ಗಂಗಾವತಿ: ದೇಗುಲಗಳ ಕಟ್ಟಡ ವಿನ್ಯಾಸ ಮತ್ತು ನಿರ್ಮಾಣದಲ್ಲಿ ಹೆಸರು ಮಾಡಿದ್ದ ಉಡುಪಿ ಜಿಲ್ಲೆಯ ಬ್ರಹ್ಮಾವರದ ಎಂ.ಕೆ.ಟೆಂಪಲ್ ಕನ್ಸ್ಟ್ರಕ್ಷನ್ ಮಾಲೀಕ, ಯುವ ಇಂಜಿನಿಯರ್ವೊಬ್ಬರು ನಗರದ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರನ್ನು ಬ್ರಹ್ಮಾವರದ ವಿನಯ್ ಕುಮಾರ್ (38) ಎಂದು ಗುರುತಿಸಲಾಗಿದೆ. ನಗರದ ಕನಕಗಿರಿ ರಸ್ತೆಯಲ್ಲಿರುವ ಕೃಷಿ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ ಸಮೀಪದಲ್ಲಿ ಬಾಡಿಗೆ ಮನೆಯಲ್ಲಿ ಇವರು ವಾಸವಾಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ವಿನಯ್ ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಂಗಾವತಿಯ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಬ್ರಹ್ಮಾವರದಲ್ಲಿ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಮೃತನ ಸಂಬಂಧಿಕರು ತಿಳಿಸಿದ್ದಾರೆ.
ಹತ್ತಾರು ದೇಗುಲಗಳ ನಿರ್ಮಾತೃ: ವಿಭಿನ್ನ ಶೈಲಿಯ ದೇಗುಲಗಳ ನಿರ್ಮಾಣದಲ್ಲಿ ವಿನಯ್ ಕೆಲಸ ಮಾಡಿದ್ದರು. ಗ್ರಾನೈಟ್, ಅಮೃತ ಶಿಲೆ ಸೇರಿದಂತೆ ಸ್ಥಳೀಯವಾಗಿ ಲಭ್ಯವಾಗುವ ಕಚ್ಚಾ ಸಾಮಗ್ರಿ, ಶಿಲೆಗಳನ್ನು ಬಳಸಿಕೊಂಡು ಅತ್ಯಾಕರ್ಷಕ ಶೈಲಿಯಲ್ಲಿ ದೇವಾಲಯಗಳನ್ನು ನಿರ್ಮಿಸುತ್ತಿದ್ದರು. ಗಂಗಾವತಿಯ ನ್ಯಾಯಾಲಯದ ಮುಂದಿರುವ ಕೊಟ್ಟೂರು ಬಸವೇಶ್ವರ ದೇವಸ್ಥಾನ, ಕನಕಗಿರಿ ರಸ್ತೆಯಲ್ಲಿರುವ ಹಾಲುಮತ ಸಮಾಜದ ಬೀರಲಿಂಗೇಶ್ವರ ದೇಗುಲ, ಕಿಂದಿಕ್ಯಾಂಪಿನಲ್ಲಿರುವ ರಾಮ ದೇಗುಲಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದರು.
ಗಂಗಾವತಿ ತಾಲೂಕಿನ ಕೋಟಯ್ಯಕ್ಯಾಂಪಿನಲ್ಲಿ ಕೋಟ್ಯಂತರ ರೂಪಾಯಿ ಮೊತ್ತದಲ್ಲಿ ಶ್ರೀರಾಮ ದೇವರ ದೇವಸ್ಥಾನ ನಿರ್ಮಾಣವನ್ನು ಇದೇ ವಿನಯ್ ಕುಮಾರ್ ಮಾಡಿದ್ದರು. ಇದೇ ಫೆಬ್ರವರಿ 26ರಿಂದ ದೇಗುಲ ಆರಂಭೋತ್ಸವದ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ: ಹಾಸನ: ಜಾನುವಾರು ಹುಡುಕಲು ಹೋದ ಮಹಿಳೆ ಕಾಡಾನೆ ದಾಳಿಗೆ ಬಲಿ