ಶಿವಮೊಗ್ಗ: ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಸ್ಪರ್ಧಿಸಿದ್ದಾರೆ. ಅವರಿಗೆ ವಿಧಾನಪರಿಷತ್ ಚುನಾವಣೆಯಲ್ಲಿ ಬೆಂಬಲ ನೀಡುವುದಾಗಿ ಈಶ್ವರಪ್ಪನವರ ನೇತೃತ್ವದ ರಾಷ್ಟ್ರಭಕ್ತ ಬಳಗ ಘೋಷಿಸಿದೆ.
ಇಂದು ಈಶ್ವರಪ್ಪನವರ ಚುನಾವಣಾ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ರಾಷ್ಟ್ರಭಕ್ತ ಬಳಗ ರಘುಪತಿ ಭಟ್ಗೆ ಬೆಂಬಲ ನೀಡಿ, ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಕರೆ ನೀಡಲಾಯಿತು. ಈ ವೇಳೆ ಮಾತನಾಡಿದ ರಾಷ್ಟ್ರಭಕ್ತ ಬಳಗದ ಕೆ. ಎಸ್ ಈಶ್ವರಪ್ಪನವರು, ರಘುಪತಿ ಭಟ್ ನಮ್ಮಂತೆ ಸಾಮಾನ್ಯ ಕಾರ್ಯಕರ್ತರು. ಅವರು ಪರಿಷತ್ಗೆ ಹೋಗಬೇಕು ಎಂದರು.
ಚುನಾವಣೆ ಅಂದ್ರೆ ಜಾತಿ ಕೇಳುತ್ತಾರೆ. ಅದು ಸಾಮಾನ್ಯವಾಗಿದೆ. ಜೀವನದಲ್ಲಿ ಜಾತಿ ಯಾವುದು ಅಂತ ಕಾಣದೇ ಇರುವ ವ್ಯಕ್ತಿ ಕೃಷ್ಣ, ಕನಕದಾಸ ಇಬ್ಬರ ಪ್ರತಿನಿಧಿಯಾಗಿ ರಘುಪತಿ ಭಟ್ ಬರುತ್ತಾರೆ. ಮೂರು ಜನ ಲಿಂಗಾಯತರು ನಿಂತಿದ್ದಾರೆ. ವೋಟು ಹಂಚಿ ಹೋಗುತ್ತದೆ. ಇದರಿಂದ ಬ್ರಾಹ್ಮಣ ಬರುತ್ತದೆ ಎಂಬ ಹುಚ್ಚು ಹುಚ್ಚು ಮಾತು ಕೇಳಿದ್ದೇನೆ. ಮೂರು ಅಲ್ಲ 30 ಜನ ಲಿಂಗಾಯತರು ನಿಂತರೂ ಸಹ ಉಡುಪಿಯ ಕೃಷ್ಣ ಹಾಗೂ ಕನಕದಾಸರ ವಿಚಾರ ಒಪ್ಪುವಂತಹವರು ರಘುಪತಿ ಭಟ್ಗೆ ಮತ ಹಾಕುತ್ತಾರೆ. ಇಲ್ಲಿ ಜಾತಿ ವಿಚಾರ ಇಲ್ಲ ಎಂದರು. ರಘುಪತಿ ಭಟ್ ಗೆಲ್ಲುತ್ತಾರೆ. ಯಾವ ಜಾತಿ ಎಂದು ನೋಡದೇ ಪದವೀಧರರು ರಾಷ್ಟ್ರೀಯ ವಿಚಾರವಾದಿ ರಘುಪತಿ ಭಟ್ಗೆ ಮತ ಹಾಕಿ ಎಂದರು.
ರಘುಪತಿ ಭಟ್ಗೆ ಇಂದು ನಾಳೆ ನೋಟಿಸ್ ಬರಬಹುದು. ಅವರಿಗೆ ನೋಟಿಸ್ ಬಂದ್ರೆ ನನಗೂ ಖುಷಿ ಆಗಬಹುದು ಎಂದಾಗ ಸಭೆ ನಗೆಗಡಲಲ್ಲಿ ತೇಲಿತು. ಚುನಾವಣೆ ಹಿಂದಿನ ಎರಡು ದಿನದಲ್ಲಿ ನಕಲಿ ವಿಡಿಯೋ, ಆಡಿಯೋ ಕರಪತ್ರ ಬರಬಹುದು ಹುಷಾರಾಗಿರಿ ಎಂದರು. ರಘುಪತಿ ಹೆಜ್ಜೆ ಹಿಂದೆ ನಮ್ಮ ಹೆಜ್ಜೆ ಹಾಕುತ್ತೇವೆ. ರಾಜ್ಯದಲ್ಲಿ ಬಿಜೆಪಿ ಶುದ್ದೀಕರಣವಾಗಬೇಕು. ಜೊತೆಗೆ ರಘುಪತಿ ಭಟ್ ಗೆಲ್ಲಬೇಕು ಎಂದು ಹೇಳಿದರು.
ಹಿಂದೆ ಪಕ್ಷದಲ್ಲಿ ಎಲ್ಲ ತೀರ್ಮಾನವಾಗುತ್ತಿತ್ತು. ಆದರೆ ಈಗ ಅಪ್ಪ ಮಕ್ಕಳು ಮಾತ್ರ ತೀರ್ಮಾನ ಮಾಡುತ್ತಿದ್ದಾರೆ. ಬ್ರಹ್ಮ ಬಂದರೂ ಸಹ ರಘುಪತಿ ಭಟ್ ಗೆಲುವನ್ನು ತಡೆಯಲು ಆಗಲ್ಲ. ಎಲ್ಲ ಹಿಂದೂತ್ವವಾದಿಗಳ ಮನೆಗೆ ಹೋಗೋಣ ಮತ ಕೇಳೋಣ ಎಂದರು. ಆಯನೂರು ಮಂಜುನಾಥ್, ಯಡಿಯೂರಪ್ಪ ಎಷ್ಟು ಪಾರ್ಟಿಗೆ ಹೋಗಿದ್ದಾರೆ ಎಂಬುದು ನಿಮಗೆಲ್ಲರಿಗೂ ಗೊತ್ತಿದೆ ಎಂದರು.
ರಘುಪತಿ ಭಟ್ರು ರಾಷ್ಟೀಯವಾದಿಗಳು, ಅವರಿಗೆ ಒಂದು ವಿನಂತಿ ಏನಂದ್ರೆ ನೀವು ಗೆದ್ದ ಮೇಲೆ ಹೆಚ್ಚಿನ ಅನುದಾನ ನಮ್ಮ ಜಿಲ್ಲೆಗೆ ನೀಡಿ ಎಂದು ವಿನಂತಿಸಿಕೊಂಡರು. ಅತಿ ಹೆಚ್ಚು ಅಂತರದಲ್ಲಿ ಗೆಲ್ಲಿಸಬೇಕೆಂದು ವಿನಂತಿಸಿಕೊಂಡರು. ಉಡುಪಿಗಿಂತ ಶಿವಮೊಗ್ಗ ಜಿಲ್ಲೆ ಹೆಚ್ಚಿನ ಲೀಡ್ ಕೊಡುತ್ತೇವೆ ಎಂದರು.