ನಂದೂರಬಾರ್ (ಮಹಾರಾಷ್ಟ್ರ): ನಂದೂರಬಾರ್ ನಲ್ಲಿನ ಜಿಲ್ಲಾ ಪಂಚಾಯತ್ ಶಾಲೆಯ ವಿದ್ಯಾರ್ಥಿಗಳು ಯಾವುದೇ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಗಳಿಗಿಂತಲೂ ಕಡಿಮೆ ಇಲ್ಲದಂತೆ ಕಲಿಕೆಯಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ. ಜಿಲ್ಲಾ ಪಂಚಾಯತ್ ಬಾಲ್ ಅಮ್ರಾಯಿ ಶಾಲೆಯ ಎಲ್ಲ ವಿದ್ಯಾರ್ಥಿಗಳು ಏಕಕಾಲಕ್ಕೆ ಎರಡೂ ಕೈಯಿಂದ ಬರೆಯಬಲ್ಲವರಾಗಿರುವುದು ವಿಶೇಷವಾಗಿದೆ. ಇದನ್ನು ನಾವು ಕೇವಲ ಸಿನಿಮಾ ಅಥವಾ ಕತೆಗಳಲ್ಲಿ ನೋಡಿದ್ದೆವು. ಆದರೆ, ಇಲ್ಲಿ ವಾಸ್ತವದಲ್ಲಿ ಮಕ್ಕಳು ಎರಡೂ ಕೈಯಿಂದ ಬರೆಯುತ್ತಾರೆ.
ಮಕ್ಕಳು ಎರಡೂ ಕೈಯಿಂದ ಬರೆಯುವುದರಲ್ಲಿ ನೈಪುಣ್ಯತೆ ಸಾಧಿಸಿರುವುದರಲ್ಲಿ ಇಲ್ಲಿನ ಶಿಕ್ಷಕರ ಪಾತ್ರ ಬಹಳ ಮಹತ್ವದ್ದಾಗಿದೆ. ಜಿಲ್ಲಾ ಪಂಚಾಯತ್ ಶಾಲೆಯ ಶಿಕ್ಷಣದ ಗುಣಮಟ್ಟ ಸುಧಾರಿಸಲು ಇಲ್ಲಿನ ಶಿಕ್ಷಕರು ಸತತವಾಗಿ ಶ್ರಮಿಸುತ್ತಿದ್ದು, ಈಗ ಅದರ ಫಲಿತಾಂಶ ಕಾಣ ಬರತೊಡಗಿದೆ.
ಇದೊಂದು ಸಣ್ಣ ಗ್ರಾಮ: ಬಾಲ್ ಅಮ್ರಾಯಿ 1000 ಕ್ಕಿಂತಲೂ ಕಡಿಮೆ ಜನಸಂಖ್ಯೆ ಹೊಂದಿರುವ ಸಣ್ಣ ಗ್ರಾಮವಾಗಿದೆ. ಇಲ್ಲಿನ ಶಾಲೆಯ ವಿದ್ಯಾರ್ಥಿಗಳು ಏಕಕಾಲಕ್ಕೆ ಎರಡೂ ಕೈಯಿಂದ ಬರೆಯುವ ಸಾಮರ್ಥ್ಯ ಹೊಂದಿದ್ದಾರೆ. ಮರಾಠಿಯಲ್ಲಿ ಬರೆಯುವುದಾಗಲಿ ಅಥವಾ ಗಣಿತ ಬಿಡಿಸುವುದಾಗಲಿ ಅದನ್ನು ಎರಡೂ ಕೈಗಳಿಂದ ಈ ವಿದ್ಯಾರ್ಥಿಗಳು ಮಾಡುವುದು ವಿಶೇಷ.
