ಬೆಂಗಳೂರು :ಚುನಾವಣೆ ಮುಗಿದ ಮೇಲೆ ಮೇಕೆದಾಟು ಕಟ್ಟಲು ಬದ್ಧ ಎಂದು ನಾವು ಪ್ರಣಾಳಿಕೆಯಲ್ಲಿ ಹಾಕುತ್ತೇವೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ತಿಳಿಸಿದರು.
ಜೆ.ಪಿ ಭವನದಲ್ಲಿಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾವೇರಿ ಕಣಿವೆಗೆ ಸಂಬಂಧಿಸಿದಂತೆ 9 ಜಿಲ್ಲೆಗಳ 22 ತಾಲೂಕು, ಬೆಂಗಳೂರು ನಗರ ಸೇರಿದಂತೆ ಕುಡಿಯುವ ನೀರಿನ ಸಮಸ್ಯೆ ಭೀಕರವಾಗಿದೆ. 5 ತಿಂಗಳಿಂದ ಬೆಂಗಳೂರು ಜನ ಮನೆಗೆ ಬೀಗ ಹಾಕಿಕೊಂಡು ಊರಿಗೆ ವಲಸೆ ಹೋಗಿದ್ದಾರೆ.
ಕುಡಿಯಲು ನೀರಿಲ್ಲದ ಕಾರಣ ಈ ಸಮಸ್ಯೆಗೆ ಪರಿಹಾರ ಒದಗಿಸಲು ಸರ್ಕಾರದಿಂದ ಆಗಿಲ್ಲ. ಹೀಗಾಗಿ ಜನ ಗುಳೆ ಹೋಗಿದ್ದಾರೆ. ತಮಿಳುನಾಡಿನ ಸಿಎಂ ಕಠೋರವಾದ ನಿಲುವು ತಾಳಿದ್ದಾರೆ. ಅವರ ಪ್ರಣಾಳಿಕೆಯಲ್ಲಿ ಮೇಕೆದಾಟು ಯೋಜನೆ ಮಾಡಲು ಬಿಡಲ್ಲ ಎಂದಿದ್ದಾರೆ.
1964ರಲ್ಲಿ ವಿಧಾನಸಭೆಯಲ್ಲಿ ಖಾಸಗಿ ನಿರ್ಣಯ ಮಂಡಿಸಿದ್ದೆ. ನಮ್ಮ ರಾಜ್ಯದ ಸಂಪನ್ಮೂಲಗಳಿಂದ ಹೇಮಾವತಿ, ಕಬಿನಿ ಜಲಾಶಯ ಮಾಡಲು ನಿರ್ಣಯಿಸಿದ್ದೆ. ಅಂದಿನ ಸಿಎಂ ನಿಜಲಿಂಗಪ್ಪನವರು, ಒಳ್ಳೆಯ ನಿರ್ಣಯ ಎಂದಿದ್ದರು. ಆದರೆ ಷರತ್ತು ಹಾಕಿರುವ ಕಾರಣ ಆಗಲ್ಲ ಎಂದರು. ನಿರ್ಣಯ ವಾಪಸ್ ಪಡೆಯಲು ಮನವಿ ಮಾಡಿದ್ರು. ಎಲ್ಲರ ಮನವಿಗೆ ಮಣಿದು ವಾಪಸ್ ತಗೊಂಡೆ ಎಂದು ದೇವೇಗೌಡರು ವಿವರಿಸಿದರು.
1966ರಲ್ಲಿ ಮತ್ತೆ ನಿರ್ಣಯ ಮಂಡಿಸಿದೆ. ಕೆಲಸ ಆರಂಭಿಸಿದ್ರು, ಸೂಕ್ತ ಹಣ ಒದಗಿಸಿರಲಿಲ್ಲ. ಮುಂದೆ ನಾನೇ ಅಧಿಕಾರಕ್ಕೆ ಬಂದೆ. ಪ್ರಧಾನಿಗೆ ವಿವರವಾಗಿ ಪತ್ರ ಬರೆದಿದ್ದೇನೆ. ಮೇಕೆದಾಟು ಯೋಜನೆ ಮಾಡೇ ಮಾಡುತ್ತೇವೆ. ಜೆಡಿಎಸ್ ಪ್ರಣಾಳಿಕೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸುತ್ತೇವೆ. ಎಲ್ಲರೂ ಸೇರಿ ಐಕ್ಯತೆಯಿಂದ ಈ ಯೋಜನೆ ಮಾಡೋಣ ಎಂದು ರಾಜ್ಯದ ಮೂರು ಪಕ್ಷಗಳು ಪ್ರಣಾಳಿಕೆಯಲ್ಲಿ ಹಾಕಬೇಕು. ಎಲ್ಲರೂ ಒಟ್ಟಾಗಿ ಈ ಯೋಜನೆ ಮಾಡಬೇಕು. ಬಿಜೆಪಿಯವರು ಅವರ ಪ್ರಣಾಳಿಕೆಯಲ್ಲಿ ಹಾಕಲಿ ಎಂದು ಹೆಚ್ಡಿಡಿ ಒತ್ತಾಯಿಸಿದರು.
ಪ್ರಧಾನಿಗೆ ಪತ್ರ : ಮೇಕೆದಾಟು ಯೋಜನೆ ಸಂಬಂಧ ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ ಅವರು ವಿವರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಸೆ. 23, 2023ರಲ್ಲಿ ನಾನು ಮೇಕೆದಾಟು ಸಂಬಂಧ ನಿಮಗೆ ಈಗಾಗಲೇ ಪತ್ರ ಬರೆದು ಜಲಶಕ್ತಿ ಸಚಿವಾಲಯಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿದ್ದೆ. ತಟಸ್ಥವಾದ ಒಂದು ಸಮಿತಿಯನ್ನು ಉಭಯ ರಾಜ್ಯಗಳಿಗೆ ಕಳುಹಿಸಿ, ವಸ್ತುನಿಷ್ಠ ಮಾಹಿತಿ ಪಡೆದುಕೊಳ್ಳಬೇಕು. ಕಾವೇರಿ ಜಲಸಂಕಷ್ಟದ ಈಗಿನ ವಾಸ್ತವಾಂಶದ ಆಧಾರದ ಮೇಲೆ ಕೇಂದ್ರ ಜಲಶಕ್ತಿ ಇಲಾಖೆಯಿಂದ ಸುಪ್ರೀಂಕೋರ್ಟ್‌ಗೆ ತಾವು ಅರ್ಜಿ ಹಾಕಬೇಕು. ಮಳೆ ಇಲ್ಲದೆ ಕಂಗಾಲಾಗಿರುವ ರಾಜ್ಯದ ರೈತರ ನೆರವಿಗೆ ಧಾವಿಸಬೇಕು ಎಂದು ಉಲ್ಲೇಖಿಸಿದ್ದೆ ಎಂದು ತಿಳಿಸಿದ್ದಾರೆ.