ಕರ್ನಾಟಕ

karnataka

ETV Bharat / state

ರಾಜ್ಯದ ಸರ್ಕಾರಿ ಪಿಯು ವಿದ್ಯಾರ್ಥಿಗಳಿಗೆ ಉಚಿತ ನೀಟ್​, ಜೆಇಇ, ಸಿಇಟಿ ಕೋಚಿಂಗ್ ಆರಂಭ - FREE ONLINE COACHING CLASS

ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ವಿಭಾಗದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ನೆರವಾಗಲು ನೀಟ್​/ಜೆಇಇ/ಸಿಇಟಿ ಆನ್​ಲೈನ್ ಕೋಚಿಂಗ್ ತರಗತಿಗಳಿಗೆ ಚಾಲನೆ ನೀಡಲಾಗಿದೆ.

COACHING FOR PUC STUDENTS
ಉಚಿತ ನೀಟ್​, ಜೆಇಇ, ಸಿಇಟಿ ಕೋಚಿಂಗ್ ಆರಂಭ (ETV Bharat)

By ETV Bharat Karnataka Team

Published : Nov 20, 2024, 1:29 PM IST

ಬೆಂಗಳೂರು:ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ 'ಉಚಿತ NEET/JEE/CET ಆನ್​ಲೈನ್ ಕೋಚಿಂಗ್ ತರಗತಿ' ಆರಂಭಿಸಲಾಗಿದೆ.

ವಿಧಾನಸೌಧದಲ್ಲಿ ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು, ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನೀಟ್​/ಜೆಇಇ/ಸಿಇಟಿ ಆನ್​ಲೈನ್ ಕೋಚಿಂಗ್ ತರಗತಿಗಳಿಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಸಚಿವರು, ''2024-25ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಲಾದ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಗಿದೆ. ತರಬೇತಿಗೆ ಪದವಿಪೂರ್ವ ಕಾಲೇಜಿನ 20,000 ವಿದ್ಯಾರ್ಥಿಗಳು ಹಾಗೂ ಆದರ್ಶ ಕಾಲೇಜಿನ 5,000 ವಿದ್ಯಾರ್ಥಿಗಳು ಸೇರಿ ಒಟ್ಟು 25 ಸಾವಿರ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ'' ಎಂದು ಹೇಳಿದರು.

ಆನ್​ಲೈನ್ ಕೋಚಿಂಗ್ ತರಗತಿಗಳಿಗೆ ಚಾಲನೆ (ETV Bharat)

''ಪದವಿ ಪೂರ್ವ ಶಿಕ್ಷಣ ಹಂತ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಬಹಳ ಪ್ರಮುಖ ಘಟ್ಟವಾಗಿದೆ. ಭವಿಷ್ಯದ ವೃತ್ತಿ ಆಯ್ಕೆಗೆ ಪೂರಕವಾದ ಶಿಕ್ಷಣ ಆಯ್ಕೆ ಮಾಡಲು ನೀಟ್​/ಜೆಇಇ/ಸಿಇಟಿ ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿ ಪಡೆಯುವುದು ಮುಖ್ಯ. ಆದ್ದರಿಂದ, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಆತಂಕವೂ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಪೋಷಕರು ಖಾಸಗಿ ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ದಾಖಲು ಮಾಡುತ್ತಾರೆ. ಅಲ್ಲಿ ನಿಗದಿತ ತರಗತಿ ಚಟುವಟಿಕೆಗಳೊಂದಿಗೆ ವೃತ್ತಿಪರ ಕೋರ್ಸ್​​ಗಳಿಗೆ ಪ್ರವೇಶ ಪಡೆಯಲು ನೀಟ್​/ಜೆಇಇ/ಸಿಇಟಿ ಪ್ರವೇಶ ಪರೀಕ್ಷೆಗೂ ಸಹ ತರಬೇತಿ ನಡೆಸಲಾಗುತ್ತದೆ ಎಂಬುದು ಅದಕ್ಕೆ ಕಾರಣ'' ಎಂದರು.

''ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿಜ್ಞಾನ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೂ ನೀಟ್​/ಜೆಇಇ/ಸಿಇಟಿ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ಸಿಗಬೇಕು ಎಂಬುದು ನಮ್ಮ ಸರ್ಕಾರದ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಪಿಯು ಕಾಲೇಜುಗಳ ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಉನ್ನತ ಶಿಕ್ಷಣ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿಯನ್ನು ಉಚಿತವಾಗಿ ನೀಡಲು ಬಜೆಟ್​ನಲ್ಲಿ ಘೋಷಣೆ ಮಾಡಲಾಗಿತ್ತು'' ಎಂದು ಹೇಳಿದರು.

ಆನ್​ಲೈನ್ ಕೋಚಿಂಗ್ ತರಗತಿಗಳಿಗೆ ಚಾಲನೆ (ETV Bharat)

''ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಸಹ ಇತ್ತೀಚಿನ ದಿನಗಳಲ್ಲಿ ಉತ್ತಮ ಮೂಲಭೂತ ಸೌಕರ್ಯಗಳನ್ನು ಹೊಂದಿದ್ದು, ಶೈಕ್ಷಣಿಕ ಚಟುವಟಿಕೆಗಳು ಸಹ ಉನ್ನತ ಮಟ್ಟದಾಗಿದ್ದು ಹಾಗೂ ಹೆಚ್ಚಿನ ಸೌಕರ್ಯ ನೀಡಲಾಗಿದೆ. ಉತ್ತಮ ದಾಖಲಾತಿಯೊಂದಿಗೆ ಉತ್ತಮ ಫಲಿತಾಂಶವನ್ನು ಸಹ ನಿರೀಕ್ಷಿಸಬಹುದು'' ಎಂದು ತಿಳಿಸಿದರು.

ಕೋಚಿಂಗ್ ಕಾರ್ಯಕ್ರಮದ ಮುಖ್ಯಾಂಶಗಳು:

  • ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ಸಂಯೋಜನೆ ವಿದ್ಯಾರ್ಥಿಗಳಿಗೆ Online Live CET NEET/JEE ಪ್ರವೇಶ ಪರೀಕ್ಷೆಗಳ ತರಬೇತಿ ನೀಡಲಾಗುತ್ತದೆ.
  • ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ದಾಖಲಾಗುವ ವಿದ್ಯಾರ್ಥಿಗಳು ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಕುಟುಂಬದವರಾಗಿರುತ್ತಾರೆ. ಹಾಗೂ ಹೆಚ್ಚಿನ ವಿದ್ಯಾರ್ಥಿಗಳು ಗ್ರಾಮೀಣ ವಿಭಾಗದಿಂದಲೂ, ಅದರಲ್ಲೂ ಹೆಚ್ಚಾಗಿ ಬಾಲಕಿಯರು ದಾಖಲಾಗಿರುತ್ತಾರೆ. ಈ ವಿದ್ಯಾರ್ಥಿಗಳು ಪೋಷಕರ ಆರ್ಥಿಕ ತೊಂದರೆಯಿಂದಾಗಿ ವಿಶೇಷ ತರಬೇತಿಗಳನ್ನು ಖಾಸಗಿ ಸಂಸ್ಥೆಗಳಿಂದ ಪಡೆಯಲು ಸಾಧ್ಯವಾಗುವುದಿಲ್ಲ.
  • ಈ ಮೇಲ್ಕಂಡ ಅವಕಾಶ ವಂಚಿತ ವಿದ್ಯಾರ್ಥಿಗಳಿಗೆ ಸೂಕ್ತ ಅವಕಾಶವನ್ನು ಒದಗಿಸುವ ಪ್ರಯತ್ನ ಇದಾಗಿದೆ.
  • ಪ್ರವೇಶ ಪರೀಕ್ಷೆಗಳಿಗೆ ನೀಡುವ ತರಬೇತಿಯು ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ ಮೇಲೂ ಸಹ ಧನಾತ್ಮಕ ಪರಿಣಾಮ ಉಂಟುಮಾಡಲಿದೆ.
  • ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ ಒಂದೇ ವೇದಿಕೆಯಲ್ಲಿ ಕಲಿಕೆ ನೀಡುವ ಹಾಗೂ ಕಲಿಕೆ ಪರೀಕ್ಷಿಸುವ ಕೆಲಸವಾಗುತ್ತದೆ. ಟೆಸ್ಟ್ ಸೀರೀಸ್ ಅನ್ನು ಬರೆಸಿದಾಗ ವಿದ್ಯಾರ್ಥಿಗಳಲ್ಲಿ ಒಂದು ಆರೋಗ್ಯಕರ ಸ್ಪರ್ಧೆ ಏರ್ಪಡಲಿದೆ.
  • ಆಗಾಗ ಆನ್​ಲೈನ್​​ ತರಗತಿಗಳೊಂದಿಗೆ ಪ್ರೇರಣಾತ್ಮಕ ಕಾರ್ಯಕ್ರಮ (Motivational Sessions) ಹಾಗೂ ಸಾಧಕರೊಂದಿಗೆ ಸಂವಹನ (Interaction with Achievers) ನೀಡುವುದರಿಂದ ವಿದ್ಯಾರ್ಥಿಗಳು ಮತ್ತೊಮ್ಮೆ ಪ್ರೇರಣೆಗೆ ಒಳಗಾಗಲಿದ್ದಾರೆ.

