ದಾವಣಗೆರೆ:ಎರಡನೇ ಹಂತದ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳ ನಡುವೆ ನೇರಾನೇರ ಸ್ಪರ್ಧೆ ಏರ್ಪಟ್ಟಿದೆ. ಈ ಬಾರಿಯೂ ಎರಡು ಪ್ರತಿಷ್ಠಿತ ಕುಟುಂಬಗಳ ನಡುವೆ ಚುನಾವಣೆ ನಡೆಯುತ್ತಿರುವುದರಿಂದ ಸಾಕಷ್ಟು ಕುತೂಹಲ ಮೂಡಿಸಿದೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ. ಪ್ರಭಾ ಮಲ್ಲಿಕಾರ್ಜುನ್, ಬಿಜೆಪಿ ಅಭ್ಯರ್ಥಿಯಾಗಿ ಗಾಯಿತ್ರಿ ಸಿದ್ದೇಶ್ವರ್ ಕಣದಲ್ಲಿದ್ದು ಭರ್ಜರಿ ಪ್ರಚಾರ ಕೂಡ ನಡೆಸಿದ್ದಾರೆ. ಬಿಜೆಪಿ ಭದ್ರಕೋಟೆಯಲ್ಲಿ ಮತ್ತೆ ಕಮಲ ಅರಳಿಸಲು ಗಾಯಿತ್ರಿ ಸಿದ್ದೇಶ್ವರ್ ತೀವ್ರ ಕಸರತ್ತು ನಡೆಸುತ್ತಿದ್ದರೆ, ಬಿಜೆಪಿ ಮಣಿಸಲು ಪ್ರಭಾ ಮಲ್ಲಿಕಾರ್ಜುನ್ ಕೂಡ ಕ್ಷೇತ್ರದಾಧ್ಯಂತ ಓಡಾಡುತ್ತಿದ್ದಾರೆ. ಬಿಜೆಪಿ ಮೋದಿ ಗ್ಯಾರಂಟಿ ನೆಚ್ಚಿಕೊಂಡಿದ್ದರೆ, ಕಾಂಗ್ರೆಸ್ ಐದು ಗ್ಯಾರಂಟಿ ನಂಬಿದೆ. ಮತದಾರರನ್ನು ತಮ್ಮತ್ತ ಸೆಳೆಯಲು ಅಭ್ಯರ್ಥಿಗಳು ನಾನಾ ರೀತಿಯ ತಂತ್ರ, ಪ್ರತಿತಂತ್ರಕ್ಕೆ ಮುಂದಾಗಿದ್ದಾರೆ. ಕಳೆದ ನಾಲ್ಕು ಚುನಾವಣೆಗಳಲ್ಲಿ ಸತತ ಗೆಲುವು ಸಾಧಿಸಿರುವ ಬಿಜೆಪಿ, ಈ ಚುನಾವಣೆಯಲ್ಲೂ ಮೋದಿ ಬಲದಿಂದ ಗೆಲುವಿನ ಕೇಕೆ ಹಾಕುವ ವಿಶ್ವಾಸದಲ್ಲಿದೆ. ಇನ್ನು ಕಾಂಗ್ರೆಸ್ ಈ ಬಾರಿ ಹೇಗಾದ್ರೂ ಮಾಡಿ ಬಿಜೆಪಿ ಕೈಯಿಂದ ಕ್ಷೇತ್ರವನ್ನು ವಶಕ್ಕೆ ಪಡೆದೇ ತೀರುತ್ತೇವೆ ಎನ್ನುವ ಧಾವಂತದಲ್ಲಿದ್ದು, ಐದು ಗ್ಯಾರಂಟಿಗಳು ಕೈ ಹಿಡಿಯುವ ನಂಬಿಕೆಯಲ್ಲಿದ್ದಾರೆ.
ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳಿಬ್ಬರು ಸಂಬಂಧದಲ್ಲಿ ತಾಯಿ-ಮಗಳು ಆಗಿದ್ದು, ತಾಯಿ-ಮಗಳ ನಡುವೆ ಈ ಚುನಾವಣೆ ಜಿದ್ದಾಜಿದ್ದಿಗೆ ಕಾರಣವಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವ ಜಿ.ಬಿ. ವಿನಯ್ ಕುಮಾರ್ ಕೂಡ ಇವರಿಬ್ಬರಿಗೂ ಪೈಪೋಟಿ ನೀಡುತ್ತಿದ್ದಾರೆ. ಮತದಾನಕ್ಕೆ ಕೆಲವು ದಿನ ಮಾತ್ರ ಉಳಿದಿದ್ದು ಮತಬೇಟೆ ಜೋರಾಗಿದೆ.
ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಿಯಾಂಕಾ ಗಾಂಧಿ, ಸಿಎಂ ಸಿದ್ದರಾಮಯ್ಯ ಆದಿಯಾಗಿ ಹಲವು ನಾಯಕರು ಕಣಕ್ಕಿಳಿದರೆ, ಬಿಜೆಪಿ ಅಭ್ಯರ್ಥಿ ಪರ ಶೋಭಾ ಕರಂದ್ಲಾಜೆ, ಯದುವೀರ್ ಒಡೆಯರ್, ಎಸ್. ಎ. ರವೀಂದ್ರನಾಥ್ ಆದಿಯಾಗಿ ಪ್ರಚಾರಕ್ಕಿಳಿದಿದ್ದಾರೆ. ಪ್ರಚಾರದ ವೇಳೆ ಉಭಯ ನಾಯಕರುಗಳ ಹೇಳಿಕೆಗಳು ಸಾಮಾನ್ಯವಾಗಿವೆ.