ಹಾಸನ(ಸಕಲೇಶಪುರ):ಯಸಳೂರು ಅರಣ್ಯ ವ್ಯಾಪ್ತಿಯಲ್ಲಿ ಕಳೆದ ಡಿಸೆಂಬರ್ 4ರಂದು ಕಾರ್ಯಾಚರಣೆ ವೇಳೆ ಕಾಡಾನೆ ದಾಳಿಯಿಂದ ಮೃತಪಟ್ಟ ಕ್ಯಾಪ್ಟನ್ ಅರ್ಜುನನ ಸ್ಮಾರಕಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಮಾತನಾಡಿದ ಸಚಿವರು, "ಕಾಡಾನೆಗಳು ನಾಡಿಗೆ ಬರಲು ಕಾರಣವೇನು ಎಂಬ ಬಗ್ಗೆ ಸಮಗ್ರ ಅಧ್ಯಯನ ಮಾಡಿ, ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಮಾನವ-ವನ್ಯಜೀವಿ ಸಂಘರ್ಷದ ಕುರಿತು ಅಧ್ಯಯನಕ್ಕೆ ಒತ್ತು ನೀಡಲಾಗುವುದು. ಆನೆ ಹಾವಳಿ ತಪ್ಪಿಸಲು ಆಗಸ್ಟ್ 12ರ ವಿಶ್ವ ಆನೆಗಳ ದಿನದಂದು ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ನಡೆಸಲಾಗುತ್ತದೆ. ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ವಿಶ್ವಾದ್ಯಂತದಿಂದ ತಜ್ಞರು ಆಗಮಿಸಲಿದ್ದಾರೆ. ವನ್ಯಜೀವಿ-ಮಾನವ ಸಂಘರ್ಷ ನಿಯಂತ್ರಣಕ್ಕೆ ಯಾವ ಯಾವ ದೇಶದಲ್ಲಿ ಯಾವ ರೀತಿಯ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಲಾಗಿದೆ ಎಂಬುದನ್ನು ತಿಳಿದುಕೊಳ್ಳುವ ಮೂಲಕ ಅತ್ಯುತ್ತಮ ರೂಢಿಗಳನ್ನು ನಮ್ಮಲ್ಲೂ ಅಳವಡಿಸಿಕೊಳ್ಳುವುದು ಹೇಗೆಂಬ ಬಗ್ಗೆ ಚಿಂತನ-ಮಂಥನ ನಡೆಸಲಾಗುತ್ತದೆ" ಎಂದರು.
"ಮೈಸೂರು ದಸರಾ ವೈಭವದ ಪ್ರಧಾನ ಆಕರ್ಷಣೆಯೇ ಜಂಬೂ ಸವಾರಿ. ಎಂಟು ಬಾರಿ ಅಂಬಾರಿ ಹೊತ್ತ ಅರ್ಜುನ ಈ ನಾಡಿನ ಹೆಮ್ಮೆ. ಅರ್ಜುನ ಆನೆ ಹಲವು ಯಶಸ್ವಿ ಆನೆ ಸೆರೆ ಕಾರ್ಯಾಚರಣೆ, ಹುಲಿ ಕಾರ್ಯಾಚರಣೆ ಮತ್ತು ಚಿರತೆ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದ. ಆದರೆ, ಡಿ.4ರಂದು ದುರಾದೃಷ್ಟವಷಾತ್ ಕಾಡನೆಯೊಂದಿಗೆ ಕಾದಾಡಿ ಹುತಾತ್ಮನಾದ" ಎಂದು ಹೇಳಿದರು.