ಕನ್ನಡ ಚಿತ್ರರಂಗದ ಕಲಾಕರ್ ಖ್ಯಾತಿಯ ಹರೀಶ್ ರಾಜ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ "ವೆಂಕಟೇಶಾಯ ನಮಃ". ಇತ್ತೀಚೆಗೆ ತಮ್ಮ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ಚಿತ್ರತಂಡ, ಪತ್ರಿಕಾಗೋಷ್ಠಿ ಆರಂಭಕ್ಕೂ ಮುನ್ನ ಟೀಸರ್ ಪ್ರದರ್ಶಿಸಿದರು.
ಬ್ರೇಕ್ಅಪ್ ಆದ ವೆಂಕಟೇಶನ ಸುತ್ತ ನಡೆಯುವ ಕಥೆ: ನಟ - ನಿರ್ದೇಶಕ ಹರೀಶ್ ರಾಜ್ ಮಾತನಾಡಿ, ನಮ್ಮ ವೆಂಕಟೇಶಾಯ ನಮಃ ಚಿತ್ರಕ್ಕೆ ಸ್ಪೂರ್ತಿಯೇ ನಾನು ಈ ಹಿಂದೆ ಅಭಿನಯಿಸಿರೋ ಗೋವಿಂದಾಯ ನಮಃ ಚಿತ್ರ ಎನ್ನಬಹುದು. ಹಾಗಾಗಿಯೇ, ಮತ್ತೆ ಪ್ಯಾರ್ಗೆ ಆಗ್ಬಿಟ್ಟೈತೆ... ಅನ್ನೋ ಅಡಿಬರ ಕೂಡಾ ಬಳಸಿಕೊಂಡಿದ್ದೇವೆ. ಆ ಟ್ಯೂನ್ ಸಹ ಮತ್ತೆ ಬಳಸಿಕೊಳ್ಳುವ ಉದ್ದೇಶ ಇದೆ. ಇದೊಂದು ಲವ್ ಸ್ಟೋರಿ ಸಿನಿಮಾ. ಹುಡುಗಿ ಕೈ ಕೊಟ್ಟಾಗ ಲೈಫ್ ಅನ್ನು ಚಾಲೆಂಜ್ ಆಗಿ ತೆಗೆದುಕೊಂಡು ಲವ್ ಮಾಡದೇ ಹುಡುಗೀರ ಜೊತೆ ಕೇವಲ ಚೆಲ್ಲಾಟವಾಡುತ್ತಾ, ಎಂಜಾಯ್ ಮಾಡಬೇಕು ಎಂಬ ವೆಂಕಿ ಅಲಿಯಾಸ್ ವೆಂಕಟೇಶನ ಸುತ್ತ ನಡೆಯುವ ಕಥೆ ಇದು. ಪ್ರೇಕ್ಷಕರಿಗೆ ಮನರಂಜನೆ ಉಣಬಡಿಸಲು ವೆಂಕಟೇಶ ಸಜ್ಜಾಗಿದ್ದಾನೆ.
8 ಹೀರೋಯಿನ್ಗಳು: ನಾನು ಚಿತ್ರದಲ್ಲಿ ಸಾಫ್ಟ್ವೇರ್ ಉದ್ಯೋಗಿ ಪಾತ್ರವನ್ನು ನಿರ್ವಹಿಸಿದ್ದೇನೆ. ನನ್ನ ತಾಯಿ ಪಾತ್ರದಲ್ಲಿ ಹಿರಿಯ ನಟಿ ಉಮಾಶ್ರೀ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ 8 ಹೀರೋಯಿನ್ಗಳಿದ್ದು, ಇಬ್ಬರು ನಾಯಕಿಯರು ಪ್ರಮುಖವಾಗಿ ಕಾಣಿಸಿಕೊಳ್ಳಲಿದ್ದಾರೆ. ದೊಡ್ಡ ತಾರಾ ಬಳಗದ ಚಿತ್ರದಲ್ಲಿ ನಾಯಕನಾಗಿ ನಟಿಸೋ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿ ಒದಗಿಸಲಿದ್ದೇವೆ. ನಿಮ್ಮ ಬೆಂಬಲ ನಮಗಿರಲಿ ಎಂದು ಕೇಳಿಕೊಂಡರು.
