UIDAI ರೀಜನಲ್ ಅಧಿಕಾರಿ ವಿಜಯ್ ಕುಮಾರ್ (ETV Bharat) ಹಾಸನ:ಹಣಕ್ಕಾಗಿ ಡಿಸಿ ಕಚೇರಿಯ ಆವರಣದಲ್ಲಿಯೇ ಅಕ್ರಮ ವಲಸಿಗರಿಗೆ ನಕಲಿ ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದ ಮಹಿಳೆಯೊಬ್ಬಳ ಮೇಲೆ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಆದೇಶ ನೀಡಿದ್ದಾರೆ. ಆಧಾರ್ ನೋಂದಣಿ ಕೇಂದ್ರದಲ್ಲಿ ಎರಡೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದ ಅನುಶ್ರೀ ಎನ್ನುವವರು ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಸಿಕ್ಕಿಬಿದ್ದಿದ್ದು, ಆರೋಪಿತ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ.
ಕೂಲಿ ಕೆಲಸಕ್ಕಾಗಿ ಬೇರೆ ಬೇರೆ ರಾಜ್ಯದಿಂದ ಸಾವಿರಾರು ಬಂದಿ ಕರ್ನಾಟಕಕ್ಕೆ ವಲಸೆ ಬರುತ್ತಿದ್ದು, ಹಣದ ಆಸೆಗೆ ಬಿದ್ದು ಅಂತಹವರಿಗೆ ನಕಲಿ ಆಧಾರ್ ಕಾರ್ಡ್ ಮಾಡಿಕೊಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಪರಿಶೀಲನೆ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?:ಇಲ್ಲಿನ ಆಧಾರ್ ಲಿಂಕ್ ಅಧಿಕಾರಿ ಬೆಂಗಳೂರಿನ ಕಚೇರಿಗೆ ವಿಷಯ ತಿಳಿಸಿದ್ದು, ಬೆಂಗಳೂರಿನ ರೀಜನಲ್ ಅಧಿಕಾರಿ ವಿಜಯ್ ಕುಮಾರ್ ಹಾಸನಕ್ಕೆ ಬಂದು ಆಧಾರ್ ಸೆಂಟರ್ ಪರಿಶೀಲನೆ ನಡೆಸಿದಾಗ ಫೇಕ್ ಆಧಾರ್ ಕಾರ್ಡ್ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
UIDAI ರೀಜನಲ್ಅ ಧಿಕಾರಿ ವಿಜಯ್ ಕುಮಾರ್ ಹೇಳಿದ್ದೇನು?:ಬೆಂಗಳೂರು ಮೂಲದ UIDAI ರೀಜನಲ್ ಅಧಿಕಾರಿ ವಿಜಯ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿ, "ಆಧಾರ್ ಸೆಂಟರ್ಗಳಲ್ಲಿ ಈ ವಿಚಾರವಾಗಿ ತನಿಖೆ ಮಾಡುತ್ತಿದ್ದು, ಜಿಲ್ಲಾಧಿಕಾರಿ ಕಚೇರಿ ಆವರಣದ ಆಧಾರ್ ಕೇಂದ್ರದ ಕಂಪ್ಯೂಟರ್ ಪರಿಶೀಲನೆ ಮಾಡುವಾಗ ಗೊತ್ತಾಗಿದೆ. ಕಂಪ್ಯೂಟರ್ ಪರದೆ ಮೇಲೆ ಸೇವ್ ಮಾಡದೇ, ಟಿಲೀಟ್ ಮಾಡಿದ್ದಾರೆ. ರಿಸೈಕಲ್ ಬಿನ್ನಲ್ಲಿ ನೋಡಿದಾಗ ಸುಮಾರು 4-5 ನಕಲಿ ಆಧಾರ್ ಕಾರ್ಡ್ ಜೋಡಣೆ ಮಾಡಿರುವುದು ಸಿಕ್ಕಿದೆ. ಒಂದೇ ಸರ್ಟಿಫಿಕೇಟ್, ಕೇವಲ ಹೆಸರು, ಅವರ ಜನ್ಮ ದಿನಾಂಕ ಬದಲಾಯಿಸಿ ಬ್ಯಾಂಕ್ ಮತ್ತು ಇತರ ನೋಂದಣಿಗೆ ಆಧಾರ್ ಜೋಡಣೆ ಮಾಡುತ್ತಿರುವುದು ದೇಶದ್ರೋಹದ ಕೆಲಸ. ಈಕೆ ಎರಡೂವರೆ ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿರುವುದರಿಂದ ಅಷ್ಟು ಸಮಯದ ಆಧಾರ್ ಜೋಡಣೆಯನ್ನು ಪರಿಶೀಲಿಸಬೆಕಾಗುತ್ತದೆ. ಒಂದು ಫೇಕ್ ಆಧಾರ್ಗೆ ಒಬ್ಬರಿಂದ 5 ರಿಂದ 10 ಸಾವಿರ ರೂ. ಲಂಚ ಸ್ವೀಕರಿಸುತ್ತಾರೆ" ಎಂದು ತಿಳಿಸಿದರು.
ತಮ್ಮದೇ ಕಚೇರಿಯ ಆಧಾರ್ ನೋಂದಣಿ ಕೇಂದ್ರದಲ್ಲಿ ಫೇಕ್ ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ, ಕಚೇರಿಗೆ ಪೊಲೀಸ್ ಅಧಿಕಾರಿಯನ್ನು ಕರೆಸಿ, ಮಹಿಳೆ ವಿರುದ್ಧ ಎಫ್ಐಆರ್ ದಾಖಲಿಸಿ, ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಜೊತೆಗೆ ಇವರ ಕೆಲಸದ ಅವಧಿಯ ಎರಡೂವರೆ ವರ್ಷಗಳ ಎಲ್ಲಾ ದಾಖಲೆಯನ್ನು ಪರಿಶೀಲಿಸುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ:ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ನಕಲಿ ಅಂಕಪಟ್ಟಿ ಸೃಷ್ಟಿ: 3 ಸರ್ಕಾರಿ ನೌಕರರು, ಅಭ್ಯರ್ಥಿಗಳು ಸೇರಿ 48 ಮಂದಿ ಅರೆಸ್ಟ್ - fake marks card