ಮೈಸೂರು : ತಾಯಿಯಿಂದ ದೂರವಾಗಿದ್ದ ಚಿರತೆ ಮರಿಗಳನ್ನು ಮರಳಿ ಅಮ್ಮನ ಮಡಿಲು ಸೇರಿಸುವಲ್ಲಿ ಮೈಸೂರು ಅರಣ್ಯ ಇಲಾಖೆಯ ಚಿರತೆ ಕಾರ್ಯಪಡೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ಬುಗುತ್ಗಳ್ಳಿ ಗ್ರಾಮದ ಬಳಿಯ ಪೈಪ್ವೊಂದರಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿದ್ದ ಚಿರತೆ, ಜನರಿಂದ ಭಯಗೊಂಡು ಮರಿಗಳನ್ನು ಬಿಟ್ಟು ಓಡಿಹೋಗಿತ್ತು.
ಚಿರತೆ ಕಾರ್ಯಪಡೆ ಸಿಬ್ಬಂದಿ ಆರು ದಿನಗಳ ನಿರಂತರ ಕಾರ್ಯಾಚರಣೆ ನಡೆಸಿ, ಮೂರು ಚಿರತೆ ಮರಿಗಳನ್ನು ರಕ್ಷಿಸಿ, ತಾಯಿಯ ಜೊತೆ ಸೇರಿಸಿದ್ದಾರೆ. ಫೆಬ್ರವರಿ 7ರ ಬೆಳಗ್ಗೆ ಮೈಸೂರು ತಾಲೂಕಿನ ವರುಣ ಹೋಬಳಿಯ ಬುಗುತ್ಗಳ್ಳಿ ಗ್ರಾಮದ ಎಸ್.ಎಂ.ಪಿ. ಲೇಔಟ್ನ ಪೈಪ್ ಕಲ್ವೆರ್ಟ್ನಲ್ಲಿ 2 ಚಿರತೆ ಮರಿಗಳು ಇರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಬಂದಿತ್ತು. ಮೈಸೂರಿನ ಚಿರತೆ ಕಾರ್ಯಪಡೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಎರಡು ಚಿರತೆ ಮರಿಗಳನ್ನು ರಕ್ಷಿಸಿದ್ದರು. ಯಾವುದೇ ಭಯಪಡದೇ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಲಾಗಿತ್ತು. ಬಳಿಕ ಫೆಬ್ರವರಿ 09ರಂದು ಮತ್ತೊಂದು ಮರಿಯನ್ನು ರಕ್ಷಿಸಲಾಗಿತ್ತು.
ಮೂರು ಚಿರತೆ ಮರಿಗಳ ರಕ್ಷಣೆ ಬಳಿಕ ನಿರಂತರವಾಗಿ ತಾಯಿ ಚಿರತೆಗಾಗಿ ಹುಡುಕಾಡುವ ಕಾರ್ಯಾಚರಣೆ ನಡೆದಿತ್ತು. ಇಂದು (ಫೆಬ್ರವರಿ 13) ಮರಿ ಸಿಕ್ಕ ಜಾಗದಲ್ಲಿನ ಪೈಪ್ ಕಲ್ವರ್ಟ್ನಲ್ಲಿದ್ದ ತಾಯಿ ಚಿರತೆಯನ್ನು ಹುಡುಕಿ, ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ.
![forest-department-reunites-three-separated-leopard-cubs-with-their-mother](https://etvbharatimages.akamaized.net/etvbharat/prod-images/13-02-2025/ka-mys-05-13-02-2025-chirathe-news-7208092_13022025182609_1302f_1739451369_156.jpg)
ದೂರವಾಗಿದ್ದ ಮೂರು ಮರಿಗಳನ್ನು ಆರು ದಿನಗಳ ಪ್ರಯಾಸಕರ ಕಾರ್ಯಾಚರಣೆಯ ನಂತರ ತಾಯಿ ಚಿರತೆಯೊಂದಿಗೆ ಸೇರಿಸುವಲ್ಲಿ ಚಿರತೆ ಕಾರ್ಯಪಡೆ ಯಶಸ್ವಿಯಾಗಿದೆ. ತಾಯಿ ಮರಿಗಳ ಆರೋಗ್ಯ ತಪಾಸಣೆ ಹಾಗೂ ಪುನರ್ಮಿಲನ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಉಪ ಅರಣ್ಯ ಸಂಕ್ಷಣಾಧಿಕಾರಿ ಹಾಗೂ ಚಿರತೆ ಕಾರ್ಯ ಪಡೆಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
![forest-department-reunites-three-separated-leopard-cubs-with-their-mother](https://etvbharatimages.akamaized.net/etvbharat/prod-images/13-02-2025/ka-mys-05-13-02-2025-chirathe-news-7208092_13022025182609_1302f_1739451369_545.jpg)
ಇದನ್ನೂ ಓದಿ: ದುಡಿದ ಹಣದಲ್ಲಿ ಅನ್ನದಾನ: ಕುಟುಂಬದ ದಾಸೋಹ ಪರಂಪರೆ ಮುಂದುವರೆಸಿಕೊಂಡು ಬಂದ ದಂಪತಿ ಹಿಂದಿದೆ ನೋವಿನ ಕಥೆ