ಶಿವಮೊಗ್ಗ: ಹಾವೇರಿ ಬಳಿ ನಡೆದಿದ್ದ ಭೀಕರ ಅಪಘಾತದಲ್ಲಿ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದ 13 ಜನ ಮೃತಪಟ್ಟಿದ್ದರು. ಮೃತರ ಕುಟುಂಬಸ್ಥರಿಗೆ ವೈಯಕ್ತಿಕವಾಗಿ ತಲಾ ಒಂದು ಲಕ್ಷ ಪರಿಹಾರ ನೀಡುವುದಾಗಿ ನಟ ಶಿವರಾಜ್ಕುಮಾರ್ ದಂಪತಿ ಘೋಷಿಸಿದ್ದರು. ಅದರಂತೆ ಇಂದು ನಟ ಶಿವರಾಜ್ಕುಮಾರ್ ಹಾಗೂ ಗೀತಾ ಶಿವರಾಜ್ಕುಮಾರ್ ಎಮ್ಮೆಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಮೃತರ ಕುಟುಂಬಸ್ಥರೆಲ್ಲರಿಗೂ ಸೇರಿ 10 ಲಕ್ಷ ಹಾಗೂ ಗಾಯಾಳುಗಳಿಬ್ಬರಿಗೆ ತಲಾ 1.50 ಲಕ್ಷ ಪರಿಹಾರ ನೀಡಿದರು.
ಗೀತಾ ಶಿವರಾಜ್ಕುಮಾರ್ ಮಾತನಾಡಿ, ಈ ರೀತಿಯ ದುರ್ಘಟನೆ ಕಂಡು ಬೇಸರವಾಯಿತು. ಆ ಕುಟುಂಬದವರಿಗೆ ಆಗಿರುವ ನಷ್ಟವನ್ನು ತುಂಬಲು ನಮಗೆ ಆಗುವುದಿಲ್ಲ. ಆ ಕುಟುಂಬಕ್ಕೆ ನಾವು ಧೈರ್ಯ ಹೇಳಲು ಬಂದಿದ್ದೇವೆ. ನಾನು, ಶಿವರಾಜ್ಕುಮಾರ್ ಹಾಗೂ ಸಹೋದರ ಮಧು ಹಾಗೂ ನಮ್ಮ ಪಕ್ಷದವರು ಮುಂದೆಯೂ ಸಹ ಮೃತರ ಕುಟುಂಬಸ್ಥರಿಗೆ ಸಹಾಯ ಮಾಡುತ್ತೇವೆ. ಅವರೊಂದಿಗೆ ಮುಂದೆಯೂ ನಾವು ಇರುತ್ತೇವೆ. ಅಪಘಾತದಲ್ಲಿ ಗಾಯಗೊಂಡಿರುವ ಅರ್ಪಿತಾ ಅವರ ಜವಾಬ್ದಾರಿಯನ್ನು ಆಕೆಯ ದೊಡ್ಡಮ್ಮ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಅರ್ಪಿತಾಗೂ ಸಹಾಯ ಮಾಡುತ್ತೇವೆ ಎಂದು ಭರವಸೆ ನೀಡಿದರು.