ಆಸ್ಪತ್ರೆಯಲ್ಲಿಯೇ ನೆರವೇರಿದ ನಾಮಕರಣ ಕಾರ್ಯ ವಿಜಯಪುರ :ದೇಶಾದ್ಯಂತ ಭಕ್ತರಿಂದ ಶ್ರೀರಾಮನ ಜಪ ನಡೆಯುತ್ತಿದೆ. ಅಯೋಧ್ಯಾ ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನಾ ಸಮಾರಂಭದ ಸಂಭ್ರಮ ರಾಜ್ಯ, ದೇಶ ಹಾಗೂ ಪ್ರಪಂಚದಾದ್ಯಂತ ಮೊಳಗಿದೆ. ಸದ್ಯ ವಿಜಯಪುರದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (ಜೆಎಸ್ಎಸ್)ಯು ತನ್ನದೇ ಆದ ರೀತಿಯಲ್ಲಿ ಈ ಸಂಭ್ರಮವನ್ನು ಆಚರಿಸಲು ಮುಂದಾಗಿದೆ. ಈ ಸಮಾರಂಭದ ಸವಿನೆನಪಿಗಾಗಿ ಐದು ದಿನಗಳವರೆಗೆ ಜೆಎಸ್ಎಸ್ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾಗುವ ಗರ್ಭಿಣಿಯರಿಗೆ ಉಚಿತವಾಗಿ ಹೆರಿಗೆ ಮಾಡಿಸಲಾಗುತ್ತಿದೆ. ಇದಕ್ಕಾಗಿ ಯಾವುದೇ ಚಿಕಿತ್ಸಾ ವೆಚ್ಚ ಇರುವುದಿಲ್ಲ. ಅಲ್ಲದೇ ಈ ವೇಳೆ ಜನಿಸಿದ ಮಕ್ಕಳಿಗೆ ಆಸ್ಪತ್ರೆಯಲ್ಲಿಯೇ ನಾಮಕರಣವನ್ನು ಮಾಡಲಾಗುತ್ತಿದೆ.
ಆಸ್ಪತ್ರೆಯಲ್ಲಿ ನಾಮಕರಣ ಕಾರ್ಯಕ್ರಮ ಅಯೋಧ್ಯಾ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆ ವಿಜಯಪುರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಸಂಭ್ರಮೋತ್ಸವ ಜೋರಾಗಿದೆ. ಈ ನಿಟ್ಟಿನಲ್ಲಿ ಗರ್ಭಿಣಿಯರಿಗೆ ಐದು ದಿನ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಐದು ದಿನಗಳಲ್ಲಿ ಆಸ್ಪತ್ರೆಯಲ್ಲಿ ಜನಿಸಿದ ಮಗುವಿಗೆ ಆಸ್ಪತ್ರೆಯಲ್ಲೇ ತೊಟ್ಟಿಲು ಕಾರ್ಯ ಹಾಗೂ ನಾಮಕರಣ ಮಾಡಲಾಗುತ್ತಿದೆ. ಗಂಡು ಹುಟ್ಟಿದರೆ ರಾಮನೆಂದು, ಹೆಣ್ಣು ಹುಟ್ಟಿದರೆ ಸೀತೆ ಎಂಬ ಭಾವನೆಯಿಂದ ಆಸ್ಪತ್ರೆಯು ಸಮಾಜಸೇವೆ ಕಾರ್ಯಕ್ಕೆ ಮುಂದಾಗಿದೆ.
ಇಂದು ಆಸ್ಪತ್ರೆಯಲ್ಲಿ ನಾಮಕರಣ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಒಟ್ಟು ನಾಲ್ಕು ಮಕ್ಕಳಿಗೆ ನಾಮಕರಣ ಮಾಡಲಾಯಿತು. ಅದರಲ್ಲಿ ಮೂರು ಗಂಡು ಮಕ್ಕಳಿಗೆ ರಾಮ ಎಂದು, ಒಂದು ಹೆಣ್ಣು ಮಗುವಿಗೆ ಸೀತಾ ಎಂದು ನಾಮಕರಣ ಮಾಡಲಾಯಿತು. ವೈದ್ಯರು, ಆಸ್ಪತ್ರೆಯ ಆಡಳಿಯ ಮಂಡಳಿ ಹಾಗೂ ಸಿಬ್ಬಂದಿ ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಿತು. ಐದು ದಿನಗಳಲ್ಲಿ ಒಟ್ಟು ಈವರೆಗೆ 61 ಉಚಿತ ಹೆರಿಗೆ ಚಿಕಿತ್ಸೆ ನೀಡಲಾಗಿದೆ. ಈ ಪೈಕಿ ನಾಲ್ಕು ಮಕ್ಕಳಿಗೆ ಆಸ್ಪತ್ರೆಯಲ್ಲೇ ನಾಮಕರಣ ಮಾಡಿದಂತಾಗಿದೆ.
ಜನವರಿ 18 ರಿಂದ ರಾಮ ಮಂದಿರ ಉದ್ಘಾಟನೆವರೆಗೆ ಅಂದರೆ 22 ರವರೆಗೆ ಗರ್ಭಿಣಿಯರಿಗೆ ಫ್ರೀ ಟ್ರೀಟ್ಮೆಂಟ್ ಹಾಗೂ ಉಚಿತವಾಗಿಯೇ ಹೆರಿಗೆ ಮಾಡಿಸಲಾಗುವುದು ಎಂದು ಆಸ್ಪತ್ರೆಯಿಂದ ಘೋಷಿಸಲಾಗಿತ್ತು. ಓಪಿಡಿ, ಐಪಿಡಿ, ನಾರ್ಮಲ್ ಡೆಲಿವರಿ, ಸಿಸೇರಿಯನ್ , ಮೆಡಿಕಲ್, ಲ್ಯಾಬ್, ವೈದ್ಯಕೀಯ ತಪಾಸಣೆ, ಸ್ಕ್ಯಾನಿಂಗ್ ಎಲ್ಲವೂ ಫ್ರೀ ಇರಲಿದೆ ಎಂದು ತಿಳಿಸಿತ್ತು. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಅಧ್ಯಕ್ಷತೆಯಲ್ಲಿರುವ ಜೆಎಸ್‌ಎಸ್ ಆಸ್ಪತ್ರೆ ಇದಾಗಿದೆ. ತಮ್ಮ ಆಸ್ಪತ್ರೆಯಲ್ಲಿ ಐದು ದಿನಗಳ ಕಾಲ ಉಚಿತ ಚಿಕಿತ್ಸೆ ನೀಡುತ್ತೇವೆ ಎಂದು ಘೋಷಿಸಿದ್ದರು.
ಇದನ್ನೂ ಓದಿ:ಶ್ರೀರಾಮನ ಕಟೌಟ್ ಮುಂದೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನವ ಜೋಡಿ