ಮೊದಲ ಹಂತದ ಚಿತ್ರೀಕರಣ ಪೂರ್ಣ: ನಿರ್ಮಾಪಕ ಪಿ.ಜನಾರ್ದನ ಮಾತನಾಡಿ, ನಿರ್ದೇಶಕರು ಈ ಕಾಮಿಡಿ ಸಬ್ಜೆಕ್ಟ್ ಹೇಳಿದ್ರು. ನಮಗೆ ಬಹಳ ಇಷ್ಟವಾಗಿ ಸಿನಿಮಾವನ್ನು ಆರಂಭಿಸಿದ್ದೇವೆ. ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದೆ. ನಿಮ್ಮ ಬೆಂಬಲ ಬಯಸುತ್ತೇವೆ ಎಂದು ತಿಳಿಸಿದರು.
ಹಿರಿಯ ನಟ ಅಶೋಕ್ ಮಾತನಾಡಿ, ನಟ ನಿರ್ದೇಶಕ ಹರೀಶ್ ರಾಜ್ ನನಗೆ ದಂಡಪಿಂಡಗಳು ಧಾರಾವಾಹಿ ಮೂಲಕ ಪರಿಚಯ. ನಟನೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಒಟ್ಟೊಟ್ಟಿಗೆ ಹೇಗೆ ನಿಭಾಯಿಸುತ್ತಾರೆ ಎಂಬುದೇ ನನಗೆ ಆಶ್ಚರ್ಯ. ನನ್ನ 50 ವರ್ಷಗಳ ಈ ಸಿನಿಪಯಣದಲ್ಲಿ ನಿರ್ದೇಶನ ಮಾಡುವುದಕ್ಕೆ ಇಂದಿಗೂ ಭಯ ಪಡುತ್ತೇನೆ. ಈಗಿನ ಸಿನಿಮಾ ಟ್ರೆಂಡೇ ಬದಲಾಗಿದೆ. ವರ್ಷಕ್ಕೆ 200 ಚಿತ್ರಗಳು ಬಂದರೆ ಬೆರಳೆಣಿಕೆಯ ಚಿತ್ರಗಳು ಮಾತ್ರ ಯಶಸ್ಸು ಕಾಣುತ್ತಿವೆ. ಈ ಸಿನಿಮಾದಲ್ಲಿ ನಾನು ನಾಯಕಿಯ ತಂದೆಯ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಕಾಮಿಡಿ ಸಬ್ಜೆಕ್ಟ್ ಇದು. ಎಲ್ಲರೂ ನಮ್ಮ ತಂಡಕ್ಕೆ ಸಹಕಾರ ನೀಡಿ ಎಂದು ಕೇಳಿಕೊಂಡರು.
ಮತ್ತೊಬ್ಬ ಹಿರಿಯ ನಟ ಉಮೇಶಣ್ಣ ಮಾತನಾಡಿ, ಹಿರಿಯ ಕಲಾವಿದರನ್ನು ಗುರುತಿಸಿ ಅವಕಾಶ ನೀಡುತ್ತಿರುವುದಕ್ಕೆ ಬಹಳ ಸಂತೋಷವಾಗುತ್ತದೆ. ನನ್ನದು ಈ ಚಿತ್ರದಲ್ಲಿ ಹುಡುಗಿ ತೋರಿಸುವ ಬ್ರೋಕರ್ ಪಾತ್ರ. ನಿರ್ದೇಶಕರಿಗೆ ನನ್ನ ಎಕ್ಸ್ಪ್ರೆಶನ್ ಮೇಲೆ ನಂಬಿಕೆ ಜಾಸ್ತಿ. ಹಾಗಾಗಿ ಈ ಪಾತ್ರ ಸಿಕ್ಕಿದೆ ಎಂದರು.