ಫಲಾನುಭವಿಗಳು:ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ಸಂಯೋಜನೆಯಲ್ಲಿರುವ 25,000 ವಿದ್ಯಾರ್ಥಿಗಳು. ಈ ಪೈಕಿ ಆದರ್ಶ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಥಮ ಪಿಯುಸಿಯ 5,000 ವಿದ್ಯಾರ್ಥಿಗಳು, ಇತರೆ ಕಾಲೇಜುಗಳ ಪ್ರಥಮ ಪಿಯುಸಿಯ 10,000 ಹಾಗೂ ದ್ವಿತೀಯ ಪಿಯುಸಿಯ 10,000 ವಿದ್ಯಾರ್ಥಿಗಳು ಇದರ ಲಾಭವನ್ನು ಪಡೆಯಲಿದ್ದಾರೆ.

ಆನ್​ಲೈನ್ ಕೋಚಿಂಗ್ ತರಗತಿಗಳಿಗೆ ಚಾಲನೆ (ETV Bharat)

ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡುವ ಕಾರ್ಯಕ್ಕೆ ಈ ಕ್ಷೇತ್ರದಲ್ಲಿ ಉತ್ತಮ ಹೆಸರು ಮಾಡಿರುವ PACE ಸಂಸ್ಥೆ ಆಯ್ಕೆಯಾಗಿದೆ. ಆ ಸಂಸ್ಥೆಯಿಂದ ಮುಂದಿನ ಎರಡು ವರ್ಷಗಳಿಗೆ ಅಂದರೆ, ಪ್ರಸಕ್ತ ಹಾಗೂ ಮುಂದಿನ ವರ್ಷದಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆನ್​ಲೈನ್​ ಲೈವ್​ ನೀಟ್​/ಜೆಇಇ/ಸಿಇಟಿ ತರಗತಿಗಳನ್ನು ನಡೆಸಲು ಉದ್ದೇಶಿಸಲಾಗಿದೆ.

