ಕಾರವಾರ (ಉತ್ತರ ಕನ್ನಡ): "ಸೈಬರ್ ಹಾಗೂ ಇನ್ನಿತರ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನದ ಜೊತೆಗೆ ಉತ್ತಮ ತರಬೇತಿಗಳನ್ನು ಪೊಲೀಸ್ ಇಲಾಖೆ ಸಿಬ್ಬಂದಿ, ಅಧಿಕಾರಿಗಳಿಗೆ ನೀಡಲಾಗಿದೆ" ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.
ನಗರದ ಎಸ್ಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಶನಿವಾರ ಮಾತನಾಡಿದ ಅವರು ಪೊಲೀಸರಿಗೆ ತರಬೇತಿ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬದಲಾವಣೆ ಮಾಡಲಾಗಿದೆ. ತಂತ್ರಜ್ಞಾನಗಳ ಬಗ್ಗೆಯೂ ತರಬೇತಿ ನೀಡಲಾಗುತ್ತಿದೆ. ಈಗ ಹೊಸ ಹೊಸ ಅಪರಾಧಗಳು ನಡೆಯುತ್ತಿವೆ. ಮೊದಲು ದರೋಡೆ ಪ್ರಕರಣಗಳು ಹೆಚ್ಚು ಆಗುತ್ತಿದ್ದವು. ಈಗ ಅಪರಾಧಗಳ ಸ್ವರೂಪ ಬದಲಾಗಿದೆ. ದೇಶದ ಯಾವುದೇ ಮೂಲೆಯಲ್ಲಿ ಕುಳಿತು ಮೋಸ ಮಾಡಬಹುದು. ಸೈಬರ್ ಮೂಲಕ ಅನೇಕ ರೀತಿಯ ವಂಚನೆಗಳು ನಡೆಯುತ್ತಿವೆ ಎಂದರು.
ವಂಚಕರು ಅಪರಾಧ ಮಾಡುವ ವಿಧಾನಗಳನ್ನು ಬದಲಾವಣೆ ಮಾಡಿಕೊಳ್ಳುತ್ತಾ ಹೊಸ ಮಾರ್ಗಗಳನ್ನು ಹುಡುಕಿಕೊಳ್ಳುತ್ತಿದ್ದಾರೆ. ಪೊಲೀಸ್ ಇಲಾಖೆಯ ಕಚೇರಿಯ ಸಂಖ್ಯೆಯಿಂದಲೇ ವಿಪಿಎನ್ ತಂತ್ರಜ್ಞಾನ ಬಳಕೆ ಮಾಡಿ ಕರೆ ಮಾಡಿ ವಂಚನೆ ಮಾಡುತ್ತಿರುವ ಪ್ರಕರಣಗಳು ಕಂಡು ಬರುತ್ತಿವೆ. ಇದರಿಂದ ಜನರು ಭೀತಿಗೆ ಒಳಗಾಗುತ್ತಿದ್ದಾರೆ. ಜನರು ಜಾಗೃತರಾಗಬೇಕು. ಹೊಸ ತಂತ್ರಜ್ಞಾನಗಳನ್ನು ವಂಚಕರು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಎಡಿಜಿಪಿ ತಿಳಿಸಿದರು.
ಒಂದು ವರ್ಷ ತರಬೇತಿ; ಸೈಬರ್ ವಂಚನೆ, ಮಹಿಳೆಯರಿಗೆ ಸಂಬಂಧಪಟ್ಟ ಅಪರಾಧ, ಪೋಕ್ಸೊ, ಎಐ ಬಳಕೆ, ಡ್ರೋನ್ ಬಳಕೆ ಮಾಡಿ ದುಷ್ಕೃತ್ಯ, ಆರ್ಥಿಕ ಅಪರಾಧ, ಮಾದಕ ವಸ್ತುಗಳ ಬಗ್ಗೆ ಹೆಚ್ಚಿನ ಅಪರಾಧಗಳು ನಡೆಯುತ್ತಿವೆ. ಈ ಬಗ್ಗೆ ಪೊಲೀಸ್ ಇಲಾಖೆಗೂ ತರಬೇತಿ ನೀಡಲಾಗುತ್ತಿದೆ. ಪೊಲೀಸ್ ತರಬೇತಿಯಲ್ಲಿ ಸಾಕಷ್ಟು ಹೊಸತನ ತರಲಾಗಿದೆ. ಜರ್ಮನ್ ತಂತ್ರಜ್ಞಾನದ ಸಂದರ್ಭ ಆಧಾರಿತ ತರಬೇತಿ ಕೋರ್ಸ್ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ನೀಡಲಾಗುತ್ತಿದೆ. ಅಲ್ಲದೆ ತರಬೇತಿಯ ಅವಧಿಯನ್ನು ಒಂದು ವರ್ಷ ಮಾಡಲಾಗಿದೆ. ಬಡ್ತಿ ಹೊಂದಿದವರು ಕಡ್ಡಾಯವಾಗಿ ತರಬೇತಿ ಪಡೆಯುವಂತೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಸಕ್ತ ವರ್ಷದಿಂದ ಸ್ಯಾಂಡ್‌ವಿಚ್ ಕೋರ್ಸ್ ಜಾರಿಗೆ ತರಲಾಗಿದೆ. ಇದರಲ್ಲಿ ಐದು ತಿಂಗಳ ತರಬೇತಿ ನಂತರ ಅಭ್ಯರ್ಥಿಗಳಿಗೆ ಮಧ್ಯಂತರ ಪರೀಕ್ಷೆ ಮತ್ತು ವಾಸ್ತವ ಪ್ರಯೋಗ ನಡೆಸಲಾಗುತ್ತದೆ. ಕಾನ್‌ಸ್ಟೆಬಲ್‌ಗಳಿಗೆ ಈ ವರ್ಷದಿಂದಲೇ ಈ ಕೋರ್ಸ್ ಅಡಿ ತರಬೇತಿ ನೀಡಲಾಗುತ್ತಿದೆ. ಪೊಲೀಸರಿಗೆ ತರಬೇತಿ ನೀಡಲು ಇನ್ಫೋಸಿಸ್ ಸಹಾಯದೊಂದಿಗೆ ಸೈಬರ್ ಲ್ಯಾಬ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಸೈಬರ್ ಕಳ್ಳರು ಪೊಲೀಸರಿಗಿಂತ ಹೆಚ್ಚಾಗಿ ಸೈಬರ್ ಅಪರಾಧದಲ್ಲಿ ಸಂಶೋಧನೆ ಹೆಚ್ಚಿನ ಪ್ರಮಾಣದಲ್ಲಿ ಮಾಡುತ್ತಿರುವುದರಿಂದ ವಂಚಕರು ಒಂದು ಹೆಜ್ಜೆ ಮುಂದಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಈಗಾಗಲೇ ಒಂದು ಸೈಬರ್ ಲ್ಯಾಬ್ ಮಂಜೂರಾಗಿದೆ. ಬೆಂಗಳೂರಿನಿಂದ ಹೊರಗಡೆ ಇರುವ ಮೊದಲ ಸೈಬರ್ ಲ್ಯಾಬ್ ಇದಾಗಲಿದೆ ಎಂದು ತಿಳಿಸಿದರು.