ಕಪ್ಪು ಹಲಗೆಯ ಮೇಲೆ ಈ ವಿದ್ಯಾರ್ಥಿಗಳು ಎರಡೂ ಕೈಗಳಿಂದ ಮುತ್ತಿನಂಥ ಅಕ್ಷರ ಬರೆಯಬಲ್ಲವರಾಗಿದ್ದಾರೆ. ಅವರು ಗಾದೆಗಳು, ಸಮಾನಾರ್ಥಕ ಪದಗಳು, ವಿರುದ್ಧಾರ್ಥಕ ಪದಗಳನ್ನು ಬಾಯಿ ಪಾಠದಿಂದಲೇ ಹೇಳುವುದು ವಿಶೇಷ. ಅವರು ಅಪಾರ ಆತ್ಮವಿಶ್ವಾಸ ಮತ್ತು ಕೆಲಸದ ಅನುಭವದ ಮೂಲಕ ವಿವಿಧ ವಿಷಯಗಳನ್ನು ಕಲಿಯುತ್ತಿದ್ದಾರೆ. ನಂದೂರ್ ಬಾರ್ ಜಿಲ್ಲೆಯು ಪ್ರಧಾನವಾಗಿ ಬುಡಕಟ್ಟು ಜನಾಂಗದ ಜಿಲ್ಲೆಯಾಗಿದೆ. ಇಲ್ಲಿನ ಶಿಕ್ಷಣದ ಗುಣಮಟ್ಟ ಚೆನ್ನಾಗಿಲ್ಲ ಎಂದು ಆರೋಪಿಸಲಾಗುತ್ತದೆ. ಆದರೆ, ನಂದೂರ ಬಾರ್ ತಾಲೂಕಿನ ಬಾಲ್ ಅಮ್ರಾಯಿನಲ್ಲಿರುವ ಜಿಲ್ಲಾ ಪಂಚಾಯತ್ ಶಾಲೆಯ ಶಿಕ್ಷಕರು ಶಿಕ್ಷಣದ ಗುಣಮಟ್ಟದ ಬಗ್ಗೆ ಎತ್ತಲಾದ ಪ್ರಶ್ನೆಗೆ ಸೂಕ್ತ ಉತ್ತರ ನೀಡಿದ್ದಾರೆ.
ಎಲ್ಲ ವಿದ್ಯಾರ್ಥಿಗಳು ಎರಡೂ ಕೈಗಳಿಂದ ಬರೆಯಬಲ್ಲರು: ಈ ಜಿಲ್ಲಾ ಪರಿಷತ್ ಶಾಲೆಯ ಎಲ್ಲ ವಿದ್ಯಾರ್ಥಿಗಳು ಎರಡೂ ಕೈಗಳಿಂದ ಪಧೆ, ಬಾರಾಖಡಿ, ಇಂಗ್ಲಿಷ್ ಮತ್ತು ಮರಾಠಿ ಪದಗಳನ್ನು ಬರೆಯುತ್ತಾರೆ. ಒಂದರಿಂದ ನಾಲ್ಕನೇ ತರಗತಿಯವರೆಗೆ ನಾಲ್ಕು ತರಗತಿಗಳಿಗೆ ಇಬ್ಬರು ಶಿಕ್ಷಕರು ಇದ್ದಾರೆ. ಭವಿಷ್ಯದಲ್ಲಿ ಶಿಕ್ಷಣ ಇಲಾಖೆಯ ಈ ಕೆಲಸ ಮತ್ತು ಗುಣಮಟ್ಟ ಸುಧಾರಿಸುವ ಪ್ರಯತ್ನಗಳು ಖಂಡಿತವಾಗಿಯೂ ಫಲ ನೀಡಲಿವೆ ಎನ್ನುತ್ತಾರೆ ಪ್ರಾಥಮಿಕ ಶಾಲಾ ಶಿಕ್ಷಕ ದೇವರಾಮ್ ಪಾಟೀಲ್.
