ಕರ್ನಾಟಕ

karnataka

ETV Bharat / state

ರಮೇಶ್ ಕುಮಾರ್​​, ಮತ್ತವರ ಪಕ್ಷಕ್ಕೆ ಮೋದಿ ನಿಜವಾಗಿಯೂ ಶನಿಯೇ ಆಗಿದ್ದಾರೆ: ಮಾಜಿ ಸಿಎಂ ಬೊಮ್ಮಾಯಿ - Basavaraj Bommai - BASAVARAJ BOMMAI

ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

basavaraj-bommai
ರಮೇಶ್ ಕುಮಾರ್​​, ಮತ್ತವರ ಪಕ್ಷಕ್ಕೆ ಮೋದಿ ನಿಜವಾಗಿಯೂ ಶನಿಯೇ ಆಗಿದ್ದಾರೆ: ಮಾಜಿ ಸಿಎಂ ಬೊಮ್ಮಾಯಿ

By ETV Bharat Karnataka Team

Published : Apr 21, 2024, 3:20 PM IST

ಬೆಂಗಳೂರು: ''ರಮೇಶ್ ಕುಮಾರ್​​ ಮತ್ತು ಅವರ ಪಕ್ಷಕ್ಕೆ ಪ್ರಧಾನಿ ಮೋದಿ ನಿಜವಾಗಿಯೂ ಶನಿಯೇ ಆಗಿದ್ದಾರೆ'' ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಾತನಾಡಿದ ಅವರು, ಮೋದಿ ಶನಿ ಎಂಬ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದರು.

''ರಮೇಶ್ ಕುಮಾರ್ ಜೊತೆ ಇದ್ದವರು. ಅವರ ಬಗ್ಗೆ ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಭ್ರಷ್ಟಾಚಾರಿಗಳು, ಭಯೋತ್ಪಾದಕರಿಗೆ ಮೋದಿಯವರು ಶನಿಯೇ. ಮಹಿಳೆಯರಿಗೆ, ದೇಶಪ್ರೇಮಿಗಳಿಗೆ, ಬಡವರಿಗೆ ಮೋದಿ ವರ ನೀಡುವ ದೇವರಾಗಿದ್ದಾರೆ. ರಮೇಶ್ ಕುಮಾರ್ ಹೇಳಿಕೆಯಲ್ಲಿ ಒಳಮರ್ಮ ಇದೆ. ಅವರು ಕಾಂಗ್ರೆಸ್​​ಗೆ ಹೇಳಿರಬೇಕು'' ಎಂದು ತಿರುಗೇಟು ನೀಡಿದರು.

ಸುಳ್ಳಿ‌ನಲ್ಲಿ ಹುಟ್ಟಿದ ಸರ್ಕಾರ ಸುಳ್ಳಿನಲ್ಲೇ ಕೊನೆ:ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬೊಮ್ಮಾಯಿ, ''ಸುಳ್ಳು ಬಹಳ ದಿನ ನಡೆಯಲ್ಲ. ಸುಳ್ಳಿನಲ್ಲಿ ಹುಟ್ಟಿದ ಈ ಸರ್ಕಾರ ಅದೇ ಸುಳ್ಳಿನಲ್ಲಿ ಕೊನೆಯಾಗಲಿದೆ'' ಎಂದು ಕಿಡಿಕಾರಿದರು.

ಕರ್ನಾಟಕದ ಜನತೆಗೆ ಚೊಂಬು: ''ಕಾಂಗ್ರೆಸ್ ಚೊಂಬು ಸಂಬಂಧ ಜಾಹೀರಾತು ನೀಡಿದೆ. ರಾಜ್ಯ ಸರ್ಕಾರ ನಿಜವಾದ ಚೊಂಬು ನೀಡಿದೆ. ಕಿಸಾನ್ ಸಮ್ಮಾನ್​ನಲ್ಲಿ 10 ಸಾವಿರ ರೂ. ಕೊಡಲಾಗುತ್ತಿತ್ತು. ಅದರಲ್ಲಿ ನಾಲ್ಕು ಸಾವಿರ ಕಡಿಮೆ ಮಾಡಿದರು. ಅವರಿಗೆ ಚೊಂಬು ಕೊಟ್ಟಿದ್ದೀರಿ. ರೈತ ವಿದ್ಯಾನಿಧಿ ಯೋಜನೆಗೆ ಕತ್ತರಿ ಹಾಕಿ, ರೈತರ ಮಕ್ಕಳಿಗೆ ಚೊಂಬು ಕೊಟ್ಟವರು ಯಾರು? ಎಸ್​​ಸಿ, ಎಸ್​​​ಟಿ, ಟಿಎಸ್​​ಪಿ ಅನುದಾನವನ್ನು ಗ್ಯಾರಂಟಿಗೆ ಬಳಸಿದ್ದೀರಿ. ದಲಿತರಿಗೆ ಚೊಂಬು ಕೊಟ್ಟಿದ್ದು ಕರ್ನಾಟಕ ಸರ್ಕಾರ. ಹೆಣ್ಣು ಮಕ್ಕಳಿಗೂ ಮೋಸ ಮಾಡಿ ಚೊಂಬು ಕೊಟ್ಟಿದ್ದೀರಿ. ಕರ್ನಾಟಕದ ಜನತೆಗೆ ಚೊಂಬು ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ'' ಎಂದು ತಿರುಗೇಟು ನೀಡಿದರು.‌

