೆ.
ಮೂಲ ಅರ್ಜಿದಾರರು ಬಡಾವಣೆ ನಿರ್ಮಾಣಕ್ಕೆ ನಕ್ಷೆ ಅನುಮೋದನೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ ಕರ್ನಾಟಕ ನಗರ ಮತ್ತು ಪಟ್ಟಣ ಯೋಜನಾ ಕಾಯಿದೆಯಡಿ ಪರಿಗಣಿಸಬೇಕಿತ್ತು. ಅದು ಬಿಟ್ಟು ಪ್ರಾಧಿಕಾರ 2010ರಲ್ಲಿ ಬಡಾವಣೆ ಅಭಿವೃದ್ಧಿಗಾಗಿ ಉದ್ದೇಶಿಸಲಾಗಿದ್ದು, ಅದೇ ಕಾರಣ ಮುಂದಿಟ್ಟುಕೊಂಡು ಅನುಮತಿ ನಿರಾಕರಿಸಿ ಹಿಂಬರಹ ನೀಡಬಾರದು ಎಂದು ನ್ಯಾಯಪೀಠ ಆದೇಶಿಸಿದೆ.
ಅಲ್ಲದೆ, ಭೂ ಸ್ವಾಧೀನಕ್ಕೆ ಕೇವಲ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದಾಗ ಸಹಜವಾಗಿಯೇ ಪ್ರಾಧಿಕಾರಕ್ಕೆ ಅನುಮತಿ ನಿರಾಕರಿಸಿರುವ ಹಕ್ಕು ಇರುತ್ತದೆ. ಆದರೆ ಅದಕ್ಕೆ ಸ್ವಾಧೀನ ಅಂತಿಮ ಅಧಿಸೂಚನೆ ಕಾನೂನು ಬದ್ಧವಾಗಿ ಹೊರಡಿಸಿರಬೇಕು. ಈ ಪ್ರಕರಣದಲ್ಲಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ ಮೇಲ್ಮನವಿ ಸಲ್ಲಿಸಬೇಕಿತ್ತು, ಆದರೆ, ಸರ್ಕಾರವೇ ಮೇಲ್ಮನವಿ ಸಲ್ಲಿಸಿರುವುದು ಆಶ್ಚರ್ಯ ಮೂಡಿದೆ ಎಂದು ನ್ಯಾಯಾಲಯ ಹೇಳಿದೆ.
ಜತೆಗೆ ಮೇಲ್ಮನವಿಯಲ್ಲಿ ಕೋರಲಾದ ಮನವಿಗಳು ಸ್ಪಷ್ಟವಾಗಿಲ್ಲ. ಒಂದು ವೇಳೆ ಭೂ ಸ್ವಾಧೀನ ಯೋಜನೆಯ ಅವಧಿ ಮುಗಿದು ಹೋಗಿದ್ದರೆ ಪ್ರಾಧಿಕಾರ ಹೊಸದಾಗಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಆರಂಭಿಸಬಹುದಿತ್ತು. ಆದರೆ ಹಳೆಯ ಅಧಿಸೂಚನೆ ಇಟ್ಟುಕೊಂಡು ಮುಂದುವರಿಯಲಾಗದು ಎಂದೂ ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ:ವಕ್ಪ್ ಆಸ್ತಿ ಗೊಂದಲ ನಿವಾರಣೆಗೆ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಲು ಸಿದ್ಧ: ಸಿಎಂ