ಹಾವೇರಿ :ಪ್ರಸ್ತುತ ವರ್ಷ ರಾಜ್ಯದ ಅನ್ನದಾತರು ಸಾಕಷ್ಟು ಸಂಕಷ್ಟ ಎದುರಿಸಿದ್ದಾರೆ. ಮಳೆರಾಯನ ಮುನಿಸಿನಿಂದ ಎರಡೆರಡು ಬಾರಿ ಬಿತ್ತನೆ ಮಾಡಿದ್ದರೂ ಸಹ ಯಾವುದೇ ಪ್ರಯೋಜನವಾಗಲಿಲ್ಲ. ಬಿತ್ತಿದ ಬೀಜ, ಹಾಕಿದ ಗೊಬ್ಬರ ಹಾಳಾಯಿತೇ ವಿನಃ ರೈತರಿಗೆ ಎಳ್ಳಷ್ಟು ಲಾಭವಾಗಲಿಲ್ಲ.
ಇನ್ನು ಮುಂಗಾರು ನೆಚ್ಚಿಕೊಂಡು ಹಾಕಿದ ಬೀಜಗಳು ಮಣ್ಣಿನಲ್ಲಿಯೇ ಕಮರಿಹೋದವು. ಒಂದು ಕಡೆ ಮಳೆ ಕೈಕೊಟ್ಟರೆ ಇನ್ನೊಂದು ಕಡೆ ಅಂತರ್ಜಲಮಟ್ಟ ಸಹ ಕೆಳಗೆ ಕುಸಿದಿದೆ. ಇದ್ದ ಅಂತರ್ಜಲಮಟ್ಟ ಬಳಸಿಕೊಳ್ಳಬೇಕು ಎಂದರೆ ವಿದ್ಯುತ್ ಕಣ್ಣಾಮುಚ್ಚಾಲೆ ರೈತರನ್ನ ಹೈರಾಣಾಗಿಸಿತು. ಮತ್ತೊಂದು ಕಡೆ ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದ ಕಾರಣ ರೈತರು ಸಾಕಷ್ಟು ತೊಂದರೆಗೆ ಸಿಲುಕಿದ್ದಾರೆ.
ಬರಗಾಲಕ್ಕೆ ಸಡ್ಡು ಹೊಡೆದ ಸಾವಯವ ಕೃಷಿಕರು :ಈ ಮಧ್ಯ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಲಿಂಗದಳ್ಳಿ ಗ್ರಾಮದ ಲಕ್ಷೆಟ್ಟಿ ಸಹೋದರರು ಈ ಎಲ್ಲ ಸಮಸ್ಯೆಗಳಿಗೆ ಸೆಡ್ಡು ಹೊಡೆದು ಬೆಳ್ಳುಳ್ಳಿ ಬೆಳೆ ಬೆಳೆದಿದ್ದಾರೆ. ನಾಲ್ಕು ಎಕರೆ ಜಮೀನಿನಲ್ಲಿ ಬೆಳ್ಳುಳ್ಳಿ ಬೆಳೆದು ಸುಮಾರು 40 ಕ್ವಿಂಟಾಲ್ ಫಸಲು ಪಡೆದಿದ್ದಾರೆ. ಇವರ ಈ ಯಶೋಗಾಥೆಗೆ ಜೈವಿಕ ಗೊಬ್ಬರ ಹಾಗೂ ಅಂತರ್ಜಲಮಟ್ಟ ಕಾಪಾಡಿಕೊಂಡಿರುವುದು ಹಾಗೂ ಇಷ್ಟೆಲ್ಲ ಕಷ್ಟಪಟ್ಟು ಬೆಳೆದ ಬೆಳೆಗೆ ಈ ಬಾರಿ ಬಂಪರ್ ಬೆಲೆ ಬಂದಿರುವುದು ಕಾರಣವಾಗಿದೆ.
ಶ್ರಮಕ್ಕೆ ತಕ್ಕ ಪ್ರತಿಫಲ : ಬೆಳ್ಳುಳ್ಳಿ ಬೆಳೆಗೆ ಈ ವರ್ಷ ಕ್ವಿಂಟಾಲ್‌ಗೆ 25 ಸಾವಿರ ರೂಪಾಯಿವರೆಗೆ ಬೆಲೆ ಸಿಕ್ಕಿರುವುದು ಈ ರೈತರು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಂತಾಗಿದೆ. ಗ್ರಾಮದ ಸಹೋದರರಾದ ಶರಣಪ್ಪ ಮತ್ತು ಕರೇಗೌಡ ಕಳೆದ ಹಲವು ವರ್ಷಗಳಿಂದ ಬೆಳ್ಳುಳ್ಳಿ ಬೆಳೆಯುತ್ತಿದ್ದಾರೆ. ಆದರೆ ಈ ವರ್ಷ ವಿಭಿನ್ನವಾದ ಸಮಸ್ಯೆ ಅವರಿಗೆ ಕಾಡಲಾರಂಭಿಸಿತ್ತು.
ಬೆಳ್ಳುಳ್ಳಿ ಬೆಲೆ ಒಂದು ಹಂತಕ್ಕೆ ಬಂದಾಗ ತೇವಾಂಶದ ಕೊರತೆ ಕಾಣಲಾರಂಭಿಸಿತು. ಮತ್ತೊಂದು ಕಡೆ ಕೊಳವೆಬಾವಿ ನೀರು ಸಹ ಕಡಿಮೆಯಾಗಲಾರಂಭಿಸಿತು. ಇದರಿಂದ ತೀವ್ರ ಆತಂಕಕ್ಕೀಡಾದ ಲಕ್ಷೆಟ್ಟಿ ಸಹೋದರರ ಕೈಹಿಡಿದಿದ್ದು ಸಾವಯವ ಕೃಷಿ. ಅವರು ಕಳೆದ ಹಲವು ವರ್ಷಗಳಿಂದ ಜಮೀನಿಗೆ ತಿಪ್ಪೆಗೊಬ್ಬರ, ಕೋಳಿಗೊಬ್ಬರ, ಜಮೀನಿನಲ್ಲಿ ಕುರಿ ನಿಲ್ಲಿಸುವುದು ಸೇರಿದಂತೆ ವಿವಿಧ ಸಾವಯವ ಗೊಬ್ಬರ ಬಳಕೆ ಮಾಡುತ್ತಿದ್ದಾರೆ.