ಪುತ್ತೂರು(ದಕ್ಷಿಣ ಕನ್ನಡ):ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಚಿತ್ರ 'ಕಾಂತಾರ'ದ ದೃಶ್ಯವೊಂದನ್ನು ನೆನಪಿಸುವ ಮತ್ತು ತುಳುನಾಡಿನ ದೈವಾರಾಧನೆಗೆ ಸಂಬಂಧಪಟ್ಟಂತೆ ಚಿತ್ರದಲ್ಲಿ ಮೂಡಿಬಂದ ಎಲ್ಲವೂ ವಾಸ್ತವಕ್ಕೆ ಅತ್ಯಂತ ಹತ್ತಿರವಿರುವ ಸಂಗತಿ. ಇದೀಗ ಅಂತಹದ್ದೇ ಒಂದು ಸನ್ನಿವೇಶ ರೂಪಿಸುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಇತ್ತೀಚೆಗೆ ಕೆಲವು ತಿಂಗಳ ಹಿಂದೆ ದೈವದ ನರ್ತನ ಮಾಡುತ್ತಿದ್ದ ಸಂದರ್ಭದಲ್ಲಿ ದೈವ ನರ್ತಕ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಎಲ್ಲೆಡೆ ಭಾರಿ ಸುದ್ಧಿ ಮಾಡಿತ್ತು. ಈ ರೀತಿಯ ಅವಘಡ ದೈವಾರಾಧನೆ ನಡೆಯುತ್ತಿರುವ ಸಂದರ್ಭದಲ್ಲಿ ನಡೆದಾಗ ಸಾಮಾನ್ಯವಾಗಿ ಎಲ್ಲರ ಕುತೂಹಲಕ್ಕೂ ಕಾರಣವಾಗುತ್ತದೆ. ಕಡಬ ತಾಲೂಕಿನ ಎಡಮಂಗಲದ ಶಿರಾಡಿ ದೈವಸ್ಥಾನಕ್ಕೆ ಸಂಬಂಧಪಟ್ಟ ದೈವ ನರ್ತಕ ಕಾಂತು ಅಜಿಲ ಅಕಾಲಿಕ ಸಾವನ್ನಪ್ಪಿದ ಬಳಿಕ ಆ ಗ್ರಾಮದ ಜನ ದೈವದ ನರ್ತಕನ ಹುಡುಕಾಟದಲ್ಲಿ ತೊಡಗಿದ್ದರು. ದೈವಜ್ಞರ ಪ್ರಶ್ನೆಯಲ್ಲಿ ಕಂಡುಬಂದಂತೆ ಕಾಂತು ಅಜಿಲರ ಮಕ್ಕಳಾದ ಮೋನಪ್ಪ ಮತ್ತು ದಿನೇಶ್ರನ್ನು ಮುಂದಿನ ದೈವ ನರ್ತಕರನ್ನಾಗಿ ನೇಮಿಸಲಾಯಿತು.
ಈ ನೇಮಕ ಪ್ರಕ್ರಿಯೆಯ ಹಿಂದೆ ದೈವಾರಾಧನೆಯ ಎಲ್ಲಾ ಕಟ್ಟುಪಾಡುಗಳು ಅನ್ವಯವಾಗುತ್ತಿದ್ದು, ಶಿರಾಡಿ ದೈವದ ಒಪ್ಪಿಗೆಯನ್ನೂ ಪಡೆಯಲಾಗಿತ್ತು. ಶಿರಾಡಿ ದೈವದ ನೇಮೋತ್ಸವದ ದಿನ ಇಬ್ಬರೂ ಯುವಕರನ್ನು ದೈವದ ಮುಂದೆ ನಿಲ್ಲಿಸಿ, ದೈವ ಇಬ್ಬರಿಗೂ ಯಾವ ರೀತಿಯಲ್ಲಿ ದೈವದ ಸೇವೆಯನ್ನು ಮಾಡಬೇಕು ಅನ್ನೋದನ್ನು ಸವಿವರವಾಗಿ ತಿಳಿಸುವ ಪ್ರಕ್ರಿಯೆ ನಿಜಕ್ಕೂ ರೋಮಾಂಚನಕಾರಿಯಾಗಿತ್ತು.