ಕರ್ನಾಟಕ

karnataka

ETV Bharat / state

ಬೇಸಿಗೆಗೆ ಮುನ್ನವೇ ನೀರಿಗೆ ಹಾಹಾಕಾರ:ತೋಟಗಳಿಗಾಗಿ 2 ಸಾವಿರ ಬೋರ್​ವೆಲ್​ ಕೊರೆಸಿದ್ರೂ ಸಿಗದ ಗಂಗೆ

ರೈತರು ತಮ್ಮ ತೋಟಗಳನ್ನು ಉಳಿಸಿಕೊಳ್ಳಲು ತಿಂಗಳಿ‌ನಲ್ಲೇ ಸುಮಾರು ಎರಡು ಸಾವಿರ ಕೊಳವೆಬಾವಿ ಕೊರೆಸಿದ್ದರು. ಆದರೆ ನೀರು ಮಾತ್ರ ಮರೀಚಿಕೆಯಾಗಿದ್ದು, ಅಡಕೆ, ಪಪ್ಪಾಯ ಮತ್ತು ತೆಂಗು ಸೇರಿದಂತೆ ಅನೇಕ ಬೆಳೆಗಳು ಒಣಗುತ್ತಿವೆ.

By ETV Bharat Karnataka Team

Published : Feb 13, 2024, 10:42 AM IST

Updated : Feb 14, 2024, 12:29 PM IST

drilled 2 thousand borewells  Farmers  Davanagere  ನೀರಿಗೆ ಹಾಹಾಕಾರ  ಬೋರ್​ವೆಲ್​
ರೈತರ ಮಾತು

ಬೋರ್​ವೆಲ್​ ಕೊರೆಸಿದ್ರೂ ಸಿಗದ ಗಂಗೆ

ದಾವಣಗೆರೆ: ರೈತರು ತಾವು ಹಾಕಿದ ಬೆಳೆ ಉಳಿಸಿಕೊಳ್ಳಲು ಜೀವ ಜಲಕ್ಕಾಗಿ ಪರಿತಪಿಸುತ್ತಿದ್ದಾರೆ. ಮಾಯಕೊಂಡ ಹೋಬಳಿಯ ಭಾಗದಲ್ಲಿ ನೀರಿನ ಮೂಲ ಇಲ್ಲದೇ ಇರುವುದು ರೈತರನ್ನು ಹೈರಾಣಾಗಿಸಿದೆ. ಇನ್ನು ಸಾವಿರಾರು ಅಡಿ ಬೋರ್​ವೆಲ್ ಕೊರೆಸಿದರೂ ಕೂಡ ನೀರು ಮಾತ್ರ ಮರೀಚಿಕೆಯಾಗಿದೆ. ಇದಲ್ಲದೇ ಈ ಭಾಗದಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಬೋರ್​ವೆಲ್ ಕೊರೆಯಿಸಿದ ರೈತ ವರ್ಗಕ್ಕೆ ನೀರಿನ ಬದಲಿಗೆ ಸಿಕ್ಕಿದು ಮಾತ್ರ ಭೂಮಿಯ ಒಡಲಾಳದ ಮಣ್ಣು.

2 ಸಾವಿರ ಬೋರ್​ವೆಲ್​ ಕೊರೆಸಿದ್ರೂ ಸಿಗದ ಗಂಗೆ

ಹೌದು, ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಗೆ ಬೇಸಿಗೆ ಕಾಲ ಆರಂಭಕ್ಕೂ ಮುನ್ನ ಬರಗಾಲ ಆವರಿಸಿದೆ. ಈ ಮಾಯಕೊಂಡ ಹೋಬಳಿಗೆ ಜಲ ಮೂಲ ಇಲ್ಲದೇ ಇರುವುದು ಈ ಭಾಗದ ರೈತರು ರೋಸಿ ಹೋಗಿದ್ದಾರೆ. ಇಲ್ಲಿ ತನಕ ಒಬ್ಬೊಬ್ಬ ರೈತರು ತಮ್ಮ ಜಮೀನಿಗಳಲ್ಲಿ ನೀರಿಗಾಗಿ 13 ರಿಂದ 15 ಬೋರ್ ವೆಲ್​ಗಳನ್ನು ಕೊರೆಸಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ದುರಂತ ಎಂದರೆ ರೈತರು ಕೊರೆಯಿಸಿದ ಒಂದೂ ಬೋರ್​ವೆಲ್​ಗಳಲ್ಲಿ ನೀರು ಬಿದ್ದಿರುವ ಉದಾಹರಣೆಗಳೇ ಇಲ್ಲ.

