ಬೆಂಗಳೂರು : ಮೀಸಲು ಕ್ಷೇತ್ರದಿಂದ ಗೆದ್ದ ವ್ಯಕ್ತಿಯಾಗಿ ಸಮುದಾಯದ ಬಗ್ಗೆ ನೋವು ಇದ್ದರೆ ವಾಲ್ಮೀಕಿ ನಿಗಮ ಹಗರಣ ಪ್ರಕರಣದ ಆರೋಪಿ ಸ್ಥಾನದಲ್ಲಿರುವ ಮಾಜಿ ಸಚಿವ ನಾಗೇಂದ್ರ ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು, ನಾಗೇಂದ್ರ ಮೇಲೆ ಬಲವಾದ ಎಫ್ಐಆರ್ ಆಗಬೇಕು. ಮೂರು ತಿಂಗಳ ಒಳಗೆ ವಾಲ್ಮೀಕಿ ನಿಗಮಕ್ಕೆ ಎಲ್ಲಾ ಹಣ ವಾಪಸ್ ಬರಬೇಕು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಆಗ್ರಹಿಸಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿ ಬೀದರ್ನಿಂದ ಬೆಂಗಳೂರಿನವರೆಗೆ ಚಲೋ ಮಾಡುತ್ತೇವೆ. ದೆಹಲಿಗೆ ತೆರಳಿ ರಾಷ್ಟ್ರೀಯ ಪರಿಶಿಷ್ಟ ಆಯೋಗಕ್ಕೆ ದೂರು ಕೊಡುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಾಲ್ಮೀಕಿ ನಿಗಮ ಹಗರಣ ಪ್ರಕರಣದಲ್ಲಿ ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರು ಅನ್ನೋ ರೀತಿ ಈ ಸರ್ಕಾರ ನಡೆದುಕೊಂಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಬುಡಕಟ್ಟು ಜನಾಂಗದವರು ಮತ್ತು ಪರಿಶಿಷ್ಟರ ಏಳಿಗೆಗೆ ಕಾನೂನು ತರಲಾಗಿತ್ತು. ನಮ್ಮ ಸಮುದಾಯದ ಪರವಾಗಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಕೆಲಸ ಮಾಡಿದ್ದೇವೆ. ಮೂರು ತಿಂಗಳಿಂದ ಈ ವಿಚಾರವಾಗಿ ಹೋರಾಟ ಮಾಡುತ್ತಿದ್ದೇವೆ ಎಂದರು.
ಈಗಿನ ಪರಿಸ್ಥಿತಿಯಲ್ಲಿ ಇ.ಡಿ ಅವರು, ನಾಗೇಂದ್ರ ಹಾಗೂ ಆಪ್ತರ ಮನೆ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ. ಇದನ್ನ ನಾವು ಸ್ವಾಗತ ಮಾಡುತ್ತೇವೆ. ವಾಲ್ಮೀಕಿ ನಿಗಮ ಪ್ರಾರಂಭವಾದ ಮೇಲೆ ಎಸ್ಟಿ ಅಭಿವೃದ್ಧಿ ಮಾಡಲು ಅನೇಕ ಕೆಲಸ ಮಾಡಬೇಕಿದೆ. ಇಡಿ ಎಸ್ಐಟಿ ವಿಚಾರಣೆ ಮಾಡಿ ಮುಂದೆ ಏನೆಲ್ಲಾ ಆಗಬೇಕು, ಆಗುತ್ತದೆ ಅಂತ ವಿಚಾರಣೆ ಮಾಡಿದ್ದಾರೆ. ನಾಗೇಂದ್ರಗೆ ಸಂಬಂಧಿಸಿದ 18 ಜಾಗಗಳಲ್ಲಿ ಇ.ಡಿ ದಾಳಿ ಮಾಡಿದೆ. ಯೂನಿಯನ್ ಬ್ಯಾಂಕ್ ಸಿಬಿಐಗೆ ದೂರು ಕೊಟ್ಟ ಹಿನ್ನೆಲೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಹರೀಶ್ ಅನ್ನೋರ ಖಾತೆಗೆ 80 ಲಕ್ಷ ಹಣ ವರ್ಗಾವಣೆ ಆಗಿದೆ. ವಾಲ್ಮೀಕಿ ನಿಗಮದಿಂದ ಹಣ ವರ್ಗಾವಣೆ ಆಗಿದೆ. ಹರೀಶ್ ಯಾರು ಅಂದರೆ ನಾಗೇಂದ್ರ ಅವರ ಪಿ ಎ. ಇಷ್ಟು ದೊಡ್ಡ ಮಟ್ಟದಲ್ಲಿ ಹಣ ವರ್ಗಾವಣೆ ಆಗಿದೆ. ನಿನ್ನೆ ಇಡಿ ದಾಳಿ ಮಾಡಿದೆ. ಇದರ ಬಗ್ಗೆ ನಮಗೆ ಮಾಹಿತಿ ಇಲ್ಲ ಅಂತ ಗೃಹಸಚಿವ ಪರಮೇಶ್ವರ್ ಹೇಳಿದ್ದಾರೆ. ಇಂತವು ಸರ್ಕಾರದ ಗಮನಕ್ಕೆ ಬರೋದೆ ಇಲ್ಲ ಅಂತ ವ್ಯಂಗ್ಯವಾಡಿದರು.
