ಬೆಂಗಳೂರು: ಭಾರತದ ಸುಪ್ರೀಂ ಕೋರ್ಟ್ನ ಲಾಂಛನದಲ್ಲಿರುವ ಯಥೋ ಧರ್ಮಃ ತತೋ ಜಯಃ ಸಂದೇಶ ಪಾಲಿಸಿದ್ದೇನೆ. ಅದರೊಂದಿಗೆ ನನ್ನ ಇಡೀ ವೃತ್ತಿ ಜೀವನದಲ್ಲಿ ಅದನ್ನು ಪಾಲನೆ ಮಾಡಿದ್ದೇನೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ತಿಳಿಸಿದರು. ವೃತ್ತಿ ಜೀವನದಿಂದ ಶನಿವಾರ(ಫೆ.24) ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ ವತಿಯಿಂದ ಹೈಕೋರ್ಟ್ನ ಹಾಲ್ 1ರಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ನ್ಯಾಯಮೂರ್ತಿಗಳ ಬದುಕು ಒಂದು ರೀತಿಯಲ್ಲಿ ಅರಣ್ಯದಲ್ಲಿ ಏಕಾಂತ ವಾಸಿಯಾದಂತಿದ್ದರೂ, ಈ ಸೇವಾ ಅವಧಿಯಲ್ಲಿ ಜನರಿಗೆ ಅರ್ಥವಾಗುವ ಸರಳ ಮತ್ತು ಓದುವ ಭಾಷೆಯಲ್ಲಿ ತೀರ್ಪು ಬರೆದಿರುವೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದರು. ಅಲ್ಲದೆ, ನ್ಯಾಯಾಂಗ ಮೂಲಸೌಕರ್ಯ ಮತ್ತು ರಾಜ್ಯಾದ್ಯಂತ ವ್ಯವಸ್ಥಿತವಾಗಿ ಇ-ಕೋರ್ಟ್ ಪ್ರಾಜೆಕ್ಟ್ ಜಾರಿ ಮಾಡಲು ಎಲ್ಲರ ಜೊತೆಗೂಡಿ ಶ್ರಮಿಸಿದ್ದೇನೆ. ತಂತ್ರಜ್ಞಾನಕ್ಕೆ ತೆರೆದುಕೊಂಡಿರುವುದರಿಂದ ನ್ಯಾಯದಾನ ವ್ಯವಸ್ಥೆಯು ಕ್ರಿಯಾತ್ಮಕವಾಗಿ ಸಾಕಷ್ಟು ಬದಲಾವಣೆ ಕಂಡಿದೆ. ಹಲವಾರು ನವೀನ ಸಕಾರಾತ್ಮಕ ಕ್ರಮಗಳಿಂದ ಸಮಯ ಉಳಿತಾಯವಾಗಿದ್ದು, ದಾವೆದಾರರಿಗೆ ನ್ಯಾಯದಾನ ಸಾಧ್ಯವಾಗಿದೆ ಎಂದು ಹೇಳಿದರು.