ಬೆಂಗಳೂರು:ಜನಸಾಮಾನ್ಯರ ಮೇಲೆ ಕಾಳಜಿ ಇದ್ದರೆ, ಬಿಜೆಪಿಯವರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕಾಗಿತ್ತು ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
ಬಿಜೆಪಿ, ಜೆಡಿಎಸ್ ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಪ್ರತಿಭಟನೆ ಮಾಡುತ್ತಿದ್ದಾರೆ. ಪೆಟ್ರೋಲ್ ಹಾಗೂ ಡಿಸೇಲ್ ದರ ತಲಾ 3 ರೂ. ಏರಿಕೆ ಮಾಡಲಾಗಿದೆ. ಇವರು ಪ್ರತಿಭಟನೆ ಮಾಡಬೇಕಾಗಿರುವುದು ಕೇಂದ್ರ ಸರ್ಕಾರದ ವಿರುದ್ಧ. ಮೋದಿ ಪ್ರಧಾನಿ ಆದ ಮೇಲೆ ಬೆಲೆ ಕಡಿಮೆ ಮಾಡುತ್ತೇನೆ ಅಂದಿದ್ದರು. ಆದರೆ, ಅದಕ್ಕೆ ತದ್ವಿರುದ್ಧವಾಗಿ ಮೋದಿ ನಡೆದುಕೊಂಡಿದ್ದಾರೆ. ಅವರು ಪ್ರಧಾನಿ ಆದಾಗ ಪೆಟ್ರೋಲ್ ಬೆಲೆ 72.26 ರೂ. ಇತ್ತು. ಅದು ಜೂನ್ 2024ರಲ್ಲಿ 104 ರೂ. ಆಯಿತು. ಈಗ ಅದು ಸ್ವಲ್ಪ ಕಡಿಮೆ ಆಗಿದೆ. 57.28 ರೂ. ಇದ್ದ ಡಿಸೇಲ್ ಬೆಲೆಯನ್ನು 98.25 ರೂ. ಮಾಡಿದರು ಎಂದು ವಾಗ್ದಾಳಿ ನಡೆಸಿದರು.
ಮನಮೋಹನ್ ಸಿಂಗ್ ಅವರು ಪ್ರಧಾನಿ ಇದ್ದಾಗ ಕಚ್ಚಾ ತೈಲ ಬೆಲೆ ಬ್ಯಾರೆಲ್ಗೆ 113 ಡಾಲರ್ ಇತ್ತು. ಈಗ 82.35 ಡಾಲರ್ ಇದೆ. 2015ರಲ್ಲಿ 50 ಡಾಲರ್ ಇತ್ತು. ಮೋದಿ ಕಾಲದಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾದಾಗ, ಪೆಟ್ರೋಲ್ ದರ ಜಾಸ್ತಿ ಆಗಿದೆ. ಬಿಜೆಪಿಯವರು ಜನಸಾಮಾನ್ಯರ ಮೇಲೆ ಕಾಳಜಿ ಇದ್ದರೆ ಯಾರ ವಿರುದ್ಧ ಪ್ರತಿಭಟನೆ ಮಾಡಬೇಕು? ಕೇಂದ್ರ ಸರ್ಕಾರ ಜಿಎಸ್ಟಿ ತಂದ ಮೇಲೆ ರಾಜ್ಯ ಸರ್ಕಾರಕ್ಕೆ ತೆರಿಗೆ ಮೇಲಿನ ನಿಯಂತ್ರಣ ಕಡಿಮೆ ಆಗಿದೆ. ನಮಗೆ ಅದರಲ್ಲಿ ರಾಜ್ಯದ ಪಾಲು ಕಡಿಮೆ ಕೊಡುತ್ತಾರೆ. 2014ರಿಂದ 2015ನೇ ಹಣಕಾಸು ಆಯೋಗದವರೆಗೆ ರಾಜ್ಯಕ್ಕೆ 1.83 ಲಕ್ಷ ಕೋಟಿ ರೂ.ನಷ್ಟ ಆಗಿದೆ. ನಮ್ಮ ತೆರಿಗೆ ಪಾಲು ಕಡಿಮೆಯಾಗಿದೆ ಎಂದು ದೂರಿದರು.
ರಾಜ್ಯಕ್ಕೆ 5,495 ಕೋಟಿ ರೂ. ವಿಶೇಷ ಅನುದಾನ ಕೊಡಬೇಕು ಎಂದು ಹಣಕಾಸು ಆಯೋಗ ಹೇಳಿತ್ತು. ಅದರ ಬಗ್ಗೆ ಬಿಜೆಪಿಯವರು ಏನೂ ಮಾತನಾಡಿಲ್ಲ. ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಾದಾಗ ಮಾತನಾಡಿಲ್ಲ. ಕರ್ನಾಟಕ ಸರ್ಕಾರ ಈಗ ಪಾಪರ್ ಆಗಿದೆ ಅಂತಾರೆ. ಅದರ ಅರ್ಥ ಅಶೋಕ್ಗೆ ಗೊತ್ತಾ?. ನಾವು ಯಾವುದಾದರೂ ಸಂಬಳ ನಿಲ್ಲಿಸಿದ್ದೇವಾ?. ಬಜೆಟ್ನಲ್ಲಿ ಘೋಷಿಸಿದ ಹಣ ಕೊಡುವುದನ್ನು ನಿಲ್ಲಿಸಿದ್ದೇವಾ? 2014ರಲ್ಲಿ ಪೆಟ್ರೋಲ್ ಮೇಲೆ ಸೆಂಟ್ರಲ್ ಸೆಸ್ 9.48 ರೂ. ಇತ್ತು. ಮೇ 2020ಕ್ಕೆ ಅದು 32.98 ರೂ.ಗೆ ಏರಿಕೆ ಆಯಿತು. ಆಗ ಪ್ರತಿಭಟನೆ ಮಾಡಿದರಾ? ಆಗ ಜನಸಾಮಾನ್ಯರಿಗೆ ಹೊರೆ ಆಗಿಲ್ಲವಾ? ಎಂದು ಸಿಎಂ ಪ್ರಶ್ನಿಸಿದರು.