''ದೇವೇಗೌಡರ ಅಕ್ಷಯ ಪಾತ್ರೆ ಹೇಳಿಕೆಯನ್ನು ಮೆಚ್ಚಬೇಕು. 54,000 ರೈತರಿಗೆ 14,000 ಕೋಟಿ ರೂ. ಹಣ ಬಂದಿದೆ‌. ಇದು ಅಕ್ಷಯ ಪಾತ್ರೆ ಅಲ್ಲವೇ?. 9 ಲಕ್ಷ ಮಹಿಳೆಯರಿಗೆ ಉಜ್ವಲ ಗ್ಯಾಸ್ ಸಂಪರ್ಕ ನೀಡಿದ್ದಾರೆ. ಅದು ಅಕ್ಷಯ ಪಾತ್ರೆ ಅಲ್ಲವೇ?. 12 ಲಕ್ಷ ಶೌಚಾಲಯ ಕಟ್ಟಿಸಿದ್ದಾರೆ. ಇದು ಅಕ್ಷಯ ಪಾತ್ರೆ ಅಲ್ಲವೇ? ಕೋವಿಡ್ ವೇಳೆ 4 ಕೋಟಿಗೂ ಉಚಿತ ವ್ಯಾಕ್ಸಿನ್ ಕೊಟ್ಟಿದ್ದಾರೆ. ಆ ಮೂಲಕ ಪ್ರಾಣ ಉಳಿಸಿದ್ದಾರೆ. ಪ್ರಾಣ ಉಳಿಸಿದವರಿಗೆ ಚೊಂಬು ಅಂತೀರಾ?. 10 ಕೆಜಿ ಅಕ್ಕಿ ಕೊಡುತ್ತೇನೆ ಅಂತ ಚೊಂಬು ಕೊಟ್ಟಿದ್ದೀರಿ. 6000 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಮಂಜೂರಾತಿ ನೀಡಿದ್ದೇವೆ. 1400 ಕೋಟಿ ರೂ. ಸಾಗರ ಮಾಲಾ ಕಾರ್ಯಕ್ರಮದಲ್ಲಿ ಅನುಮೋದನೆ ಕೊಟ್ಟಿದ್ದೇವೆ'' ಎಂದರು.

