ಕಾರವಾರ: ಅಪಹರಣಕ್ಕೊಳಗಾಗಿದ್ದ ಮುಂಡಗೋಡದ ಉದ್ಯಮಿ ಜಮೀರ್ ಅಹ್ಮದ್ ದರ್ಗಾವಲೆ ಅವರನ್ನು ಅಪಹರಣಕಾರರು ಹಾವೇರಿ ಬಳಿಯ ಟೋಲ್ಗೇಟ್ ಹತ್ತಿರ ಬಿಟ್ಟು ಹೋಗಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಗುರುವಾರ ಸಂಜೆ ಮುಂಡಗೋಡದ ಸಂತೆ ಮಾರ್ಕೆಟ್ ರಸ್ತೆ ಮೂಲಕ ಬರುತ್ತಿದ್ದ ಜಮೀರ್ ಅವರ ಸ್ಕೂಟಿಗೆ ಅಪಹರಣಕಾರರು ಕಾರಿನಿಂದ ಡಿಕ್ಕಿ ಹೊಡೆದು ಕೆಳಗೆ ಬೀಳಿಸಿ, ನಂತರ ಅವರನ್ನು ಅಪಹರಿಸಿ ಪರಾರಿಯಾಗಿದ್ದರು. ಅಪಹರಣ ನಡೆದ ಬಗ್ಗೆ ಮಾಹಿತಿ ತಿಳಿದ ಮುಂಡಗೋಡದ ಪೊಲೀಸರು ಐದು ತಂಡ ರಚಿಸಿ ಕಾರ್ಯಾಚರಣೆಗೆ ಇಳಿದಿದ್ದರು. ಅಪಹರಣಕಾರರು ನಿನ್ನೆ ಹಾವೇರಿ ಬಳಿಯ ಟೋಲ್ಗೇಟ್ ಹತ್ತಿರ ಜಮೀರ್ ಅವರನ್ನು ಬಿಟ್ಟು ಹೋಗಿದ್ದಾರೆ. ಚಿಕ್ಕೋಡಿಯ ಬಳಿ ಮುಂಡಗೋಡ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆಸ್ಪತ್ರೆಗೆ ದಾಖಲು: ಅಪಹರಣಕಾರರು ಹಲ್ಲೆ ಮಾಡಿರುವುದರಿಂದ ಉದ್ಯಮಿ ಜಮೀರ್ ಅವರನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಡಗೋಡ ಪೊಲೀಸರು ಅಪಹರಣ ಮಾಡಿದ ಆರೋಪಿಗಳನ್ನು ನಗರಕ್ಕೆ ಕರೆತರುವ ಸಾಧ್ಯತೆ ಇದೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಪ್ರತಿಕ್ರಿಯಿಸಿ, "ಮುಂಡಗೋಡ ನಿವಾಸಿ ಜಮೀರ್ ಅಹ್ಮದ್ ದರ್ಗಾವಾಲೆ ಅವರನ್ನು ಹಣಕ್ಕಾಗಿ ಅಪಹರಣ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಗುರುವಾರ ರಾತ್ರಿ ಬೈಕ್ನಲ್ಲಿ ಹೊಗುತ್ತಿರುವಾಗ ಅಪಹರಣಕಾರರು ಕಾರಿನಿಂದ ಗುದ್ದಿದ್ದಾರೆ. ಕಾರು ಗುದ್ದುತ್ತಿದ್ದಂತೆ ಬೈಕ್ನಿಂದ ಜಮೀರ್ ಕೆಳಗೆ ಬಿದ್ದಿದ್ದಾರೆ. ನಂತರ ಜಮೀರ್ ಹಾಗೂ ಆತನ ಜೊತೆ ಇದ್ದವನ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಜಮೀರ್ ಅವರನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿದ್ದಾರೆ" ಎಂದರು.
"ಈ ಸಂಬಂಧ ಮುಂಡಗೋಡ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಅಪಹರಣ ಮಾಡಿದವರು ಜಮೀರ್ ಕುಟುಂಬಸ್ಥರಿಗೆ ಕರೆ ಮಾಡಿ 35 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದರೆ ಜಮೀರ್ ಅವರನ್ನು ಸಾಯಿಸುವುದಾಗಿ ಬೆದರಿಸಿದ್ದರು. ಶುಕ್ರವಾರ ಬೆಳಗಿನ ಜಾವ 4 ಗಂಟೆಗೆ ಹಾವೇರಿ ಬಳಿಯ ಟೋಲ್ಗೇಟ್ ಹತ್ತಿರ ಜಮೀರ್ ಅವರನ್ನು ಅಪಹರಣಕಾರರು ಬಿಟ್ಟು ಹೋಗಿದ್ದಾರೆ. ಅವರ ಕಾಲಿಗೆ ಚಾಕುವಿನಿಂದ ಚುಚ್ಚಿ ಗಾಯ ಮಾಡಿದ್ದಾರೆ. ಹೆಚ್ಚಿನ ಮಾಹಿತಿ ತನಿಖೆಯ ಬಳಿಕ ಗೊತ್ತಾಗಲಿದೆ" ಎಂದು ತಿಳಿಸಿದರು.
ಇದನ್ನೂ ಓದಿ: ಬಿಯರ್ ಬಾಟಲ್ ಕಿತ್ತುಕೊಂಡ ಸ್ನೇಹಿತನ ಹತ್ಯೆ ಮಾಡಿದ್ದ 7 ಜನರ ಬಂಧನ
ಇದನ್ನೂ ಓದಿ: ಹುಬ್ಬಳ್ಳಿ: ಆಸ್ತಿ ವಿಚಾರಕ್ಕೆ ಮಗನಿಂದಲೇ ತಂದೆ - ತಾಯಿ ಹತ್ಯೆ