ಬೆಂಗಳೂರು: ಸದ್ಯ ಸಿಲಿಕಾನ್ ಸಿಟಿಯಲ್ಲಿ ಮಳೆ ವಿರಾಮ ನೀಡಿದ್ದು, ಮಳೆ ನೀರು ನಿಂತಲ್ಲೇ ನಿಂತಿರುವುದರಿಂದ ಸೊಳ್ಳೆಗಳು ಹೆಚ್ಚಾಗಿ ಡೆಂಗ್ಯೂ ಸೇರಿದಂತೆ ಇತರೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಮಳೆ ನೀರು ನಾಲ್ಕೈದು ದಿನಗಳ ಕಾಲ ಒಂದೆಡೆ ಶೇಖರಣೆಯಾದರೆ ಡೆಂಗ್ಯೂ ಹರಡುವ ಸೊಳ್ಳೆಗಳು ಹೆಚ್ಚಾಗಿ ಉತ್ಪತ್ತಿಯಾಗುವ ಸಾಧ್ಯತೆ ಇದೆ. ಕಡಿಮೆಯಾಗಿದ್ದ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಲಿವೆ. ಇನ್ನು ಮಲೇರಿಯಾ, ಹೆಚ್1ಎನ್1, ಕಾಲರಾ, ಜ್ವರ, ಕೆಮ್ಮು, ನೆಗಡಿ ಸೇರಿದಂತೆ ಇತರೆ ಸೋಂಕು ಕಾಯಿಲೆಗಳು ಜಾಸ್ತಿಯಾಗಲಿವೆ.
ಇನ್ನು, ದಸರಾ ಹಬ್ಬದ ಕಸ ಇನ್ನೂ ನಗರದ ವಿವಿಧ ಭಾಗಗಳಲ್ಲಿ ವಿಲೇವಾರಿಯಾಗದೆ ಉಳಿದಿದ್ದು, ಸಾವಿರಾರು ಟನ್ ಕಸದ ರಾಶಿ ನೀರಿನಲ್ಲಿ ಕೊಳೆತು ನಾರುತ್ತಿದ್ದು, ಜನರಲ್ಲಿ ಸಾಂಕ್ರಾಮಿಕ ರೋಗದ ಭೀತಿ ಕಾಡಲಾರಂಭಿಸಿದೆ. ಒಟ್ಟಿನಲ್ಲಿ ಬಿಟ್ಟುಬಿಡದೇ ಸುರಿದ ಮಳೆ ಮತ್ತು ಹೆಚ್ಚಲಿರುವ ಚಳಿಗೆ ಸಾರ್ವಜನಿಕರು ಜಾಗರೂಕರಾಗಿ ಮತ್ತು ಸಮಯೋಚಿತ ವೈದ್ಯಕೀಯ ಸಲಹೆಗಳನ್ನು ಪಡೆಯುವುದು ಬಹಳ ಮುಖ್ಯವಾಗಿದೆ. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಹಾಗೂ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗದಂತೆ ನೋಡಿಕೊಳ್ಳಬೇಕಿದೆ. ಆರೋಗ್ಯ ಇಲಾಖೆ ಹಾಗೂ ಪಾಲಿಕೆ ಸಾರ್ವಜನಿಕ ಆರೋಗ್ಯದ ಕುರಿತು ಗಮನ ಹರಿಸಬೇಕಿದೆ.
ಪಾಲಿಕೆಯಿಂದ ಮಾರ್ಗಸೂಚಿ:ಮಳೆಯಿಂದ ತಗ್ಗು ಪ್ರದೇಶ, ರಾಜಕಾಲುವೆ, ಕೆರೆಯ ಆಸುಪಾಸಿನ ಜಾಗಗಳಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾದ ಬೆನ್ನಲ್ಲೇ ಬಿಬಿಎಂಪಿ ಕೆಲ ಮಾರ್ಗಸೂಚಿಯನ್ನು ಹೊರಡಿಸಿದೆ. ನಿರಂತರ ಮಳೆಯಿಂದ ನಗರದ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕಾಲರಾ, ಜಾಂಡಿಸ್, ಡೆಂಗ್ಯೂ, ಕರುಳಬೇನೆ, ಚಿಕನ್ ಗುನ್ಯಾ, ಮಲೇರಿಯಾ ರೋಗಗಳ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಹಾಗೂ ಜಲಮಂಡಳಿ ವತಿಯಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಗೆ ಆದೇಶ ನೀಡಲಾಗಿದೆ. ಆರ್ಆರ್ ನಗರ, ಮಹಾದೇವಪುರ, ಯಲಹಂಕ, ಬೊಮ್ಮನಹಳ್ಳಿ ವಲಯಗಳಲ್ಲಿ ಕುಡಿಯುವ ನೀರಿನ ಪರೀಕ್ಷೆ ಮಾಡಿ ವರದಿ ನೀಡುವಂತೆ ಸೂಚಿಸಲಾಗಿದೆ.