ಬೆಂಗಳೂರು: 7 ಐಪಿಎಸ್ ಅಧಿಕಾರಿಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶಿಸಿದೆ.
ಹುದ್ದೆಗಾಗಿ ಕಾಯುತ್ತಿದ್ದ ಶಾಂತನು ಸಿನ್ಹಾ ಅವರನ್ನು ಸಿಐಡಿ ವಿಭಾಗದ ಖಾಲಿ ಇದ್ದ ಡಿಐಜಿಪಿ ಹುದ್ದೆಗೆ ನೇಮಕ ಮಾಡಲಾಗಿದೆ. ಯಾದಗಿರಿಯ ಎಸ್ಪಿ ಜಿ.ಸಂಗೀತಾ (ಐಪಿಎಸ್) ಅವರನ್ನು ಅಪರಾಧ ತನಿಖಾ ಇಲಾಖೆಯ ಎಸ್ಪಿಯಾಗಿ ಹಾಗೂ ಅಪರಾಧ ತನಿಖಾ ಇಲಾಖೆಯ ಎಸ್ಪಿ ಪೃಥ್ವಿಕ್ ಶಂಕರ್(ಐಪಿಎಸ್) ಅವರನ್ನು ಯಾದಗಿರಿಯ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು ಸಿಟಿ ಕ್ರೈಂ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ಅವರನ್ನು, ಬಿಎಂಟಿಸಿ ಭದ್ರತಾ ಮತ್ತು ವಿಚಕ್ಷಣೆ ವಿಭಾಗದ ನಿರ್ದೇಶಕ ಐಎಎಸ್ ಅಧಿಕಾರಿ ಸದಾಶಿವ ಪ್ರಭು ಬಿ. ವರ್ಗಾವಣೆ ಹಿನ್ನೆಲೆಯಲ್ಲಿ ಆ ಜಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ರಾಜ್ಯ ಅಪರಾಧ ದಾಖಲೆ ಬ್ಯೂರೋದ ಎಸ್ಪಿ ಲಕ್ಷ್ಮಣ್ ನಿಂಬರಗಿ(ಐಪಿಎಸ್) ಅವರನ್ನು ಖಾಲಿಯಿದ್ದ ವಿಜಯಪುರ ಎಸ್ಪಿ ಹುದ್ದೆಗೆ ವರ್ಗಾವಣೆಗೊಳಿಸಲಾಗಿದೆ.