ಇಂಗ್ಲಿಷ್ ಮಾಧ್ಯಮ ಶಾಲೆಗಳಿಗಿಂತ ಮುಂದು: ಇಲ್ಲಿನ ವಿದ್ಯಾರ್ಥಿಗಳು ಇಂಗ್ಲಿಷ್ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಿಗಿಂತ ಸ್ಪಷ್ಟವಾಗಿ ಇಂಗ್ಲಿಷ್ ಓದಬಲ್ಲವರಾಗಿದ್ದಾರೆ. ಅವರು ಗಣಿತದಲ್ಲಿ 30 ರವರೆಗಿನ ಮಗ್ಗಿಗಳನ್ನು ಬಾಯಿ ಪಾಠದಿಂದ ನಿಖರವಾಗಿ ಹೇಳುತ್ತಾರೆ. ಹಿಮ್ಮುಖವಾಗಿ ಓದುವಲ್ಲಿಯೂ ಈ ಮಕ್ಕಳ ಸಾಧನೆ ವಿಶಿಷ್ಟವಾಗಿದೆ. ಇದೇ ಈ ಶಾಲೆಯ ವಿಶೇಷತೆಯಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗಳಿಗೆ ಸೇರಿಸಲು ಹೆಣಗಾಡುತ್ತಾರೆ. ಆದಾಗ್ಯೂ, ಇಲ್ಲಿನ ಶಿಕ್ಷಕರು ಜಿಲ್ಲಾ ಪರಿಷತ್ ಶಾಲೆಗಳಲ್ಲಿ ವಿದ್ಯಾರ್ಥಿಗಳ ಗುಣಮಟ್ಟವನ್ನು ಹೆಚ್ಚಿಸಲು ತಮ್ಮ ಗುಣಮಟ್ಟವನ್ನು ಸಾಬೀತುಪಡಿಸಿದ್ದಾರೆ ಮತ್ತು ಜಿಲ್ಲಾ ಪಂಚಾಯತ್ ಶಾಲೆಗಳು ಸಹ ಉತ್ತಮವಾಗಿವೆ ಎಂದು ತೋರಿಸಿದ್ದಾರೆ. ಅದಕ್ಕಾಗಿಯೇ ಹಳ್ಳಿಯ ವಿದ್ಯಾರ್ಥಿಗಳ ಪೋಷಕರು ತಮ್ಮ ವಿದ್ಯಾರ್ಥಿಗಳನ್ನು ಉತ್ಸಾಹದಿಂದ ಶಿಕ್ಷಣಕ್ಕಾಗಿ ಇಲ್ಲಿಗೆ ಕಳುಹಿಸುತ್ತಾರೆ. ವಿದ್ಯಾರ್ಥಿಗಳಿಗಾಗಿ ಶಿಕ್ಷಕರು ಮಾಡಿದ ಪ್ರಯತ್ನಗಳನ್ನು ನೋಡಿ ಅವರನ್ನು ಗೌರವಿಸುತ್ತಾರೆ.
ಎಲ್ಲರೂ ಬುಡಕಟ್ಟು ವಿದ್ಯಾರ್ಥಿಗಳೇ: "ಭವಿಷ್ಯದಲ್ಲಿ ವಿದ್ಯಾರ್ಥಿಗಳ ಯಾವುದೇ ಒಂದು ಕೈಗೆ ಸಮಸ್ಯೆಯಾದರೂ ಅವರು ಎರಡೂ ಕೈಗಳನ್ನು ಬಳಸಿ ಬರೆಯಬಹುದಾಗಿರುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ. ನಾವು ವಿದ್ಯಾರ್ಥಿಗಳನ್ನು ಎರಡೂ ಕೈಗಳಿಂದ ಬರವಣಿಗೆಯಲ್ಲಿ ಪ್ರವೀಣರನ್ನಾಗಿ ಮಾಡುತ್ತಿದ್ದೇವೆ. ಬರೆಯುವಾಗ ಕೇಳುವ ಯಾವುದೇ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಎರಡೂ ಕೈಗಳಿಂದ ಬರವಣಿಗೆಯಲ್ಲಿ ಉತ್ತರಿಸುವಂತೆ ನಾವು ಅಭ್ಯಾಸ ಮಾಡಿಸುತ್ತಿದ್ದೇವೆ. ಎಲ್ಲರೂ ಬುಡಕಟ್ಟು ವಿದ್ಯಾರ್ಥಿಗಳಾಗಿದ್ದರೂ, ಇದಕ್ಕಾಗಿ ಪೋಷಕರಿಂದ ಸಾಕಷ್ಟು ಬೆಂಬಲ ಸಿಗುತ್ತಿದೆ" ಎಂದರು ಶಿಕ್ಷಕ ದೇವರಾಮ್ ಪಾಟೀಲ್.
ಇದನ್ನೂ ಓದಿ : ಸ್ಮಶಾನದಲ್ಲೊಂದು ಶಾಲೆ: ಬಡ ವಿದ್ಯಾರ್ಥಿಗಳಿಗಾಗಿ ಬಿಹಾರ ಯುವಕನ ಮಾದರಿ ಕಾರ್ಯ - A SCHOOL IN A GRAVEYARD