ಮಂಗಳೂರು: ಏಳುಪಟ್ಲ ಮೊಗವೀರ ಸಂಯುಕ್ತ ಸಭಾ(ಕದ್ರಿ) ಇದರ ವತಿಯಿಂದ ಸಾಮೂಹಿಕ ಸಮುದ್ರ ಪೂಜೆಯು ಸೋಮವಾರ ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ನೆರವೇರಿತು. ಹೇರಳ ಮತ್ಸ್ಯಸಂಪತ್ತು ಲಭ್ಯವಾಗಲು, ಮತ್ಸ್ಯ ಸಂಪತ್ತು ಉಳಿಯಲು ಮೊಗವೀರ ಸಮಾಜ ಬಂಧುಗಳಿಂದ ನಗರದ ತಣ್ಣೀರುಬಾವಿಯ ಕಡಲ ಕಿನಾರೆಯಲ್ಲಿ ಸಮುದ್ರಪೂಜೆ ನಡೆಸಿದರು.
ಸಮುದ್ರರಾಜನಿಗೆ ಹಾಲು ಸಮರ್ಪಿಸಲು ಪ್ರತೀ ಗ್ರಾಮದಿಂದ ಹಾಲು ಸಂಗ್ರಹಣೆ ಮಾಡಲಾಯಿತು. ಎಲ್ಲಾ ಮೊಗವೀರ ಬಂಧುಗಳು ಬೊಕ್ಕಪಟ್ಣ ಬ್ರಹ್ಮ ಬಬ್ಬರ್ಯ ದೈವಸ್ಥಾನದಲ್ಲಿ ಒಂದಾಗಿ ಬಬ್ಬರ್ಯ ದೈವಕ್ಕೆ ಪ್ರಾರ್ಥನೆ ನೆರವೇರಿಸಿದರು. ಆ ಬಳಿಕ ಸಮುದ್ರ ದಡದಲ್ಲಿ ಭಜನಾ ಸಂಕೀರ್ತನೆ ಹಾಗೂ ಶ್ರೀ ಮಹಾಲಕ್ಷ್ಮಿ ಮಾತೆಗೆ ಪೂಜೆ ನೆರವೇರಿತು. ನಂತರ ಕದ್ರಿ ಜೋಗಿ ಮಠದ ಶ್ರೀರಾಜಯೋಗಿ ನಿರ್ಮಲನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಮೊಗವೀರ ಸಮಾಜ ಬಂಧುಗಳಿಂದ ಸಮುದ್ರಕ್ಕೆ ಕ್ಷೀರ ಸಮರ್ಪಣೆಯಾಯಿತು. ಜೊತೆಗೆ ಹಣ್ಣು, ಕಾಯಿಗಳನ್ನು ಸಮುದ್ರಕ್ಕೆ ಸಮರ್ಪಿಸಲಾಯಿತು.
ಮೀನುಗಾರಿಕೆ ಆರಂಭವಾಗುವ ಹೊತ್ತಿಗೆ ಶ್ರಾವಣದ ಹುಣ್ಣಿಮೆಯ ದಿನ ಮೀನುಗಾರಿಕೆ ಕಸಬಿಗೆ ಒಳಿತಾಗಲೆಂದು ಮೊಗವೀರ ಸಮಾಜ ಬಂಧುಗಳಿಂದ ಸಮುದ್ರರಾಜನಿಗೆ ಪೂಜೆ ನೆರವೇರಿಸಲಾಗುತ್ತದೆ. ಈ ದಿನ ಎಲ್ಲಾ ಮೀನುಗಾರರು ಮೀನುಗಾರಿಕೆಗೆ ರಜೆ ಹಾಕಿ ಸಮುದ್ರ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಆದ್ದರಿಂದ ಇಂದು ಮಂಗಳೂರಿನಲ್ಲಿ ಮೀನುಗಾರಿಕೆ ಸ್ತಬ್ಧವಾಗುತ್ತದೆ.