ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡುವ 2023ರ ನಾರಿ ಶಕ್ತಿ ವಂದನ್ ಕಾಯ್ದೆಯಲ್ಲಿನ ಮರು ಹಂಚಿಕಾ ನಿಯಮ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಸಂವಿಧಾನದ 32ನೇ ವಿಧಿ ಅಡಿ ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟ(ಎನ್ಎಫ್ಐಡಬ್ಲ್ಯೂ) ಮತ್ತು ಜಯಾ ಠಾಕೂರ್ ಸಲ್ಲಿಸಿದ್ದ ಮನವಿಗಳ ವಿಚಾರಣೆಗೆ ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಿ.ಬಿ. ವರಾಳೆ ನೇತೃತ್ವದ ಪೀಠ ನಿರಾಕರಿಸಿದೆ.
ಜಯಾ ಠಾಕೂರ್ ಅವರ ಅರ್ಜಿಯು ಕಾಯ್ದೆಯಾಗಿ ಮಾರ್ಪಟ್ಟಿರುವ ಮಸೂದೆಯನ್ನು ಪ್ರಶ್ನಿಸಿದೆ ಮತ್ತು ಎನ್ಎಫ್ಐಡಬ್ಲ್ಯೂ ಸಲ್ಲಿಸಿದ ಮತ್ತೊಂದು ಅರ್ಜಿಯು ಕಾನೂನಿನ ಮರು ಹಂಚಿಕಾ ನಿಯಮ (ಡಿಲಿಮಿಟೇಶನ್ ನಿಯಮ) ಪ್ರಶ್ನಿಸಿದೆ ಎಂದಿರುವ ನ್ಯಾಯಪೀಠ, ಜಯಾ ಠಾಕೂರ್ ಅವರ ಅರ್ಜಿ ನಿರುಪಯುಕ್ತವಾಗಿದೆ ಎಂದು ಹೇಳಿ ವಜಾಗೊಳಿಸಿದೆ.
ಎನ್ಎಫ್ಐಡಬ್ಲ್ಯೂನ ಮನವಿಗೆ ಸಂಬಂಧಿಸಿದಂತೆ ನ್ಯಾಯಪೀಠ, ನಿಮ್ಮ ಅರ್ಜಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ, ನೀವು ಹೈಕೋರ್ಟ್ ಅಥವಾ ಇತರ ಸೂಕ್ತ ವೇದಿಕೆಗೆ ಹೋಗಬಹುದು ಎಂದು ಸಂಸ್ಥೆಗೆ ಸೂಚಿಸಿತು.
ಎನ್ಎಫ್ಐಡಬ್ಲ್ಯೂ 2023ರ ಕಾಯ್ದೆಯ 334 ಎ (1) ಮತ್ತು ಷರತ್ತು 5 ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿತ್ತು. 2023ರ ನವೆಂಬರ್ನಲ್ಲಿ ಜಯಾ ಠಾಕೂರ್ ಅವರ ಅರ್ಜಿ ವಿಚಾರಣೆ ವೇಳೆ, ಜನಗಣತಿಯ ನಂತರ ಜಾರಿಗೆ ಬರಲಿರುವ ಮಹಿಳಾ ಮೀಸಲಾತಿ ಕಾನೂನಿನ ಒಂದು ಭಾಗವನ್ನು ರದ್ದುಗೊಳಿಸುವುದು ನ್ಯಾಯಾಲಯಕ್ಕೆ "ತುಂಬಾ ಕಷ್ಟ" ಎಂದು ಸುಪ್ರೀಂಕೋರ್ಟ್ ಹೇಳಿತ್ತು.
ಈ ಸಂಬಂಧ ಜಯಾ ಠಾಕೂರ್ ಅವರ ಮನವಿಗೆ ಸುಪ್ರೀಂಕೋರ್ಟ್ ನೋಟಿಸ್ ನೀಡದೇ, ಕೇಂದ್ರವನ್ನು ಪ್ರತಿನಿಧಿಸುವ ವಕೀಲರಿಗೆ ಅರ್ಜಿಯ ಪ್ರತಿಯನ್ನು ನೀಡಲು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿತ್ತು.
ಇದನ್ನೂ ಓದಿ: ಕೆನೆಪದರ ಕುರಿತ ತೀರ್ಮಾನ ಶಾಸಕಾಂಗ ಮತ್ತು ಕಾರ್ಯಾಂಗದ್ದು: ಸುಪ್ರೀಂ ಕೋರ್ಟ್