ಬೆಂಗಳೂರು :ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ವೇದಿಕೆ ಸಿದ್ದವಾಗಿದ್ದು, ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ. ವರ್ಷಾಂತ್ಯಕ್ಕೆ ಮೊದಲ ರೈಲು ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ. ಆಧುನಿಕ ಸೌಲಭ್ಯಗಳೊಂದಿಗೆ ಪರಿಸರ ಸ್ನೇಹಿಯಾಗಿ ನಿರ್ಮಾಣಗೊಂಡಿರುವ ರೈಲು ದೇಶದ ಪ್ರಯಾಣಿಕ ಸಾರಿಗೆ ಸೇವೆಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ.
ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿನ ಪ್ರಾಯೋಗಿಕ ಸಂಚಾರಕ್ಕೆ ಇಂದು ಚಾಲನೆ ನೀಡಲಾಯಿತು. ಕೇಸರಿ ಬಣ್ಣದಲ್ಲಿ ಕಂಗೊಳಿಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಲೀಪರ್ ಕೋಚ್ ರೈಲಿನ ಮೂಲ ಮಾದರಿಯ ಮೊದಲ ರೈಲಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅನಾವರಣಗೊಳಿಸಿದ್ದು, ಪ್ರಾಯೋಗಿಕ ಸಂಚಾರಕ್ಕೂ ಚಾಲನೆ ನೀಡಿದರು. ಈ ವೇಳೆ ರೈಲ್ವೆ ಖಾತೆ ರಾಜ್ಯ ಸಚಿವ ಸೋಮಣ್ಣ ಸಾಥ್ ನೀಡಿದರು.
ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಪ್ರಾಯೋಗಿಕ ಸಂಚಾರಕ್ಕೆ ಚಾಲನೆ (ETV Bharat) ಈ ವೇಳೆ ಮಾತನಾಡಿದ ಸಚಿವ ಸೋಮಣ್ಣ, ಕನ್ನಡಿಗರಿಗೆ ಇಂದು ಐತಿಹಾಸಿಕ ದಿನವಾಗಿದೆ. ನಮ್ಮ ಮಣ್ಣಿನಲ್ಲಿ ಭಾರತದ ಇತಿಹಾಸವನ್ನು ಕನ್ನಡಿಗರ ಸ್ವಾಭಿಮಾನದಲ್ಲಿ ಭಾನುವಾರ ಬಿಇಎಂಎಲ್ ಹೊಸ ಮೈಲಿಗಲ್ಲು ಸ್ಥಾಪಿಸುವ ಮೂಲಕ ವಂದೇ ಭಾರತ್ ಸ್ಲೀಪರ್ ರೈಲು ಕೋಚ್ ಸಿದ್ಧಪಡಿಸಿದೆ. ಹವಾ ನಿಯಂತ್ರಿತವಾಗಿರುವ ಈ ರೈಲು ರಾತ್ರಿ ವೇಳೆ ಸಂಚಾರಕ್ಕೆ ಉಪಯುಕ್ತವಾಗಿದ್ದು, ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಇಂದು ಕೇಂದ್ರ ರೈಲ್ವೆ ಸಚಿವರು ಸಮಗ್ರ ಪರಿಶೀಲನೆ ನಡೆಸಿದ್ದಾರೆ. ಇನ್ನು ಮೂರು ತಿಂಗಳಿನಲ್ಲಿ ರಾಷ್ಟ್ರಕ್ಕೆ ಸಮರ್ಪಣೆ ಮಾಡಲಾಗುತ್ತದೆ. ಇದರ ಸಂಪೂರ್ಣ ಕ್ರೆಡಿಟ್ ಕಾರ್ಖಾನೆಯ ನೌಕರರಿಗೆ ಮತ್ತು ಆಡಳಿತ ಮಂಡಳಿ ಮತ್ತು ಪ್ರಧಾನಿ ಮೋದಿಗೆ ಸಲ್ಲಲಿದೆ ಎಂದರು.