ಸಿದ್ದರಾಮಯ್ಯ ಸರ್ಕಾರದಿಂದ ಸಾಲ: ''ಮೋದಿಯಿಂದ ದೇಶವು 7% ವೃದ್ಧಿ ಕಾಣುತ್ತಿದೆ. ನಿಮ್ಮದು ಶೇಕ್ ಮೊಹಮ್ಮದ್ ಲೆಕ್ಕವಾಗಿದೆ. 14% ವೃದ್ಧಿ ವರ್ಷವಾರು ಆಗುತ್ತಿದೆ. ಈ ಸರ್ಕಾರ ಬಂದ ಬಳಿಕ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಕಸ ಗುಡಿಸುವವರಿಗೆ ವೇತನ ನೀಡಿಲ್ಲ. ಏಳನೇ ವೇತನ ಆಯೋಗದ ವೇತನ ಪರಿಷ್ಕರಣೆ ಮಾಡಿದರೆ ಅಷ್ಟೊಂದು ದೊಡ್ಡ ಮಟ್ಟದ ಹಣ ಎಲ್ಲಿಂದ ತರುತ್ತೀರಿ?. ಸಿದ್ದರಾಮಯ್ಯ ಸರ್ಕಾರ ಸಾಲ ಸಾಕಷ್ಟು ಮಾಡಿದ್ದಾರೆ. 13 ಸಾವಿರ ಕೋಟಿ ಹೆಚ್ಚುವರಿ ಸಾಲ ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರವು 15,000 ಕೋಟಿ ಹೊಸ ತೆರಿಗೆಗಳನ್ನು ಹಾಕಿದೆ. ತಮ್ಮ ಹುಳುಕು ಮುಚ್ಚಲು ಇಷ್ಟೆಲ್ಲ ಮಾಡುತ್ತಿದ್ದಾರೆ. ತಳಮಟ್ಟದಲ್ಲಿ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಬ್ರಾಂಡ್ ಬೆಂಗಳೂರುಗೆ ಏನು ಮಾಡಿದ್ದಾರೆ. ಬೆಂಗಳೂರು ನೀರಿನ ಕೊರತೆಯಿಂದ ನರಳಾಡುತ್ತಿದೆ'' ಎಂದು ಕಿಡಿಕಾರಿದರು.

''ಕಳೆದ 10 ವರ್ಷದ ಬಿಜೆಪಿ ಆಡಳಿತದಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಹೊಸ ತೆರಿಗೆ ವಿಧಾನವನ್ನೂ ತಂದಿದೆ. ಹಣಕಾಸು ವಿಚಾರದಲ್ಲಿ ಕಾಂಗ್ರೆಸ್​ನವರು ಕೀಳು ಮಟ್ಟದಲ್ಲಿ ನಡೆದುಕೊಳ್ಳುತ್ತಿದ್ದಾರೆ. ಇದು ಹತಾಶ ಮನೋಭಾವನೆಯಾಗಿದೆ. ನೇರ ತೆರಿಗೆಯಲ್ಲಿ ತೆರಿಗೆ ಹಂಚಿಕೆ ಆಗಲ್ಲ. ಅದು ನೆಹರೂ ಕಾಲದಿಂದಲೂ ಇದೆ. ಜಿಎಸ್​​ಟಿ ಮಾತ್ರ ಹಂಚಿಕೆಯ ತೆರಿಗೆಯಾಗಿದೆ. ಯುಪಿಎ ಮತ್ತು ಎನ್​ಡಿಎ ಅವಧಿಯಲ್ಲಿನ ಅಂಕಿ-ಅಂಶ ನೋಡಿದರೆ ಸತ್ಯ ಹೊರಬರುತ್ತದೆ. ತರಿಗೆ ಹಂಚಿಕೆಯಲ್ಲಿ 2004ರಿಂದ 2014ರವರೆಗೆ 81,785 ಕೋಟಿ ಬಂದಿತ್ತು. 2014ರಿಂದ 24ರಲ್ಲಿ 2,81,000 ಕೋಟಿ ರೂ. ಬಂದಿದೆ. ಅದರಿಂದ 2 ಲಕ್ಷ ಕೋಟಿ ರೂ. ಹೆಚ್ಚಿಗೆ ತೆರಿಗೆ ರಾಜ್ಯಕ್ಕೆ ಹಂಚಿಕೆಯಾಗಿದೆ. ಯುಪಿಎ ಸರ್ಕಾರದಲ್ಲಿ ರಾಜ್ಯಕ್ಕೆ ನಾಲ್ಕು ಪೈಸೆ ಬರುತ್ತಿತ್ತು. ಆದರೆ ನಮ್ಮ ಕಾಲದಲ್ಲಿ 13 ಪೈಸೆ ಬರುತ್ತಿದೆ'' ಎಂದರು.

''ನಮ್ಮ ಕಾಲದಲ್ಲಿ ಮೂರು ಪಟ್ಟು ಹೆಚ್ಚು ಗ್ರಾಂಟ್ ಇನ್ ಎಯ್ಡ್ ಬಂದಿದೆ. ಕೇಂದ್ರ ಸರ್ಕಾರ ಕಳೆದ ವರ್ಷ ಒಟ್ಟು 1,30,000 ಕೋಟಿ ರೂ. ಸಾಲ ನೀಡಿದೆ. ಈ ಪೈಕಿ 6,212 ಕೋಟಿ ರೂ. ರಾಜ್ಯಕ್ಕೆ ಸಾಲ ಕೊಡಲಾಗಿದೆ. ಇದು ಬಡ್ಡಿ ರಹಿತವಾಗಿದೆ. 50 ವರ್ಷದ ಬಳಿಕ ಅದನ್ನು ಮರುಪಾವತಿಸಬೇಕು. ಆಸ್ತಿ ಸೃಜನೆ ಮಾಡಲು ಇದನ್ನು ಕೊಟ್ಟಿದ್ದರು. ಎಲ್ಲಾ ರಾಜ್ಯ ಸರ್ಕಾರಗಳು 1980ನೇ ಇಸವಿಯಲ್ಲಿ ನಡೆದ ಸಭೆಗೆ ಅಂದಿನ ಸಿಎಂಗಳಾದ ಎಂಜಿಆರ್, ಎನ್​ಟಿಆರ್, ಜ್ಯೋತಿ ಬಸು ಬಂದಿದ್ದರು. ತೆರಿಗೆ ಹಂಚಿಕೆಯಲ್ಲಿ ಶೇ. 27% ಬರುತ್ತಿತ್ತು. ಅದನ್ನು 37% ಮಾಡಿ ಎಂದು ಬೇಡಿಕೆ ಇಟ್ಟಿದ್ದರು. ಆದರೆ ಕಾಂಗ್ರೆಸ್ ಮಾಡಿರಲಿಲ್ಲ. ಕಾಂಗ್ರೆಸ್ ಇದ್ದಾಗ ನೀವು ಮಾಡಿದ ತೆರಿಗೆ ಹಂಚಿಕೆ ಕಡಿಮೆ ಮಾಡಿದ್ದೀರಾ. ಹಣಕಾಸು ವ್ಯವಸ್ಥೆಯನ್ನು ಸಂಪೂರ್ಣವಾಗಿ ಹದಗೆಡಿಸಿದ್ದಾರೆ. ಅನುತ್ಪಾದಕತೆ ಮೇಲೆ ಹೆಚ್ಚಿನ ಖರ್ಚು ಮಾಡುತ್ತಿದ್ದೀರಿ'' ಎಂದು ಟೀಕಿಸಿದ್ದಾರೆ.

ದುಸ್ಥಿತಿಗೆ ಹಣಕಾಸು ಸ್ಥಿತಿ: ''ಗ್ಯಾರಂಟಿಗಳಿಗೆ ಆದಾಯ ಮಾಡದೇ ರಾಜ್ಯದ ಹಣಕಾಸು ಸ್ಥಿತಿಯನ್ನು ದುಸ್ಥಿತಿಗೆ ತಂದಿದ್ದಾರೆ. ರಾಜ್ಯದಲ್ಲಿ ಬರ ಇದೆ, ರೈತರಿಗೆ ಪರಿಹಾರ ಕೊಡಬೇಕು. ಪ್ರಾರಂಭದಲ್ಲಿ ಕೊಡುತ್ತೇವೆ ಅಂದರು, ಆಮೇಲೆ ಎರಡು ಸಾವಿರ ಕೊಡುತ್ತೇವೆ ಅಂದ್ರು. ಈಗ ಕೇಂದ್ರ ಸರ್ಕಾರ ನೀಡಿದ ಎನ್​ಡಿಆರ್​​ಎಫ್ ಹಣವನ್ನು ಕೊಟ್ಟರು. ನಮ್ಮ ಕಾಲದಲ್ಲಿ ಪ್ರವಾಹ ಬಂದಿತ್ತು. ಆಗ 2,300 ಕೋಟಿ ರೂ. ಒಂದೇ ತಿಂಗಳಲ್ಲಿ ಪರಿಹಾರ ಕೊಟ್ಟಿದ್ದೇವೆ. ರೈತರ ಕಷ್ಟಕ್ಕೆ ಬಂದಿಲ್ಲ ಅಂದರೆ ಸರ್ಕಾರ ಇದ್ದೂ ಸತ್ತಂಗೆ. ನೀವು ವಿಫಲರಾಗಿದ್ದೀರಾ. ಕುಡಿಯುವ ನೀರು ಒದಗಿಸಲೂ ಆಗಿಲ್ಲ'' ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ 18ರಿಂದ 20 ಸ್ಥಾನ ಗೆಲ್ಲಲಿದೆ: ಸಂತೋಷ್‌ ಲಾಡ್‌ - Santosh Lad

ABOUT THE AUTHOR

...view details