ಚಿಕ್ಕಮಗಳೂರು:ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ದಿನದಿಂದ ದಿನಕ್ಕೆ ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ ಪ್ರಕರಣಗಳು ಸಂಖ್ಯೆ ಏರಿಕೆಯಾಗುತ್ತಿದ್ದು, ಈ ಭಾಗದ ಜನರು ಆತಂಕಕ್ಕೆ ಕಾರಣವಾಗಿದೆ.
ಈಗಾಗಲೇ ಶೃಂಗೇರಿ ಹಾಗೂ ಕೊಪ್ಪ ಭಾಗದಲ್ಲಿ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ. ನಿನ್ನೆ (ಗುರವಾರ) ಕಾಫಿನಾಡಲ್ಲಿ ಮತ್ತೆ ನಾಲ್ವರಲ್ಲಿ ಕೆ.ಎಫ್.ಡಿ. ಪ್ರಕರಣಗಳು ಪತ್ತೆಯಾಗಿವೆ. ಎನ್.ಆರ್. ಪುರ ತಾಲೂಕಿನಲ್ಲಿ 3 ಹಾಗೂ ಕೊಪ್ಪದಲ್ಲಿ 1 ಪ್ರಕರಣಗಳು ವರದಿಯಾಗಿವೆ.
ಜಿಲ್ಲೆಯಲ್ಲಿ 23 ಕೆಎಫ್ಡಿ ಪ್ರಕರಣಗಳು ಸಕ್ರಿಯ:ಎನ್.ಆರ್. ಪುರ ತಾಲೂಕಿನ ಕಾನೂರು, ಗುಬ್ಬಿಗಾ, 8ನೇ ಮೈಲಿಕಲ್ಲು ಗ್ರಾಮದಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿವೆ. ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗುತ್ತಿರುವವರಲ್ಲಿ ಕೆ.ಎಫ್.ಡಿ ಪ್ರಕರಣಗಳು ಪತ್ತೆಯಾಗುತ್ತಿವೆ. ಜಿಲ್ಲೆಯಲ್ಲಿ 23 ಕೆ.ಎಫ್.ಡಿ. ಸಕ್ರಿಯ ಪ್ರಕರಣಗಳು ಇವೆ. ಬಿಸಿಲಿನ ಝಳಕ್ಕೆ ಕೆ.ಎಫ್.ಡಿ. ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿವೆ.
ವಿಶೇಷ ವಾರ್ಡ್ ವ್ಯವಸ್ಥೆ:ಮಲೆನಾಡಿನಾದ್ಯಂತ ಜಿಲ್ಲಾ ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಣೆ ಮಾಡಿದೆ. ಅಲ್ಲದೇ ಮಂಗನ ಕಾಯಿಲೆ ಬಗ್ಗೆ ಮಾಹಿತಿ ನೀಡುವ ಕೆಲಸವನ್ನು ಜಿಲ್ಲಾ ಆರೋಗ್ಯ ಇಲಾಖೆ ಮಾಡುತ್ತಿದ್ದು ಈಗಾಗಲೇ ಸೋಂಕಿತರು ಪತ್ತೆಯಾದ ಜಾಗ ಹಾಗೂ ಕೆಲ ಕಾಫಿ ತೋಟಗಳಲ್ಲಿ ಔಷಧ ಸಿಂಪಡಣೆ ಮಾಡುವ ಕೆಲಸವು ಆರೋಗ್ಯ ಇಲಾಖೆ ಮಾಡಿದೆ. ಕೊಪ್ಪ ಹಾಗೂ ಶೃಂಗೇರಿ ಭಾಗದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ವಿಶೇಷ ವಾರ್ಡ್ ವ್ಯವಸ್ಥೆ ಕೂಡ ಮಾಡಲಾಗಿದ್ದು, ಸೋಂಕಿತರಿಗೆ ಸೂಕ್ತ ಚಿಕಿತ್ಸೆಯನ್ನು ಸಹ ನೀಡಲಾಗುತ್ತಿದೆ.
ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಭರತ್ ಸಲಹೆ:"ಮಂಗನ ಕಾಯಿಲೆ ಇರುವುದು ದೃಢಪಟ್ಟರೆ ಅವರನ್ನು ನಾವು ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳುತ್ತಿದ್ದೇವೆ. ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ದರೆ ಮಣಿಪಾಲ್ಗೆ ಕಳುಹಿಸಿಕೊಡುತ್ತೇವೆ. ಇಲ್ಲದೆ ಹೋದರೆ ಇಲ್ಲಿಯೇ ಚಿಕಿತ್ಸೆ ನೀಡಿ ಗುಣಮುಖರಾದ ಬಳಿಕ ಡಿಸ್ಚಾರ್ಜ್ ಮಾಡುತ್ತೇವೆ. ಸೋಂಕು ಬಾರದಂತೆ ತಡೆಯಲು ಮಲೆನಾಡು ಭಾಗದಲ್ಲಿರುವವರು ಮುನ್ನೆಚ್ಚರಿಕೆ ವಹಿಸಬೇಕು. ಕಾಡಿಗೆ ಹೋಗುವುದಿದ್ದರೆ ಆರೋಗ್ಯ ಇಲಾಖೆ ನೀಡಿರುವ ದೀಪ ಹೆಸರಿನ ಆಯಿಲ್ ಅನ್ನು ಮೈ, ಕೈ ಹಾಗೂ ಕಾಲುಗಳಿಗೆ ಹಚ್ಚಬೇಕು. ಜೊತೆಗೆ ಆದಷ್ಟು ಮೈ ಮುಚ್ಚುವಂತಹ ಬಟ್ಟೆಗಳನ್ನು ತಪ್ಪದೇ ಧರಿಸಬೇಕು. ಮನೆಗೆ ಬಂದು ಬಿಸಿ ನೀರಿನ ಸ್ನಾನ ಮಾಡಬೇಕು" ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಭರತ್ ಸಲಹೆ ನಿಡಿದ್ದಾರೆ.
ಇದನ್ನೂ ಓದಿ:ಬಜೆಟ್ ಮಂಡನೆಗೆ ಕ್ಷಣಗಣನೆ: ಪಂಚ ಗ್ಯಾರಂಟಿಗೆ ಹಣ ಬಲ, ತೆರಿಗೆ ಭಾರವಿಲ್ಲದ ಉಳಿತಾಯ ಬಜೆಟ್ ಸಾಧ್ಯತೆ