ತರಗತಿಗಳು ನಡೆಯುವ ವಿಧಾನ: ತರಗತಿಗಳ ಆರಂಭಕ್ಕೆ ಮುನ್ನ ಒಂದು ಗಂಟೆ ಹಾಗೂ ತರಗತಿಗಳು ಮುಗಿದ ನಂತರ ಒಂದು ಗಂಟೆ ಅವಧಿಯಲ್ಲಿ ತರಗತಿಗಳು ನೇರ ಪ್ರಸಾರವಾಗಲಿವೆ. ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳಿಗೆ ಪ್ರತ್ಯೇಕ ಕೊಠಡಿಗಳಲ್ಲಿ ತರಗತಿಗಳು ನಡೆಯುತ್ತವೆ. ಆದರ್ಶ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಹಾಗೂ ಉಳಿದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ 20,000 ವಿದ್ಯಾರ್ಥಿಗಳು ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ.

ಹಾಜರಾತಿ:ಪ್ರತಿದಿನ ಈ ವಿಶೇಷ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ಹಾಜರಾತಿಯನ್ನು Attendance APP ಮೂಲಕ ತೆಗೆದುಕೊಳ್ಳಲಾಗುತ್ತದೆ. ಪ್ರಾಂಶುಪಾಲರು ಹಾಗೂ ಸಂಬಂಧಿಸಿದ ವಿಷಯಗಳ ಖಚಿತಪಡಿಸಿಕೊಳ್ಳುತ್ತಾರೆ. ಉಪನ್ಯಾಸಕರು ವಿದ್ಯಾರ್ಥಿಗಳ ಹಾಜರಾತಿಯನ್ನು ಖಚಿತಪಡಿಸಿಕೊಳ್ಳುತ್ತಾರೆ.

ಕಿರುಪರೀಕ್ಷೆಗಳು: ನೋಂದಾಯಿತ 25,000 ವಿದ್ಯಾರ್ಥಿಗಳಿಗೆ ಕಿರುಪರೀಕ್ಷೆಗಳನ್ನು ನಡೆಸಿ ಅಂಕಗಳನ್ನು ನೀಡಲಾಗುತ್ತದೆ ಹಾಗೂ ರಾಂಕ್ ಲಿಸ್ಟ್ ಮಾಡಲಾಗುವುದು. (ಜಿಲ್ಲಾವಾರು ಹಾಗೂ ರಾಜ್ಯ ಹಂತದಲ್ಲಿ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ)

ಸಂದೇಹ ಪರಿಹಾರ ಅವಧಿಗಳು:ಪ್ರತಿ ಶನಿವಾರ ಸಂದೇಹ ಪರಿಹಾರಾತ್ಮಕ ಅವಧಿಗಳನ್ನು ನಡೆಸಲಾಗುವುದು. ಸೋಮವಾರದಿಂದ ಶುಕ್ರವಾರದವರೆಗಿನ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಬರುವ ಸಂದೇಹಗಳನ್ನು ಆಯಾ ವಿಷಯ ಉಪನ್ಯಾಸಕರು ಸಂಗ್ರಹಿಸಿ ಸಂಸ್ಥೆಯ ಪೋರ್ಟಲ್ ಮೂಲಕ ಕಳುಹಿಸುತ್ತಾರೆ. ಆ ಸಂದೇಹಗಳನ್ನು ಪರಿಗಣಿಸಿ ವಿಷಯ ತಜ್ಞರು ಪರಿಹಾರ ನೀಡಲಿದ್ದಾರೆ.

ತರಬೇತಿ ಅವಧಿ:ಕೋಚಿಂಗ್ ತರಗತಿಗಳು ಆರಂಭವಾದ ದಿನದಿಂದಲೂ ನಿರಂತರವಾಗಿ ನಡೆಯಲಿದೆ. ಸಂಸ್ಥೆಯ ಹಾಗೂ ಇಲಾಖೆಯ ಪೋರ್ಟಲ್ ನಲ್ಲಿ Recorded Edited Version ಲಭ್ಯವಿರಲಿದೆ. ಆ ರೆಕಾರ್ಡ್ ತರಗತಿಗಳನ್ನು ವಿದ್ಯಾರ್ಥಿಗಳು ತಮ್ಮ ಅನುಕೂಲ ಸಮಯದಲ್ಲಿ ಹಾಗೂ ಎಷ್ಟು ಬಾರಿಯಾದರೂ ಗಮನಿಸಬಹುದಾಗಿದೆ.

