ದಕ್ಷಿಣ ಚಿತ್ರರಂಗದ ಖ್ಯಾತ ನಟ ಧನುಷ್ ಮತ್ತು ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ ಅವರಿಗೆ ಚೆನ್ನೈ ಕುಟುಂಬ ಕಲ್ಯಾಣ ನ್ಯಾಯಾಲಯ ವಿಚ್ಛೇದನ ನೀಡಿದ್ದು, 18 ವರ್ಷಗಳ ಸುದೀರ್ಘ ದಾಂಪತ್ಯ ಜೀವನಕ್ಕೆ ದಂಪತಿ ಫುಲ್ಸ್ಟಾಪ್ ಇಟ್ಟಿದ್ದಾರೆ. ಇಬ್ಬರೂ ಒಟ್ಟಿಗೆ ವಾಸಿಸಲು ಇಷ್ಟಪಡದ ಹಿನ್ನೆಲೆ ಈ ನಿರ್ಧಾರ ಕೈಗೊಂಡಿದ್ದು, ನ್ಯಾಯಾಲಯ ಸಮ್ಮತಿ ನೀಡಿದೆ. ದಂಪತಿಯ ದಾಂಪತ್ಯ ಜೀವನ ಕೊನೆಗೊಂಡಿದ್ದರೂ, ಧನುಷ್ ಮತ್ತು ಐಶ್ವರ್ಯಾ ತಮ್ಮ ಇಬ್ಬರು ಪುತ್ರರಾದ ಯಾತ್ರಾ ಮತ್ತು ಲಿಂಗಾ ಅವರಿಗೆ ಸಹ-ಪೋಷಕರಾಗಿ ಮುಂದುವರಿಯಲಿದ್ದಾರೆ.
2022ರಲ್ಲಿ ದಂಪತಿ ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಪ್ರತ್ಯೇಕತೆ ಬಗ್ಗೆ ಘೋಷಿಸಿದ್ದರು. ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ, ಇದೇ ನವೆಂಬರ್ 21 ರಂದು, ದಂಪತಿ ಚೆನ್ನೈನ ಕೌಟುಂಬಿಕ ನ್ಯಾಯಾಲಯದೆದುರು ಹಾಜರಾದರು. ಅಲ್ಲಿ ಇಬ್ಬರೂ ತಮ್ಮ ನಿರ್ಧಾರವನ್ನು ಔಪಚಾರಿಕವಾಗಿ ತಿಳಿಸಿದರು. ನ್ಯಾಯಾಲಯ ಈ ವಿಚಾರಣೆಯನ್ನು ನವೆಂಬರ್ 27ಕ್ಕೆ ಮುಂದೂಡಿತು. ನಂತರ, ಅಂತಿಮ ವಿಚ್ಛೇದನ ತೀರ್ಪು ನೀಡಲಾಯಿತು.
ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ ಅವರು ತಮ್ಮ ಹೇಳಿಕೆಯಲ್ಲಿ, "18 ವರ್ಷಗಳ ಕಾಲ ಸ್ನೇಹಿತರಾಗಿ, ದಂಪತಿಯಾಗಿ, ಪೋಷಕರಾಗಿ ಮತ್ತು ಹಿತೈಷಿಗಳಾಗಿ ಪರಸ್ಪರ ಸಾಥ್ ನೀಡಿದ್ದೆವು. ಪ್ರಯಾಣ ಬೆಳವಣಿಗೆ, ತಿಳುವಳಿಕೆ, ಹೊಂದಾಣಿಕೆ ಮತ್ತು ಹೊಂದಿಕೊಳ್ಳುವಿಕೆಯಾಗಿದೆ. ಆದ್ರಿಂದು ನಮ್ಮ ಹಾದಿ ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ಬಂದು ನಿಂತಿದ್ದೇವೆ. ಧನುಷ್ ಮತ್ತು ನಾನು ಬೇರೆಯಾಗಲು ನಿರ್ಧರಿಸಿದ್ದವೆ. ನಮ್ಮನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳಿ. ನಮ್ಮ ನಿರ್ಧಾರವನ್ನು ಗೌರವಿಸಿ. ಈ ಪರಿಸ್ಥಿತಿ ನಿಭಾಯಿಸಲು ನಮಗೆ ಅತ್ಯಂತ ಅಗತ್ಯವಿರುವ ಗೌಪ್ಯತೆಯನ್ನು ನೀಡಿ'' ಎಂದು ಕೇಳಿಕೊಂಡಿದ್ದಾರೆ.
