ಬೆಂಗಳೂರು:ಅಧಿಕಾರ ದುರುಪಯೋಗ ಮತ್ತು ಸುಲಿಗೆ ಆರೋಪದಲ್ಲಿ ಹೆಚ್ಚುವರಿ ಪೊಲೀಸ್ ನಿರ್ದೇಶಕ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಇತರ 9 ಅಧಿಕಾರಿಗಳ ವಿರುದ್ಧ ಲೊಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣಾ ಪ್ರಕ್ರಿಯೆಯನ್ನು ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.
ಆದರೆ, ಆರೋಪಿತ ಅರ್ಜಿದಾರ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸುವುದಕ್ಕಾಗಿ ಸಕ್ಷಮ ಪ್ರಾಧಿಕಾರ ಅನುಮತಿ ನೀಡಿದಲ್ಲಿ ವಿಚಾರಣಾ ಪ್ರಕ್ರಿಯೆ ಮುಂದುವರೆಸಬಹುದಾಗಿದೆ ಎಂದು ಪೀಠ ಹೇಳಿದೆ. ಪ್ರಕರಣ ಸಂಬಂಧ ಪೂರ್ವಾನುಮತಿ ಪಡೆಯದೇ ತಮ್ಮ ವಿರುದ್ಧ ಕಾಗ್ನಿಜೆನ್ಸ್ ತೆಗೆದುಕೊಂಡಿದ್ದ ಲೋಕಾಯುಕ್ತ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಎಂ.ಕೆ.ತಿಮ್ಮಯ್ಯ, ಸೀಮಂತ್‌ಕುಮಾರ್ ಸಿಂಗ್ ಸೇರಿ ಏಳು ಮಂದಿ ಅಧಿಕಾರಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೇ, ವಿಶೇಷ ನ್ಯಾಯಾಲಯ ಕಾಗ್ನಿಜೆನ್ಸ್ ತೆಗೆದುಕೊಂಡಿರುವ ಕ್ರಮವನ್ನು ಮಾತ್ರ ರದ್ದುಪಡಿಸಿದೆ. ಆದರೆ, ದೂರು ರದ್ದುಪಡಿಸಲು ನಿರಾಕರಿಸಿದೆ.
ಅಲ್ಲದೆ, ಅರ್ಜಿದಾರರ ವಿರುದ್ಧದ ಆರೋಪಗಳು ಅಧಿಕೃತ ಕರ್ತವ್ಯ ವ್ಯಾಪ್ತಿಗೆ ಒಳಪಡುವುದಿಲ್ಲ. ಆದ ಕಾರಣ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಪಡೆಯಬೇಕಾದ ಅಗತ್ಯವಿಲ್ಲ ಎಂದು ವಿಶೇಷ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಆದರೆ, ತಪ್ಪಿತಸ್ಥ ಅಧಿಕಾರಿಗಳು ಅಧಿಕೃತವಾಗಿ ಸರ್ಚ್ ವಾರಂಟ್ ಪಡೆದು ದೂರುದಾರರ ಮನೆ ಪರಿಶೀಲನೆ ನಡೆಸಿದ್ದಾರೆ. ಈ ಅಂಶ ಅಧಿಕೃತ ಕರ್ತವ್ಯದ ಭಾಗವಾಗಿದೆ. ಆದ್ದರಿಂದ ಅಧಿಕೃತ ಕರ್ತವ್ಯದ ಭಾಗವಾಗಿರುವುದರಿಂದ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಅಗತ್ಯವಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ: ನಿವೇಶನಗಳ ಹಂಚಿಕೆಯಲ್ಲಿ ಅಕ್ರಮಗಳು ನಡೆದಿರುವುದಕ್ಕೆ ಸಂಬಂಧಿಸಿದಂತೆ ಅಪರಿಚಿತ ಅಧಿಕಾರಿಗಳು, ದೂರುದಾರ ಆರ್‌ಟಿ ನಗರದ ಮೋಹನ್ ಕುಮಾರ್ ಸೇರಿದಂತೆ ವಿವಿಧ ಖಾಸಗಿ ವ್ಯಕ್ತಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ 2021ರ ನವೆಂಬರ್ ತಿಂಗಳಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ದೂರು ನೀಡಿತ್ತು. ಈ ಸಂಬಂಧ ಬಿಡಿಎ ಮೇಲೆ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು (ಸೀಮಂತ್ ಕುಮಾರ್ ತಂಡ) ಪರಿಶೀಲನೆ ನಡೆಸಿ, ದೂರುದಾರರ ಹೆಸರು ಸೇರಿದಂತೆ ಇತರರ ಹೆಸರಿದ್ದ ದಿನಚರಿ ಪುಸ್ತಕವನ್ನು ವಶಪಡಿಸಿಕೊಂಡಿದ್ದರು.