ಮೈಸೂರು: ''ಆಡಳಿತ ಪಕ್ಷ ಅವರದ್ದೇ ಇರುವುದರಿಂದ ಕಾಂಗ್ರೆಸ್ ಗೆದ್ದಿದೆ. ಯಾವಾಗಲೂ ಕೂಡ ಆಡಳಿತ ಪಕ್ಷ ಉಪ ಚುನಾವಣೆ ಗೆಲ್ಲುವುದು ಸಹಜ'' ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶನಿವಾರ ಮೈಸೂರಿನ ಜಿಲ್ಲಾ ಪಂಚಾಯಿತಿ ಬಳಿ ಉಪಚುನಾವಣೆ ಫಲಿತಾಂಶದ ಕುರಿತು ಮಾಧ್ಯಮದವರ ಜೊತೆ ಮಾತನಾಡಿದ ಜಿಟಿಡಿ, ''ನಾನು ಚನ್ನಪಟ್ಟಣದಲ್ಲಿ ಪ್ರಚಾರಕ್ಕೆ ನಾನು ಹೋಗಿಲ್ಲ. ನನ್ನ ಮಗ ಹರೀಶ್ ಗೌಡ, ಎಂಎಲ್ಸಿ ವಿವೇಕಾನಂದ ಹೋಗಿದ್ದರು. ಗೆಲ್ಲುತ್ತೇವೆ ಎಂದು ಅವರೆಲ್ಲರೂ ವಿಶ್ವಾಸ ವ್ಯಕ್ತಪಡಿಸಿದ್ದರು. ಅದರೂ ಕೂಡ ಸೋಲಾಗಿದೆ. ಪ್ರಜಾಪ್ರಭುತ್ವದಲ್ಲಿ ಸೋಲು, ಗೆಲುವು ಸಹಜ. ನಿಖಿಲ್ ಗೆಲ್ಲಬೇಕಿತ್ತು, ಅದರೆ ಮೂರನೇ ಬಾರಿಗೆ ಸೋತಿದ್ದಾರೆ. ಆದರೂ ಧೈರ್ಯವಾಗಿ ಈ ಮೂರನೇ ಸೋಲು ನಿಖಿಲ್ ಎದುರಿಸಬೇಕು. ಜನತಾದಳ ಪಕ್ಷವನ್ನು ಕಟ್ಟಬೇಕು. ಹೀಗೆ ಸೋತ ಅನೇಕರು ಮತ್ತೆ ಗೆದ್ದು, ಮಂತ್ರಿಗಳು, ನಾಯಕರಾಗಿದ್ದಾರೆ'' ಎಂದು ತಿಳಿಸಿದರು.
ಈ ಹಿಂದೆ ಕಾಂಗ್ರೆಸ್ಗೆ ಕರೆದಿರುವುದು ನಿಜ:ನೀವು ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ, ''ಸಿದ್ದರಾಮಯ್ಯ ನನ್ನ ಜೊತೆ ಮಾತನಾಡಿಲ್ಲ. ಪಕ್ಷಕ್ಕೆ ಬರುವಂತೆ ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಕರೆದಿರುವುದು ನಿಜ. ಚಾಮುಂಡಿ ಬೆಟ್ಟದಲ್ಲಿ ವೇದಿಕೆ ಹಂಚಿಕೊಂಡಿದ್ದು ಬಿಟ್ಟರೆ, ನಾನು ಅವರು ಮಾತನಾಡಿಲ್ಲ. ಈಗ ಆ ರೀತಿಯ ಯಾವುದೇ ಚರ್ಚೆ ಇಲ್ಲ'' ಎಂದರು.