ಇದನ್ನೂ ಓದಿ: ಕಾಪಿರೈಟ್ ಉಲ್ಲಂಘನೆ: ನಟಿ ನಯನತಾರಾ ವಿರುದ್ಧ ಮೊಕದ್ದಮೆ ದಾಖಲಿಸಿದ ಸೂಪರ್ ಸ್ಟಾರ್ ಧನುಷ್
ದಕ್ಷಿಣ ಚಿತ್ರರಂಗದ ಖ್ಯಾತ ನಟಿ ನಯನತಾರಾ ಮತ್ತು ಅವರ ಪತಿ, ನಿರ್ದೇಶಕ ವಿಘ್ನೇಶ್ ಶಿವನ್ ಅವರೊಂದಿಗಿನ ಕಾನೂನು ಹೋರಾಟ ಮುಂದುವರಿದಿರುವ ಸಂದರ್ಭ ಧನುಷ್ ವಿಚ್ಛೇದನ ಪಡೆದಿದ್ದಾರೆ. ನೆಟ್‌ಫ್ಲಿಕ್ಸ್ ಸಾಕ್ಷ್ಯಚಿತ್ರ 'ನಯನತಾರಾ: ಬಿಯಾಂಡ್ ದಿ ಫೇರಿಟೇಲ್'ಗೆ ಸಂಬಂಧಿಸಿದ ಹಕ್ಕುಸ್ವಾಮ್ಯ ಉಲ್ಲಂಘನೆ ಆಗಿದೆ ಎಂದು ಆರೋಪಿಸಿ ನಿರ್ಮಾಪಕ ಧನುಷ್ ಅವರು ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅನುಮತಿಯಿಲ್ಲದೇ ತಾವು ನಿರ್ಮಿಸಿರುವ 'ನಾನುಂ ರೌಡಿ ಧಾನ್' ಸಿನಿಮಾದ ಕೆಲ ದೃಶ್ಯಗಳನ್ನು ಬಳಸಿಕೊಂಡಿದ್ದಾರೆ ಎಂದು ಧನುಷ್ ಆರೋಪಿಸಿದ್ದಾರೆ.
ಇದನ್ನೂ ಓದಿ: 'ನಿನ್ ಆಟ ನೀನ್ ತೋರ್ಸ್, ನನ್ ಆಟ ನಾ....': ಉಗ್ರಂ ಮಂಜು vs ರಜತ್ ಕಿಶನ್
2015ರಲ್ಲಿ ಬಿಡುಗಡೆ ಆದ 'ನಾನುಂ ರೌಡಿ ಧಾನ್' ಸಿನಿಮಾದಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ತೆರೆಹಂಚಿಕೊಂಡಿದ್ದರು. ಸೂಪರ್ ಹಿಟ್ ಸಿನಿಮಾಗೆ ನಯನತಾರಾ ಪತಿ ವಿಘ್ನೇಶ್ ಸಿವನ್ ಅ್ಯಕ್ಷನ್ ಕಟ್ ಹೇಳಿದ್ದು, ಧನುಷ್ ನಿರ್ಮಿಸಿದ್ದರು. ಸದ್ಯ 'ನಯನತಾರಾ: ಬಿಯಾಂಡ್ ದಿ ಫೇರಿಟೇಲ್'ಗೆ ಸಂಬಂಧಿಸಿದಂತೆ ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪ ಕೇಳಿಬಮದಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ.