ಶಿವಮೊಗ್ಗ: ಹರಿ ಭಕ್ತರಿಗೆ ವೈಕುಂಠ ಏಕಾದಶಿ ಅತ್ಯಂತ ಪವಿತ್ರವಾದುದು. ಇಂದು ಉಪವಾಸವಿದ್ದು ಲಕ್ಷ್ಮಿ ವೆಂಕಟೇಶನ ಆರಾಧನೆ ಮಾಡಿದ್ರೆ ಪುಣ್ಯ ಪ್ರಾಪ್ತಿ ಆಗುತ್ತದೆ. ಅದೇ ರೀತಿ ಇಂದು ಲಕ್ಷ್ಮಿ ವೆಂಕಟೇಶ ಸ್ವಾಮಿ ಸ್ವರ್ಗದ ಬಾಗಿಲು ತೆಗೆದು ದೇವಗಣಗಳಿಗೆ ದರ್ಶನ ನೀಡುತ್ತಾನೆ ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ. ಇಂದು ವೈಕುಂಠ ಏಕಾದಶಿಯು ಶುಭ ಶುಕ್ರವಾರದಂದು ಬಂದಿದ್ದು, ಬೆಳಗ್ಗೆಯಿಂದಲೇ ಭಕ್ತರು ತಮ್ಮ ಸಮೀಪದ ಲಕ್ಷ್ಮಿ ವೆಂಕಟೇಶ್ವರನ ದೇವಾಲಯಕ್ಕೆ ತೆರಳಿ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.
ಶಿವಮೊಗ್ಗದ ವೆಂಕಟೇಶ ನಗರದಲ್ಲಿರುವ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಪುನಸ್ಕಾರಗಳು ನೆರವೇರಿದವು. ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಅಲ್ಲದೇ ದೇವಾಲಯದಲ್ಲಿ ಸ್ವರ್ಗದ ಬಾಗಿಲನ್ನು ಸಹ ರಚನೆ ಮಾಡಿದ್ದು ವಿಶೇಷವಾಗಿತ್ತು. ದರ್ಶನದ ನಂತರ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಈ ವೇಳೆ ಮಾತನಾಡಿದ ದೇವಾಲಯದ ಆಡಳಿತ ಮಂಡಳಿಯ ನಿರ್ದೇಶಕರಾದ ಧ್ರುವ ಕುಮಾರ್, ತಿಂಗಳಿಗೆ 2 ಏಕಾದಶಿಯಂತೆ ವರ್ಷಕ್ಕೆ 24 ಏಕಾದಶಿ ಬರುತ್ತವೆ. ಅದರಲ್ಲಿ ವೈಕುಂಠ ಏಕಾದಶಿ ವಿಶೇಷವಾಗಿದೆ. ಪುಷ್ಯ ಮಾಸದ ಶುಕ್ಲ ಪಕ್ಷದಲ್ಲಿ ಮೊದಲನೇಯದಾಗಿ ಬರುವುದೇ ವೈಕುಂಠ ಏಕಾದಶಿ. ಶಾಸ್ತ್ರದಲ್ಲಿ ದಕ್ಷಿಣಾಯಾನದಲ್ಲಿ ವಿಷ್ಣು ದೇವ ನಿದ್ರಾವಸ್ಥೆಯಲ್ಲಿರುತ್ತಾರೆ. ಉತ್ತರಾಯಣದಲ್ಲಿ ವಿಷ್ಣು ದೇವ ಜಾಗೃತನಾಗಿರುತ್ತಾರೆ. ಈ ಪುಣ್ಯಕಾಲದಲ್ಲಿ ಕ್ಷೀರ ಸಾಗರದಲ್ಲಿ ಮುಕ್ಕೋಟಿ ದೇವತೆಗಳಿಗೆ ವೈಕುಂಠದ ಬಾಗಿಲು ತೆಗೆದು ದರ್ಶನ ನೀಡುತ್ತಾರೆ ಎಂದು ಹೇಳಲಾಗುತ್ತದೆ. ವೈಕುಂಠ ದ್ವಾರ ತೆಗೆದು ದೇವತೆಗಳಿಗೆ ವಿಷ್ಣು ದರ್ಶನ ನೀಡಿದಂತೆ, ಕಲಿಯುಗದಲ್ಲಿ ವೈಕುಂಠ ದ್ವಾರ ನಿರ್ಮಾಣ ಮಾಡಲು ಆಗಲ್ಲ. ಇದರಿಂದ ಭಗವಂತನ ಮೂರ್ತಿ ಸ್ಥಾಪಿಸಿ, ಅದರ ಕೆಳಗೆ ಭಕ್ತರು ಹೋಗುವಂತಹ ವ್ಯವಸ್ಥೆ ಮಾಡಲಾಗಿದೆ. ಇಂದು ಹೀಗೆ ಮಾಡುವುದರಿಂದ ಭಕ್ತರ ಇಷ್ಟಾರ್ಥಗಳು ಈಡೇರುವ ಜೊತೆಗೆ ಅವರ ಪಾಪಗಳು ಕಳೆಯುತ್ತವೆ ಎಂದು ಹೇಳಿದರು.
ಅದೇ ರೀತಿ ಭಕ್ತರು ವೈಕುಂಠ ಏಕಾದಶಿಯಂದು ಬಂದು ದೇವರ ದರ್ಶನ ಪಡೆದು ಪಾವನರಾಗುತ್ತಿದ್ದಾರೆ. ಹಿಂದೆ ವೈಕುಂಠ ಏಕಾದಶಿಯಂದು ಎಲ್ಲರೂ ದೇವಾಲಯಗಳಿಗೆ ಬರುತ್ತಿರಲಿಲ್ಲ. ಆದರೆ, ಈಗ ಭಕ್ತರೆಲ್ಲರೂ ವೈಕುಂಠ ಏಕಾದಶಿಯಂದು ಬಂದು ದೇವರ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ನಾವು ಸಹ ಇಂದು ಕುಟುಂಬ ಸಮೇತರಾಗಿ ಬಂದು ದೇವರ ದರ್ಶನ ಪಡೆದುಕೊಂಡಿದ್ದೇವೆ ಎಂದು ಭಕ್ತ ವಾಸುದೇವ ತಿಳಿಸಿದರು.
ಇಂದು ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ರಾಜ್ಯದ ಹಲವು ದೇವಾಲಯಗಳಲ್ಲಿ ಸಂಭ್ರಮ ಕಳೆಗಟ್ಟಿದ್ದು, ಭಕ್ತರು ದರ್ಶನ ಪಡೆದು ಪುನೀತರಾದರು.
ಇದನ್ನೂ ಓದಿ: ವೈಕುಂಠ ಏಕಾದಶಿ: ಮಧ್ಯರಂಗನಾಥ ಸ್ವಾಮಿ ದೇವಾಲಯಕ್ಕೆ ಭಕ್ತಸಾಗರ; ಕಾಡು ನಾರಾಯಣನಿಗೆ ಸಪ್ತದ್ವಾರ ನಿರ್ಮಾಣ
ಇದನ್ನೂ ಓದಿ: ವೈಕುಂಠ ಏಕಾದಶಿ: ಬಳ್ಳಾರಿ, ದಾವಣಗೆರೆಯ ವೆಂಕಟೇಶ್ವರ ದೇವಾಲಯಗಳಲ್ಲಿ ಭಕ್ತಸಾಗರ