ETV Bharat / state

ಸಂಪುಟ ಪುನಾರಚನೆ ಬಗ್ಗೆ ಗೊತ್ತಿಲ್ಲ, ಸಿಎಂ, ಡಿಸಿಎಂ ದೆಹಲಿಯಲ್ಲಿ ಆ ಬಗ್ಗೆ ಚರ್ಚೆ ಮಾಡಬಹುದೇನೋ: ಸಚಿವ ಜಿ.ಪರಮೇಶ್ವರ್ - HOME MINISTER G PARAMESHWAR

ಡಿಸಿಎಂ ಈಗಾಗಲೇ ದೆಹಲಿಗೆ ಹೋಗಿದ್ದಾರೆ, ಸಿಎಂ ಇಂದು ದೆಹಲಿಗೆ ತೆರಳುವವರಿದ್ದಾರೆ, ಇಬ್ಬರೂ ಯಾವ ವಿಷಯಗಳ ಬಗ್ಗೆ ಏನು ಮಾತನಾಡಿಕೊಂಡು ಬರುತ್ತಾರೆ ಎನ್ನುವುದು ಗೊತ್ತಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್​ ತಿಳಿಸಿದ್ದಾರೆ.

Home Minister Dr G Parameshwar
ಸಚಿವ ಜಿ.ಪರಮೇಶ್ವರ್ (ETV Bharat)
author img

By ETV Bharat Karnataka Team

Published : Nov 28, 2024, 12:33 PM IST

Updated : Nov 28, 2024, 2:43 PM IST

ಬೆಂಗಳೂರು: "ಸಂಪುಟ ಪುನಾರಚನೆ ಬಗ್ಗೆ ನನಗೆ ಗೊತ್ತಿಲ್ಲ. ದೆಹಲಿಯಲ್ಲಿ ಸಿಎಂ, ಡಿಸಿಎಂ ಚರ್ಚೆ ಮಾಡಿ ಏನು ತೀರ್ಮಾನ ಮಾಡ್ಕೊಂಡು ಬರ್ತಾರೆ ಅಂತ ಗೊತ್ತಿಲ್ಲ" ಎಂದು ಸಚಿವ ಜಿ.ಪರಮೇಶ್ವರ್ ತಿಳಿಸಿದರು.

ಸದಾಶಿವನಗರದ ಬಳಿ ಮಾತನಾಡಿದ ಅವರು, ಸಚಿವ ಸಂಪುಟ ಪುನಾರಚನೆ ವಿಚಾರವಾಗಿ ಪ್ರತಿಕ್ರಿಯಿಸಿ, ಡಿಸಿಎಂ ಅವರು ದೆಹಲಿಗೆ ಹೋಗಿದ್ದಾರೆ. ಯಾಕೆ ಅಂತ ಗೊತ್ತಿಲ್ಲ. ಇಲಾಖೆ ವಿಚಾರಣೆನಾ, ಪಕ್ಷದ ವಿಚಾರಣೆನಾ ಅಂತ ಗೊತ್ತಿಲ್ಲ. ಇವತ್ತು ಸಿಎಂ ದೆಹಲಿಗೆ ಹೋಗ್ತಿದ್ದಾರೆ. ವರ್ಕಿಂಗ್ ಕಮಿಟಿಗಳ ಸಭೆ ನಾಳೆ ಇದೆ. ಸಾಮಾನ್ಯವಾಗಿ ಈ ಸಭೆಗೆ ಸಿಎಂ, ಕೆಪಿಸಿಸಿ ಅಧ್ಯಕ್ಷರನ್ನು ಕರೀತಾರೆ. ಇದಾದ ನಂತರ ಹೈಕಮಾಂಡ್ ಅವರ ಜತೆ ಸಂಪುಟ ಪುನಾರಚನೆ ಬಗ್ಗೆ ಅವರಿಬ್ಬರೂ ಚರ್ಚೆ ಮಾಡಬಹುದೇನೋ" ಎಂದರು‌.

ಸಚಿವ ಜಿ.ಪರಮೇಶ್ವರ್ (ETV Bharat)

