ಹುಬ್ಬಳ್ಳಿ :ಕೇಶ್ವಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ರಮೇಶಭವನದ ಎದುರುಗಡೆಯಿರುವ ಭುವನೇಶ್ವರಿ ಜ್ಯುವೆಲ್ಲರ್ಸ್ ಅಂಗಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಅಂತರರಾಜ್ಯ ಕಳ್ಳರನ್ನು ಬಂಧಿಸಲಾಗಿದ್ದು, 77 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಕಾರು, ಗ್ಯಾಸ್ ಕಟರ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹು - ಧಾ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಹೇಳಿದ್ದಾರೆ.
ಈ ಕುರಿತು ನಗರದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಕಳ್ಳತನ ಪ್ರಕರಣದಲ್ಲಿ ಮುಂಬೈ ಮೂಲದ ಫರಾನ್ ಶೇಖ್, ಮುಖೇಶ್ ಉರ್ಫ ರಾಜು ಯಾದವ್, ಫಾತಿಮಾ ಶೇಖ್, ಅಪ್ತಾಬ್ ಅಹ್ಮದ್ ಶೇಖ್, ತಲತ್ ಶೇಖ್ ಎಂಬುವರನ್ನು ಬಂಧಿಸಿದ್ದು, ಮೂರು ಪ್ರಮುಖ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದೇವೆ. ಫರಾನ್ ಶೇಖ್ ಮೇಲೆ 15 ಪ್ರಕರಣಗಳು ಇದ್ದು, ಫಾತಿಮಾ ಶೇಖ್ ಮೇಲೆ 2 ಪ್ರಕರಣ ಸೇರಿ ಆರೋಪಿಗಳ ಮೇಲೆ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವುದು ತಿಳಿದು ಬಂದಿದೆ.
ಪ್ರಕರಣ ಭೇದಿಸಲು ಕೇಶ್ವಾಪೂರ ಪೊಲೀಸ್ ಠಾಣೆ, ಗೋಕುಲ್ ರೋಡ್ ಹಾಗೂ ಕಮರಿಪೇಟ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ಗಳ ನೇತೃತ್ವದಲ್ಲಿ ಮೂರು ತಂಡ ರಚಿಸಲಾಗಿತ್ತು. ಸುಮಾರು ಸಿಸಿಟಿವಿ ಫೂಟೇಜ್, ಆರೋಪಿಗಳ ಚಲನವಲನ ಹಾಗೂ ಮಾಹಿತಿ ಕಲೆ ಹಾಕಿ 20 ದಿನಗಳ ಕಾಲ ಮುಂಬೈ ನಗರದಲ್ಲಿ ಇದ್ದು, ಆರೋಪಿಗಳನ್ನು ಬಂಧಿಸಲಾಗಿದೆ. 55 ಲಕ್ಷ ಮೌಲ್ಯದ 780 ಗ್ರಾಂ ಬಂಗಾರ, 17 ಲಕ್ಷ ಮೌಲ್ಯದ 23.3 ಕೆಜಿ ಬೆಳ್ಳಿ ಹಾಗೂ 10 ಸಾವಿರ ನಗದು ಮತ್ತು ಕಳ್ಳತನಕ್ಕೆ ಬಳಸಿದ 5 ಲಕ್ಷ ರೂ. ಮೌಲ್ಯದ ಕಾರು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.