2 ಸಾವಿರ ಬೋರ್​ವೆಲ್​ ಕೊರೆಸಿದ್ರೂ ಸಿಗದ ಗಂಗೆ

ಇನ್ನು ಈ ಮಾಯಕೊಂಡ ಹೋಬಳಿ ಹಾಗೂ ಬಾವಿಹಾಳ್, ಸುಲ್ತಾನಿಪುರ, ಹೊನ್ನನಾಯಕನಹಳ್ಳಿ, ಒಬಣ್ಣನಹಳ್ಳಿ, ಕೊಡಗನೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾಕಷ್ಟು ಬೋರ್ ಗಳನ್ನು ಕೊರೆಯಿಸಲಾಗಿದ್ದರೂ ಯಾವುದೇ ಪ್ರಯೋಜ‌ನ ಆಗಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಬಾವಿಹಾಳ್ ಗ್ರಾಮದ ರೈತ ಶರಣಪ್ಪ ತನ್ನ ನಾಲ್ಕು ಎಕರೆ ಅಡಕೆ ತೋಟದಲ್ಲಿ 10 ಬೋರ್​ವೆಲ್​ಗಳನ್ನು ಕೊರೆಯಿಸಿದ್ದರು. ಇತ್ತ ಸುಲ್ತಾನಿಪುರ ಗ್ರಾಮದ ರೈತ ನಟರಾಜ್ ಎಂಬುವರು 10 ಎಕರೆಯಲ್ಲಿ ಪಪ್ಪಾಯ ಬೆಳೆದಿದ್ದು, ಅದಕ್ಕೆ ನೀರು ಹಾಯಿಸಲು ಇಲ್ಲಿ ತನಕ 13 ಬೋರ್ ವೆಲ್ ಕೊರೆಸಿದ್ದಾರೆ. ಆದರೆ ನೀರು ಮಾತ್ರ ಸಿಗುತ್ತಿಲ್ಲ.

ಎರಡು ಸಾವಿರ ಬೋರ್​ವೆಲ್ ಕೊರೆಸಿದ ರೈತರು:ಬಾವಿಹಾಳ್ ಗ್ರಾಮದ ರೈತ ಶರಣಪ್ಪ ಈಟಿವಿ ಭಾರತದೊಂದಿಗೆ ಮಾತನಾಡಿ, ನಾವು ಹತ್ತು ಬೋರ್​ಗಳನ್ನು ಕೊರೆಸಿದ್ದೇವೆ. ಒಂದು ಕೊಳವೆ ಬಾವಿಯಲ್ಲೂ ನೀರು ಬಿದ್ದಿಲ್ಲ. ನಮ್ಮ ಮಾಯಕೊಂಡ ಹೋಬಳಿಯ ವಿವಿಧ ಜಮೀನುಗಳಲ್ಲಿ ಅನೇಕ ರೈತರು ಕೊಳವೆ ಬಾವಿಗಳನ್ನು ಕೊರೆಸುತ್ತಿದ್ದಾರೆ. ಕೆಲ ತಿಂಗಳಲ್ಲಿ ಸುಮಾರು ಎರಡು ಸಾವಿರ ಕೊಳವೆಬಾವಿಗಳನ್ನು ರೈತರು ಕೊರೆಸಿದ್ದಾರೆ, ಆದರೆ ನೀರಿಲ್ಲ ಎಂದು ಹೇಳಿದರು.