ಯೋಜನೆಯಿಂದ ಆಗಬಹುದಾದ ನಿರೀಕ್ಷಿತ ಪರಿಣಾಮಗಳು:

  • ನೀಟ್​/ಜೆಇಇ/ಸಿಇಟಿ ಪರೀಕ್ಷೆಗಾಗಿ ಖಾಸಗಿ ಕಾಲೇಜುಗಳಲ್ಲಿ ದೊರೆಯುತ್ತಿದ್ದ ಕೋಚಿಂಗ್ ಸೌಲಭ್ಯವು ಈಗ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೂ ಸಿಗಲಿದೆ. ಈ ಕಾರ್ಯಕ್ರಮದಿಂದಾಗಿ ಸರ್ಕಾರಿ ವಿದ್ಯಾರ್ಥಿಗಳು ಸಹ ಪ್ರವೇಶ ಪರೀಕ್ಷೆಗಳ ಬಗ್ಗೆ, ಧನಾತ್ಮಕ ಮನೋಭಾವ ಬೆಳೆಸಿಕೊಳ್ಳುತ್ತಾರೆ.
  • ಈ ಯೋಜನೆಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ಸಂಯೋಜನೆಗೆ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳವಾಗಲಿದೆ.
  • ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ದಾಖಲಾಗುವ ವಿದ್ಯಾರ್ಥಿಗಳು ಪ್ರಮುಖವಾಗಿ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ಹಿನ್ನೆಲೆ ಉಳ್ಳವರಾಗಿರುತ್ತಾರೆ. ಈ ಅವಕಾಶ ವಂಚಿತ ವಿದ್ಯಾರ್ಥಿಗಳಿಗೂ ಉನ್ನತ ಅವಕಾಶ ದೊರೆತು ಆ ವರ್ಗದ ವಿದ್ಯಾರ್ಥಿಗಳಿಗೆ ಸಾಮಾಜಿಕ ನ್ಯಾಯ ನೀಡಿದಂತಾಗಲಿದೆ.
  • ತಮ್ಮ ಮಕ್ಕಳಿಗೆ ಉನ್ನತ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣ ಕೊಡಿಸಬೇಕು ಎಂಬ ಒತ್ತಡದಲ್ಲಿ ಪೋಷಕರು ತಮ್ಮ ಶಕ್ತಿಮೀರಿ ಈ ಪ್ರವೇಶ ಪರೀಕ್ಷೆಗಳ ತರಬೇತಿಗಾಗಿ ಅಪಾರ ವೆಚ್ಚ ಮಾಡುತ್ತಿದ್ದಾರೆ. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ಸರ್ಕಾರವೇ ಉಚಿತ ತರಬೇತಿ ಕೊಡಿಸುವುದರಿಂದ ಪೋಷಕರಿಗೆ ನೆರವಾಗಲಿದೆ.
  • ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಈಗ ಉತ್ತಮ ಶೈಕ್ಷಣಿಕ ಸೌಲಭ್ಯಗಳಿವೆ. ಈಗ ಗುಣಮಟ್ಟದ ಶಿಕ್ಷಣವನ್ನೂ ಸಹ ಉಚಿತವಾಗಿ ನೀಡುವುದರಿಂದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ದಾಖಲಾತಿಯು ಹೆಚ್ಚಾಗಿ ಫಲಿತಾಂಶ ಉತ್ತಮವಾಗಲಿದೆ.

ಇದನ್ನೂ ಓದಿ:ಸರ್ಕಾರದ ಗುತ್ತಿಗೆ, ಟೆಂಡರ್​ಗಳಲ್ಲಿ ಮಧ್ಯಸ್ಥಿಕೆ ಕಲಂ ರದ್ದುಗೊಳಿಸಲು ನಿರ್ಧಾರ: ಹೆಚ್.ಕೆ.ಪಾಟೀಲ್

ABOUT THE AUTHOR

...view details