ಹುಬ್ಬಳ್ಳಿ:ಮೂರು ಸಾವಿರ ಮಠದ ಆವರಣದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ 12ನೇ ಒಣಮೆಣಸಿನಕಾಯಿ ಮೇಳಕ್ಕೆ ಮೊದಲ ದಿನವೇ ಕಳೆಗಟ್ಟಿತ್ತು. ಮೊದಲ ದಿನದ ಒಣ ಮೆಣಸಿನಕಾಯಿ ಮೇಳಕ್ಕೆ ಇಂದು ಸಚಿವ ಸಂತೋಷ ಲಾಡ್ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಅವರು ವಿದ್ಯುಕ್ತ ಚಾಲನೆ ನೀಡಿದರು.
ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ತೋಟಗಾರಿಕೆ ಇಲಾಖೆ, ಹುಬ್ಬಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಸಂಶಿಯ ಅಮರಶಿವ ರೈತ ಉತ್ಪಾದಕ ಸಂಸ್ಥೆ ಹಾಗೂ ಅಮರಗೋಳದ ಉಳುವ ಯೋಗಿ ರೈತ ಉತ್ಪಾದಕ ಸಂಸ್ಥೆ ಸಹಯೋಗದಲ್ಲಿ ಮೇಳ ಆಯೋಜಿಸಿದ್ದು, ಮೇಳದಲ್ಲಿ ವಿವಿಧ ಜಿಲ್ಲೆ ಸೇರಿದಂತೆ ಅವಳಿ ನಗರದ ಅಪಾರ ಜನರು ಭಾಗವಹಿಸಿದ್ದರು.
ವಿವಿಧ ತಳಿ ಒಣಮೆಣಸಿನಕಾಯಿ ಪ್ರದರ್ಶನ:ಕುಂದಗೋಳ, ಬ್ಯಾಡಗಿ ಭಾಗದಲ್ಲಿ ಹೆಚ್ಚು ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಯಲ್ಲಿ ಬೆಳೆದ ಮೆಣಸಿನಕಾಯಿಗೆ ದೇಶಾದ್ಯಂತ ಅಪಾರ ಬೇಡಿಕೆ ಇದೆ. ಈ ಭಾಗದ ಉತ್ಪನ್ನಗಳನ್ನು ದೇಶದ ಮೂಲೆ ಮೂಲೆಗೂ ತಲುಪಿಸುವ ಕೆಲಸವನ್ನು ಸಾಂಬಾರು ಮಂಡಳಿ ಮಾಡುತ್ತಿರುವುದು ವಿಶೇಷವಾಗಿದೆ. ಧಾರವಾಡ, ಹಾವೇರಿ, ಗದಗ ಸೇರಿದಂತೆ ಸುತ್ತಲಿನ ತಾಲೂಕುಗಳ ರೈತರು ಮೇಳದಲ್ಲಿ ಭಾಗವಹಿಸಿದ್ದು, ಸುಮಾರು ನೂರು ಮಳಿಗೆಗಳಲ್ಲಿ ವಿವಿಧ ತಳಿಯ ಒಣಮೆಣಸಿನ ಕಾಯಿ ಮಾರಾಟಕ್ಕೆ ತೆರೆಯಲಾಗಿತ್ತು.