2 ಸಾವಿರ ಬೋರ್​ವೆಲ್​ ಕೊರೆಸಿದ್ರೂ ಸಿಗದ ಗಂಗೆ

ಎರಡು ಕೊಳವೆಬಾವಿ ಕೊರೆಯುವ ಲಾರಿಗಳು ಬಾವಿಹಾಳ್​ನಲ್ಲಿ ಮೊಕ್ಕಾಂ ಹೂಡಿವೆ. ಮಾಯಕೊಂಡ ಒಂದೇ ಹೋಬಳಿಯಲ್ಲಿ ಎರಡು ಸಾವಿರ ಬೋರ್ ಕೊರೆಯಿಸಲಾಗಿದೆ. ದುರಂತ ಎಂದರೆ ನೀರು ಮಾತ್ರ ಬಿದ್ದಿಲ್ಲ. ಈ ಬಾರಿ ಮಳೆ ಕಡಿಮೆಯಾಗಿದೆ. ಕೊಳವೆಬಾವಿಯಲ್ಲಿ ನೀರಿಲ್ಲ. ಅಡಕೆ ತೋಟವನ್ನು ಉಳಿಸಿಕೊಳ್ಳುವುದು ಕಷ್ಟವಾಗಿದೆ. ನಾಲ್ಕು ಎಕರೆ ಅಡಕೆ ತೋಟಕ್ಕೆ ಟ್ಯಾಂಕರ್ ಮೂಲಕ ನೀರು ಹಾಯಿಸುತ್ತಿದ್ದೇವೆ ಎಂದು ರೈತ ಶರಣಪ್ಪ ತಿಳಿಸಿದರು.

ನೆಲಕಚ್ಚಿದ ಅಡಕೆ, ಪಪ್ಪಾಯ ಬೆಳೆ:ಈ ವೇಳೆ ಪಪ್ಪಾಯ ಬೆಳೆದು ನೀರಿಲ್ಲದೇ ಪರಿತಪಿಸುತ್ತಿರುವ ಸುಲ್ತಾನಿಪುರ ಗ್ರಾಮದ ರೈತ ನಟರಾಜ್ ಪ್ರತಿಕ್ರಿಯಿಸಿ, ನಮಗೆ ಹತ್ತು ಎಕರೆ ಪಪ್ಪಾಯಿ, ನಾಲ್ಕು ಎಕರೆ ಅಡಕೆ ತೋಟ ಇದೆ. ನೀರಿಲ್ಲದೇ ಅಂತರ್ಜಲ ಬತ್ತಿ ಹೋಗಿದ್ದರಿಂದ ತೋಟಗಳಿಗೆ ನೀರಿಲ್ಲದಂತೆ ಆಗಿದೆ. ಕೆರೆ ತುಂಬಿಸುವ ಯೋಜನೆಯಿಂದ ಕೆರೆಗಳಿಗೆ ನೀರು ಬರಲಿಲ್ಲ., ಹತ್ತು ಎಕರೆ ಪಪ್ಪಾಯಿ ಬೆಳೆಯಲು ಒಂದು ಎಕರೆಗೆ ಒಂದು ಲಕ್ಷದಂತೆ ಹತ್ತು ಲಕ್ಷ ವ್ಯಯ ಮಾಡಿದ್ದೇವೆ. ನೀರಿಲ್ಲ ಎಂದು 13 ಕೊಳವೆ ಬಾವಿ ಕೊರೆಸಿದ್ದೇವೆ. ಆದರೆ ಒಂದು ಹನಿ ನೀರು ಬಿದ್ದಿಲ್ಲ. ಅಡಕೆ ಕೂಡ ಒಣಗುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ರೈತ ನಟರಾಜ್ ತಮ್ಮ ಅಳಲು ತೋಡಿಕೊಂಡರು.

ಓದಿ:ಕೇಂದ್ರ ಸಚಿವರು - ರೈತರ ನಡುವಿನ ಮಾತುಕತೆ ವಿಫಲ: ರೈತರ 'ದೆಹಲಿ ಚಲೋ' ಮುಂದುವರಿಕೆ

Last Updated : Feb 14, 2024, 12:29 PM IST

ABOUT THE AUTHOR

...view details