"ಇದರ ಜತೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗೂ ಇದೆ. ಅಲ್ಲಲ್ಲೇ ಮಾತುಗಳು ಕೇಳಿ ಬರುತ್ತಿವೆ. ಈ ಎರಡೂ ವಿಚಾರಗಳ ಬಗ್ಗೆಯೂ ಸಿಎಂ, ಡಿಸಿಎಂ ಚರ್ಚೆ ಮಾಡಿ ಏನು ತೀರ್ಮಾನ ಮಾಡ್ಕೊಂಡು ಬರ್ತಾರೆ ಅಂತ ಗೊತ್ತಿಲ್ಲ. ಖಾತೆ ಬದಲಾವಣೆ ಬಗ್ಗೆಯೂ ಏನು ತೀರ್ಮಾನ ಮಾಡ್ತಾರೋ ಗೊತ್ತಿಲ್ಲ. ಇಷ್ಟು ಕಾಲ ವರಿಷ್ಠರು ಏನೆಲ್ಲ ಜವಾಬ್ದಾರಿ ಕೊಟ್ಟಿದ್ದಾರೋ ಅವುಗಳನ್ನೆಲ್ಲ ನಿಭಾಯಿಸಿಕೊಂಡು ಬಂದಿದ್ದೇನೆ. ಈಗಲೂ ಅವರು ಏನೇ ಜವಾಬ್ದಾರಿ ಕೊಟ್ಟರೂ ಮಾಡೋದಿಕ್ಕೆ ನಾನು ತಯಾರಾಗಿರುತ್ತೇನೆ. ಪಕ್ಷದ ಸೂಚನೆ 35 ವರ್ಷಗಳಿಂದ ಪಾಲಿಸಿಕೊಂಡೇ‌ ಬಂದಿದ್ದೇನೆ. ಸರ್ಕಾರ, ಪಕ್ಷದಲ್ಲಿ ಕೊಟ್ಟ ಜವಾಬ್ದಾರಿ ಮಾಡುತ್ತಾ ಬಂದಿದ್ದೇನೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಕೇಳಿದ್ದೇನೆ. ಒಂದೊಮ್ಮೆ ಆ ವಿಚಾರ ವರಿಷ್ಠರ ಮುಂದೆ ಇದ್ದರೆ ಬದಲಾವಣೆ ಮಾಡುತ್ತಾರೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಡಾ‌ ಪ್ರಕರಣದಲ್ಲಿ ಸಿಎಂ ಕುಟುಂಬಕ್ಕೆ ಜಮೀನು ಮಾರಿದ ಮೂಲ‌ ಮಾಲೀಕರ ಮಕ್ಕಳಿಂದ ದೂರು ವಿಚಾರವಾಗಿ ಪ್ರತಿಕ್ರಿಯಿಸಿ, "ಈಗಾಗಲೇ ಲೋಕಾಯುಕ್ತದಲ್ಲಿ ಮುಡಾ ತನಿಖೆ ನಡೆಯುತ್ತಿದೆ. ಬಹುಶಃ ಲೋಕಾಯುಕ್ತದವರೇ ಇದನ್ನು ಗಮನಿಸಬಹುದು. ತನಿಖೆ ಮಾಡೋರು ಇದನ್ನು ಗಮನಿಸಿಯೇ ತನಿಖೆ ಮಾಡುತ್ತಾರೆ" ಎಂದರು.

ಸಿಪಿವೈ ಹೇಳಿಕೆಯಿಂದ ನಿನ್ನೆ ಜೆಡಿಎಸ್ ಶಾಸಕರು ಒಗ್ಗಟ್ಟು ಪ್ರದರ್ಶಿಸಿದ ಕುರಿತು ಮಾತನಾಡಿ, "ನಾವೇನೂ ಅವರನ್ನು ಕೊಂಡುಕೊಳ್ಳಲು ಹೋಗಿಲ್ಲ. ಅಂಗಡಿಗೆ ಹೋಗಿ ಯಾವುದೋ ಪದಾರ್ಥದ ಬೆಲೆ ಎಷ್ಟು ಅಂತ ಕೇಳಿದಾಗ ಅವರು ಬೆಲೆ ಹೇಳುತ್ತಾರೆ. ಆದರೆ ಆ ರೀತಿ ನಾವೇನೂ ಜೆಡಿಎಸ್ ಅವರ ಬಳಿ ಹೋಗಿ ಕೇಳಿಲ್ವಲ್ಲ. ಯೋಗೇಶ್ವರ್ ಅವರು ಹಾಗೇ ಏನೋ ಹೇಳಿಕೆ ಕೊಟ್ಟಿದ್ದಾರೆ ಅಷ್ಟೆ. ಅದನ್ನೇ ಜೆಡಿಎಸ್​ನವರು ಅಷ್ಟೊಂದು ಗಂಭೀರವಾಗಿ ಪರಿಗಣಿಸುವ ಅಗತ್ಯ ಇಲ್ಲ" ಎಂದರು.

ಮಂಡ್ಯ ಅಬಕಾರಿ ಇಲಾಖೆಯಲ್ಲಿ ಭಷ್ಟಾಚಾರ ನಡೆಯುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತ ಲೋಕಾಯುಕ್ತಕ್ಕೆ ದೂರು ವಿಚಾರವಾಗಿ ಮಾತನಾಡಿ, "ಪೊಲೀಸ್ ಇಲಾಖೆಗೆ ದೂರು ಬಂದರೆ ತಕ್ಷಣ ತನಿಖೆ‌ ಮಾಡಿ ಕ್ರಮ ತಗೋತೇವೆ. ಅವರು ಲೋಕಾಯುಕ್ತಕ್ಕೆ ಕೊಟ್ಟಿರುವುದರಿಂದ ಲೋಕಾಯುಕ್ತದವರೇ ಅದನ್ನು ನೋಡ್ತಾರೆ. ಆದರೆ ನಮ್ಮ ಇಲಾಖೆಗೆ ದೂರು ಬಂದಿಲ್ಲ. ನಮ್ಮ ಇಲಾಖೆಗೆ ದೂರು ಬಂದರೆ ತನಿಖೆ ಮಾಡುತ್ತೇವೆ" ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ: ಸಂಪುಟ ಪುನಾರಚನೆ ಮಾಡಿದರೆ ಒಳ್ಳೆಯದೇ, ಬೇರೆಯವರಿಗೂ ಅವಕಾಶ ಸಿಗಬೇಕು: ದಿನೇಶ್​ ಗುಂಡೂರಾವ್​

Last Updated : Nov 28, 2024, 2:43 PM IST

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.