ಬೆಂಗಳೂರು: ಮಹಿಳೆಯ ಅಪಹರಣ ಪ್ರಕರಣದಲ್ಲಿ ಎಸ್ಐಟಿಯಿಂದ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಇಂದು ಪೊಲೀಸ್ ವಶದಲ್ಲಿಯೇ ರಾತ್ರಿ ಕಳೆಯಲಿದ್ದಾರೆ. ಪ್ಯಾಲೇಸ್ ರಸ್ತೆಯ ಕಾರ್ಲ್‌ಟನ್ ಭವನದಲ್ಲಿರುವ ಸಿಐಡಿಯ ಕೇಂದ್ರ ಕಚೇರಿಯಲ್ಲೇ ರೇವಣ್ಣ ಉಳಿದುಕೊಳ್ಳಬೇಕಿದ್ದು, ಇದಕ್ಕಾಗಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ.
ವಶಕ್ಕೆ ಪಡೆದ ಬಳಿಕ ಬೌರಿಂಗ್ ಆಸ್ಪತ್ರೆಯಲ್ಲಿ ರೇವಣ್ಣ ಅವರಿಗೆ ವೈದ್ಯಕೀಯ ತಪಾಸಣೆ ಮಾಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸಿಐಡಿ ಕಚೇರಿಯ ಬಳಿಯಲ್ಲಿಯೇ ಪೊಲೀಸರು ಆಂಬ್ಯುಲೆನ್ಸ್ ನಿಯೋಜಿಸಿದ್ದಾರೆ. ನಾಳೆ ರೇವಣ್ಣ ಅವರನ್ನೂ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿರುವ ತನಿಖಾಧಿಕಾರಿಗಳು, ನಂತರ ವಿಚಾರಣೆಗಾಗಿ ವಶಕ್ಕೆ ಪಡೆದುಕೊಳ್ಳಲು ತಯಾರಿ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.