ಇದನ್ನೂ ಓದಿ: ವಿಡಿಯೋ: ವೃಂದಾವನ ಆಶ್ರಮಕ್ಕೆ ಮಕ್ಕಳೊಂದಿಗೆ ಭೇಟಿ ಕೊಟ್ಟ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ
ಮತ್ತೋರ್ವ ಹಾಸ್ಯನಟ ತಬಲಾ ನಾಣಿ ಮಾತನಾಡಿ, ನಿರ್ದೇಶಕರು ಮೊದಲು ನನ್ನ ಜೊತೆ ಈ ಕಥೆಯ ಚರ್ಚೆ ನಡೆಸಿದ್ದರು. ಇದು ಪ್ರಸ್ತುತ ಕಾಲಘಟ್ಟಕ್ಕೆ ಸೂಕ್ತ ಎನಿಸಿತು. ಅದರಂತೆ ಚಿತ್ರೀಕರಣ ಆರಂಭಗೊಂಡಿದೆ. ನನ್ನದು ಚಿತ್ರ ನಿರ್ದೇಶಕನ ಪಾತ್ರ. ಮೊದಲು ಸಣ್ಣ ಪಾತ್ರ ಬೇಡ ಎಂದಿದ್ದೆ. ನಂತರ ಪಾತ್ರದ ತೂಕ ಇಷ್ಟವಾಯಿತು. ಇನ್ನೂ ಚಿತ್ರೀಕರಣದದಲ್ಲಿ ಇಂಪ್ರೊವೈಸೇಶನ್ ಬಹಳ ಸೊಗಸಾಗಿ ಸಾಗುತ್ತಿದೆ ಎಂದರು.
ಇನ್ನೂ ಚಿತ್ರದಲ್ಲಿ ನಾಯಕಿಯರಾದ ಪ್ರಕೃತಿ, ಆರಾಧನಾ, ನಾಯಕಿಯ ತಾಯಿಯಾಗಿ ಚಿತ್ಕಲ ಬಿರಾದರ್, ರಾಘು ರಾಮನಕೊಪ್ಪ, ರೇಣುಕಾ ಸೇರಿದಂತೆ ಚಿತ್ರತಂಡದವರು ತಮ್ಮ ತಮ್ಮ ಪಾತ್ರಗಳ ಕುರಿತು ಮಾಹಿತಿ ಹಂಚಿಕೊಂಡರು.
ಇದನ್ನೂ ಓದಿ: ಸ್ಯಾಂಡಲ್ವುಡ್ ಸೆಲೆಬ್ರಿಟಿಗಳನ್ನು ಮದುವೆಗೆ ಆಹ್ವಾನಿಸಿದ ಡಾಲಿ ಧನಂಜಯ್: ವಿಡಿಯೋ ನೋಡಿ
ಶ್ರೀ ಲಕ್ಷ್ಮಿ ಜನಾರ್ದನ ಮೂವೀಸ್ ಮೂಲಕ ನಿರ್ಮಾಣವಾಗುತ್ತಿರುವ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಎರಡನೇ ಹಂತದ ಚಿತ್ರೀಕರಣವನ್ನು ಇದೇ ತಿಂಗಳು 20ರಿಂದ ಆರಂಭಿಸಲು ನಿರ್ಧರಿಸಿದ್ದೇವೆ. ಸುಮಾರು 45 ದಿನಗಳ ಕಾಲ ಚಿತ್ರೀಕರಣ ಮಾಡುವ ಪ್ಲ್ಯಾನ್ ಅನ್ನು ಚಿತ್ರತಂಡ ಹಾಕಿಕೊಂಡಿದೆ. ಚಿತ್ರಕ್ಕೆ ಶಿವಶಂಕರ್ ಛಾಯಾಗ್ರಹಣ, ಪ್ರವೀಣ್ ಶ್ರೀನಿವಾಸ್ ಮೂರ್ತಿ ಸಂಗೀತ, ಪ್ರಮೋದ್ ಮರುವಂತೆ, ಚೇತನ್ ಕುಮಾರ್ ಸಾಹಿತ್ಯ, ಜೀವನ್ ಪ್ರಕಾಶ್ ಸಂಕಲನ, ವಿನಯ್.ಜಿ ಆಲೂರ್ ಡಿ.ಐ, ಸಂತೋಷ್ ಸಿ.ಎಂ ಸಹ ನಿರ್ದೇಶನ, ಶ್ರೀನಿವಾಸ್ ವಸ್ತ್ರಲಂಕಾರವಿದೆ.