ರಾಜ್ಯದಲ್ಲಿ ನಾಚಿಕೆ ಇಲ್ಲದ ಸರ್ಕಾರ ಇದೆ. ಕಳ್ಳರ ಉಪಾಧ್ಯಕ್ಷನನ್ನ ಹಿಡಿದಿದ್ದಾರೆ. ಆದರೆ, ಅಧ್ಯಕ್ಷ ಯಾರು ಅಂತ ಪತ್ತೆ ಹಚ್ಚಬೇಕಿದೆ. ಆ ಕೆಲಸವನ್ನ ಇಡಿ ಮಾಡಲಿದೆ. ಎಸ್ಐಟಿ ಇನ್ವೆಸ್ಟಿಗೇಷನ್ ಕೂಡ ನಡೆಯುತ್ತಿದೆ. ಲ್ಯಾಂಬೊರ್ಗಿನಿ ಕಾರ್, ಹನಿಟ್ರ್ಯಾಪ್ ಎಲ್ಲವೂ ನಡೆದಿದೆ. ಜವಾಬ್ದಾರಿ ಇಲ್ಲದ ಉಪಾಧ್ಯಕ್ಷರು ಹನಿಟ್ರ್ಯಾಪ್ ಮಾಡಿಸಿದ್ದಾರೆ. ಸಮುದಾಯದ ಬಡಪಾಯಿಗಳನ್ನ ಹನಿಟ್ರ್ಯಾಪ್ಗೆ ಸಿಲುಕಿಸಿದ್ದಾರೆ. ಸಮುದಾಯದ ಹಣ ಒಳ್ಳೆಯ ಕಾರ್ಯಕ್ರಮಕ್ಕೆ ಸಿಗಬೇಕಿತ್ತು. ರಸ್ತೆ, ಬೋರ್ವೆಲ್, ಭೂ ಒಡೆತನದ ಜಮೀನು ಈ ಹಣದಿಂದ ಸಿಗಬೇಕಿತ್ತು. ಈ ಸರ್ಕಾರಕ್ಕೆ ಬುಡಕಟ್ಟು ಜನಾಂಗದ ಶಾಪ ತಟ್ಟುತ್ತದೆ. ಬುಡಕಟ್ಟು ಜನಾಂಗದ ಹಣದಲ್ಲಿ ಶೋಕಿ ಮಾಡುತ್ತಿದ್ದಾರೆ. ಚುನಾವಣೆ ಗೆಲ್ಲಲು ಹಣ ಬಳಸಿದ್ದಾರೆ. ಕಲ್ಬುರ್ಗಿ, ರಾಯಚೂರು, ಕೊಪ್ಪಳ, ಬೀದರ್ ಚುನಾವಣೆಗೆ ಈ ಹಣ ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಇದೀಗ ಹೊಸದಾಗಿ ಮತ್ತೊಂದು ಹಗರಣವಾಗಿ ಮುಡಾ ಹಗರಣ ಹೊರ ಬಂದಿದೆ. ಇದೊಂದು ಕಳ್ಳ ಸರ್ಕಾರ, ಡಕಾಯಿತ ಸರ್ಕಾರ, ನಾಗೇಂದ್ರ ಅವರ ಬಂಧನ ಆಗಲೇಬೇಕು. ಇದನ್ನ ಇಡಿ ಗಂಭೀರವಾಗಿ ಪರಿಗಣಿಸಬೇಕು. ನಾಗೇಂದ್ರ ಬಂಧನ ಮಾಡುವ ಕೆಲಸವನ್ನ ಇಡಿ ಮಾಡಲಿದೆ ಅಂತ ಭಾವಿಸಿದ್ದೇನೆ ಎಂದರು.