ಬೆಂಗಳೂರು: ಸಣ್ಣ ಮಕ್ಕಳಿಗೆ ತಾಯಿಯು ಉತ್ತಮ ರೀತಿಯಲ್ಲಿ ಆರೈಕೆ ಮಾಡಬಲ್ಲಳು ಎಂಬುದರ ಕುರಿತು ಸಂಶಯವಿಲ್ಲ. ಆದರೆ, ಅಪ್ರಾಪ್ತ ಮಕ್ಕಳ ಬೆಳವಣಿಗೆಯಲ್ಲಿ ತಂದೆಯ ಪಾತ್ರ ನಿರ್ಲಕ್ಷಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ತಮ್ಮ ನಾಲ್ಕೂವರೆ ವರ್ಷದ ಮಗುವನ್ನು ಪ್ರತಿ ಶನಿವಾರ ಮತ್ತು ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆ ತನಕ ತಂದೆಯ ಸುಪರ್ದಿಗೆ ನೀಡಬೇಕು ಎಂದು ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ತಾಯಿಯೊಬ್ಬರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಬಿ.ಪ್ರಭಾಕರ ಶಾಸ್ತ್ರಿ ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದರ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಅಲ್ಲದೆ, ಮಕ್ಕಳಿಗೆ ಜೀವಂತ ತಂದೆ ಮತ್ತು ತಾಯಿಯ ಪ್ರೀತಿ, ಕಾಳಜಿಯನ್ನು ನಿರಾಕರಿಸಲಾಗದು ಎಂದು ತಿಳಿಸಿದೆ. ದಂಪತಿ ನಡುವಿನ ವಿವಾದದಲ್ಲಿ ಸಣ್ಣ ಮಕ್ಕಳು ತೊಂದರೆ ಅನುಭವಿಸುವಂತಾಗಬಾರದು. ಎಳೆ ಮಕ್ಕಳಿಗೆ ಇಬ್ಬರು ಪೋಷಕರ ಪ್ರೀತಿ, ಕಾಳಜಿ, ರಕ್ಷಣೆ ಮತ್ತು ಸಹಯೋಗ ಅಗತ್ಯ. ಪೋಷಕರ ಗಲಾಟೆಯಲ್ಲಿ ಮಕ್ಕಳು ಬಲಿಪಶುವಾಗಬಾರದು, ಮಕ್ಕಳನ್ನು ಸಂಕಟ ಅನುಭವಿಸುವಂತೆ ಮಾಡಬಾರದು ಎಂದು ಪೀಠ ತಿಳಿಸಿದೆ.
ಅರ್ಜಿದಾರರಾದ ತಾಯಿಯ ವಾದ ತಳ್ಳಿ ಹಾಕಿದ ನ್ಯಾಯಪೀಠ, ಇಂತಹ ಹೇಳಿಕೆಗೆ ಯಾವುದೇ ಸಾಕ್ಷ್ಯ ಇರುವುದಿಲ್ಲ. ಊಹಾತ್ಮಕವಾದ ಅಭಿಪ್ರಾಯಕ್ಕೆ ಮನ್ನಣೆ ನೀಡಲಾಗದು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಮಗುವಿನ ತಂದೆ ತಾಯಿಯ ಆರೋಪ ಪ್ರತ್ಯಾರೋಪಗಳು ಮಗುವಿನ ಉತ್ತಮ ಭವಿಷ್ಯ ಮತ್ತು ಮಗುವಿಗೆ ತೋರುವ ಪ್ರೀತಿ ಮತ್ತು ಕಾಳಜಿಗೆ ಅಡ್ಡಿಯಾಗಬಾರದು. ತಂದೆ ಮತ್ತು ತಾಯಿಯ ಗಲಾಟೆಯಲ್ಲಿ ಮಗು ತೊಂದರೆ ಅನುಭವಿಸುವಂತಾಗಬಾರದು. ಪೋಷಕರಾಗಿ ಮತ್ತು ಮಗುವಿನ ನೈಸರ್ಗಿಕ ರಕ್ಷಕರಾಗಿ ಗಂಡ ಮತ್ತು ಹೆಂಡತಿ ಪರಸ್ಪರ ವಿಶ್ವಾಸ ಹೊಂದಿರಬೇಕು. ಆಗ ಮಾತ್ರ ಮಗುವಿಗೆ ಪೂರ್ಣ ಸ್ವರೂಪದ ಭದ್ರತೆ ಮತ್ತು ಪ್ರೀತಿಯ ಅನುಭವ ನೀಡಬಲ್ಲದು ಎಂದು ಪೀಠ ಹೇಳಿದೆ.