ವಂದೇ ಭಾರತ್ ಸ್ಲೀಪರ್ ರೈಲು (ETV Bharat) ರೈಲಿನ ವಿಶೇಷತೆಗಳು :ಸ್ವದೇಶಿ ತಂತ್ರಜ್ಞಾನದೊಂದಿಗೆ ಪರಿಸರ ಸ್ನೇಹಿಯಾಗಿ ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಹಾಗೂ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್)ಗಳಲ್ಲಿ ವಂದೇ ಭಾರತ್ ರೈಲಿನ ಸ್ಲೀಪರ್ ಕೋಚ್‌ಗಳನ್ನು ತಯಾರಿಸಲಾಗಿದೆ.
ವಿಶಾಲವಾದ ಸ್ಥಳಾವಾಕಾಶ ಹೊಂದಿರಲಿರುವ ಸ್ಲೀಪರ್ ಕೋಚ್‌ಗಳಲ್ಲಿ ಆರಾಮದಾಯಕ ಸೀಟ್‌ಗಳು ಇರಲಿವೆ. ಸುಸಜ್ಜಿತ ಹಾಗೂ ವಿಶಾಲ ಶೌಚಾಲಯಗಳು, ಉತ್ತಮ ಬೆಳಕಿನ ವ್ಯವಸ್ಥೆ ಹೊಂದಿರಲಿವೆ.
ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಸಚಿವ ಸೋಮಣ್ಣ (ETV Bharat) ಮೊಬೈಲ್ ಹೋಲ್ಡರ್, ಚಾರ್ಜ್ ಪಾಯಿಂಟ್, ಸ್ನ್ಯಾಕ್ಸ್ ಟೇಬಲ್ ಹೊಂದಿರುವ ಕೋಚ್ಗಳು ಅಪಘಾತ ನಿಯಂತ್ರಕ 'ಕವಚ' ವ್ಯವಸ್ಥೆಯೊಂದಿಗೆ ಉಕ್ಕಿನಿಂದ ನಿರ್ಮಿಸಲಾಗಿದೆ. ಜಿಎಫ್‌ಆರ್‌ಪಿ ಬಳಸಿ ನಿರ್ಮಿಸಿದ ಆಂತರಿಕ ಫಲಕ, ಪೂರ್ಣ ಪ್ರಮಾಣದ ಸ್ವಯಂ ಚಾಲಿತ ಡೋರ್ ಇರಲಿದ್ದು, ಗಂಟೆಗೆ 160 ಕಿ. ಮೀ ವೇಗದಲ್ಲಿ ರೈಲು ಚಲಿಸಲಿದೆ.
ಕೋಚ್‌ಗಳನ್ನು ಸಂಪೂರ್ಣ ಡಿಜಿಟಲೀಕರಣ ಮಾಡಲಾಗಿದೆ. ಬೋಗಿಯ ಒಳಗೆ ಅಳವಡಿಸಿರುವ ಬಟನ್ ಒತ್ತಿ ಲೋಕೋ ಪೈಲೆಟ್ ಜೊತೆ ಮಾತನಾಡಬಹುದು. ಲಗೇಜ್ ಇಡಲು, ಪುಸ್ತಕ, ಪೇಪರ್ಗಳನ್ನ ಇಡಲು ವ್ಯವಸ್ಥೆ ಮಾಡಲಾಗಿದೆ. ಮೊಬೈಲ್ ಚಾರ್ಜರ್ ಅಳವಡಿಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ನಮ್ಮ ಮೆಟ್ರೋದಲ್ಲಿ ಇರುವಂತೆ ಡಿಸ್ಪ್ಲೇ ವ್ಯವಸ್ಥೆಯನ್ನು ಮಾಡಲಾಗಿದೆ. ಇದರಿಂದ ಜನರಿಗೆ ರೈಲು ಎಲ್ಲಿದೆ?. ಯಾವ ನಿಲ್ದಾಣದಲ್ಲಿದೆ. ನಮ್ಮ ನಿಲ್ದಾಣ ಯಾವಾಗ ಬರಲಿದೆ? ಎನ್ನುವುದು ಗೊತ್ತಾಗಲಿದೆ. ತುಂಬಾ ಕಂಫರ್ಟೆಬಲ್ ಆಗಿರುವ ಸೀಟುಗಳ ವ್ಯವಸ್ಥೆ ಮಾಡಲಾಗಿದೆ.
ವಂದೇ ಭಾರತ್ ಸ್ಲೀಪರ್ 16 ಕೋಚ್‌ಗಳನ್ನು ಹೊಂದಿರಲಿದೆ. 4 ಎಸಿ 2 ಟೈಯರ್ ಕೋಚ್ (188 ಬರ್ತ್), 11 ಎಸಿ 3 ಟೈಯರ್ ಕೋಚ್ (611 ಬರ್ತ್), ಮತ್ತು 1 ಎಸಿ ಫಸ್ಟ್ ಕ್ಲಾಸ್ ಕೋಚ್ (24 ಬರ್ತ್) ಒಳಗೊಂಡಿದೆ. ಒಟ್ಟು 823 ಸೀಟುಗಳ ವ್ಯವಸ್ಥೆ ಇರಲಿದೆ. ಫಸ್ಟ್ ಕ್ಲಾಸ್ ಎಸಿ ಬರ್ತ್ನಲ್ಲಿ ಬಿಸಿನೀರಿನ ಶವರ್ ವ್ಯವಸ್ಥೆ ಕಲ್ಪಿಸಿರುವುದು ವಿಶೇಷವಾಗಿದೆ.
ಹೊಸದಾಗಿ ಪರಿಚಯಿಸಲಾದ ಕೋಚ್ ಸುಮಾರು 10 ದಿನಗಳ ಕಾಲ ಪರೀಕ್ಷಾರ್ಥ ಚಾಲನೆಯನ್ನು ನಡೆಸಲಿದೆ. ನಂತರ ಟ್ರ್ಯಾಕ್‌ನಲ್ಲಿ ಸಹ ಪರೀಕ್ಷೆ ನಡೆಸಲಾಗುತ್ತದೆ. ಮುಂದಿನ ಮೂರು ತಿಂಗಳಲ್ಲಿ ರೈಲು ಸಾರ್ವಜನಿಕರಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಯೋಜನೆ ರೂಪಿಸಿಕೊಳ್ಳಲಾಗಿದೆ.
ಹೊಸ ಹ್ಯಾಂಗರ್ : ಕೇಂದ್ರ ರೈಲ್ವೆ ಹಾಗೂ ಮಾಹಿತಿ ಮತ್ತು ಪ್ರಸಾರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರ ಉಪಸ್ಥಿತಿಯಲ್ಲಿ ಇಂದು ಬೆಂಗಳೂರಿನಲ್ಲಿ ಸ್ಟ್ಯಾಂಡರ್ಡ್ ಮತ್ತು ಬ್ರಾಡ್ ಗೇಜ್ ರೋಲಿಂಗ್ ಸ್ಟಾಕ್ ಉತ್ಪಾದನಾ ಸೌಲಭ್ಯಕ್ಕಾಗಿ ಹೊಸ ಹ್ಯಾಂಗರ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ವೇಳೆ, ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಬೆಂಗಳೂರಿನ ಎಂ.ಡಿ.ಟಿ.ಐ ನಲ್ಲಿ ರೈಲ್ವೆ ಇಲಾಖೆಯ ತರಬೇತಿ ನೌಕರರ ಜೊತೆ ಚರ್ಚೆ ನಡೆಯಿತು.
ಇದನ್ನೂ ಓದಿ :ಇನ್ಮುಂದೆ ವಂದೇ ಭಾರತ್ ರೈಲಿನಲ್ಲೂ ಸ್ಲೀಪರ್ ಕೋಚ್ ಅಳವಡಿಕೆ: ದರ, ಮಾರ್ಗದ ಮಾಹಿತಿ ಇಲ್ಲಿದೆ? - SEE VANDE BHARAT SLEEPER TRAIN