ಹುಬ್ಬಳ್ಳಿ:ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ರಾಯಣ್ಣ ಬ್ರಿಗೇಡ್ ಸಂಘಟನೆಗೆ ಮರುಜೀವ ಕೊಡುವ ಲಕ್ಷಣಗಳು ಗೋಚರಿಸಿವೆ. ಹುಬ್ಬಳ್ಳಿಯ ಹೊರವಲಯದ ಖಾಸಗಿ ಹೊಟೇಲ್ನಲ್ಲಿ ಈಶ್ವರಪ್ಪ ನೇತೃತ್ವದಲ್ಲಿ ಗುರುವಾರ ಗೌಪ್ಯ ಸಭೆ ನಡೆದಿದೆ.
ಈ ಸಭೆಯಲ್ಲಿ ಹಲವು ಮುಖಂಡರು ಭಾಗಿಯಾಗಿದ್ದು, ರಾಜ್ಯಾದ್ಯಂತ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆ ಮಾಡುವ ಕುರಿತು ಚರ್ಚಿಸಲು ಸೆಪ್ಟೆಂಬರ್ 22ರಂದು ಕೂಡಲಸಂಗಮದಲ್ಲಿ ಸಂಘಟನಾ ಸಭೆ ಆಯೋಜಿಸಲು ನಿರ್ಧರಿಸಲಾಗಿದೆ. ಜೊತೆಗೆ, ಯಾವುದೇ ರೀತಿಯ ಭಿನ್ನಾಭಿಪ್ರಾಯ, ಅಧಿಕಾರದ ಲಾಲಸೆಗೆ ಒಳಗಾಗದಂತೆ ಸಂಘಟನೆಗೆ ಕೆಲವರು ಸಲಹೆ ನೀಡಿದ್ದಾರೆ.
ಯುವ ನಾಯಕತ್ವ, ನಾಯಕತ್ವದಿಂದ ವಂಚಿತರಿಗೆ ಅವಕಾಶ ಕಲ್ಪಿಸಿಕೊಡಲು ಚಿಂತನೆ ನಡೆದಿದೆ. ಈಶ್ವರಪ್ಪನವರು ಬ್ರಿಗೇಡ್ ಸಂಘಟನೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುವಂತೆ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿಯಿಂದ ಸೇರ್ಪಡೆಗೆ ಮರು ಅವಕಾಶ ಬಂದರೆ ವಿಚಾರಿಸಿ ಸೇರ್ಪಡೆಗೆ ಸಲಹೆ ನೀಡಿದ್ದಾರೆ. ಅಹಿಂದ ಸಂಘಟನೆ ಮಾಡಿ ಕೆಲವರ ಕೈಯಲ್ಲಿ ಮಾತ್ರ ಅಧಿಕಾರ ನೀಡಲಾಯಿತು. ಅಹಿಂದದಂತೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆ ಆಗಬಾರದು. ಈ ಸಲ ಬಿಜೆಪಿ ಸೇರ್ಪಡೆಗೆ ಆಹ್ವಾನ ಬಂದರೆ ತಮ್ಮ ಕರಾರುಗಳಿಗೆ ಒಪ್ಪಿದರೆ ಮಾತ್ರ ಮರು ಸೇರ್ಪಡೆಯ ಇಂಗಿತವನ್ನು ಈಶ್ವರಪ್ಪ ಸಭೆಯಲ್ಲಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ರಾಯಣ್ಣ ಬ್ರಿಗೇಡ್ ಕುರಿತು ಹುಬ್ಬಳ್ಳಿಯಲ್ಲಿ ಈಶ್ವರಪ್ಪ ನೇತೃತ್ವದಲ್ಲಿ ಗೌಪ್ಯ ಸಭೆ (ETV Bharat) "ಈಶ್ವರಪ್ಪಗೆ ತಮ್ಮ ರಾಜಕೀಯದಲ್ಲಿ ಹಿನ್ನೆಡೆ ಉಂಟಾದಾಗ ಮಾತ್ರ ರಾಯಣ್ಣನ ಹೆಸರು ಬಳಸಿ ರಾಜಕೀಯ ಲಾಭ ಪಡೆದಿದ್ದಿದೆ. ಇದಕ್ಕಾಗಿ ಈ ಹಿಂದೆ ಇವರೊಂದಿಗೆ ಗುರುತಿಸಿಕೊಂಡಿದ್ದ ಕೆಲ ನಾಯಕರು ಜೊತೆ ಸೇರಲು ಹಿಂದೇಟು ಹಾಕುತ್ತಿದ್ದಾರೆ. ರಾಜಕೀಯ ಹಿತಾಸಕ್ತಿಗೆ ರಾಯಣ್ಣನ ಹೆಸರು ಬಳಕೆಯಾದ್ರೆ ನಮ್ಮ ಬೆಂಬಲವಿಲ್ಲ. ನಾವು ಯಾವುದೇ ಸಭೆಯಲ್ಲಿ ಭಾಗಿಯಾಗುವುದಿಲ್ಲ" ಎಂದು ಮಾಜಿ ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ್ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.
ಸಭೆಯಲ್ಲಿ ರಾಯಣ್ಣ ಬ್ರಿಗೇಡ್ ಬದಲು ಹಿಂದ್ ಸಂಘಟನೆ ಅಂತ ಹೊಸ ನಾಮಕರಣ ಮಾಡಲು ಸಲಹೆ ಬಂದಿದ್ದು, ಕೂಡಲ ಸಂಗಮದಲ್ಲಿ ನಡೆಯುವ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಮುಕುಡಪ್ಪ, ಕಾಂತೇಶ ಈಶ್ವರಪ್ಪ, ಮುಖಂಡರಾದ ಸಿದ್ದು ತೇಜಿ, ಶಿವಾನಂದ ಮುತ್ತಣ್ಣವರ, ಮುತ್ತು ಶಿವಳ್ಳಿ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ:ಈಶ್ವರಪ್ಪ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಪರವಾಗಿ ಅವರ ಪುತ್ರ ರಾಮನಗೌಡ ಬಸನಗೌಡ ಪಾಟೀಲ್ ಯತ್ನಾಳಗೆ ಹುಬ್ಬಳ್ಳಿಯ ಗಜಾನನ ಮಂಡಳಿಯು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಪ್ರದಾನ ಮಾಡಿತು. ಮನಸೂರಿನ ರೇವಣಸಿದ್ದೇಶ್ವರ ಮಠದ ಡಾ.ಬಸವರಾಜ ದೇವರು, ಹುಬ್ಬಳ್ಳಿಯ ಹೊಸಮಠದ ಚಂದ್ರಶೇಖರ ಶಿವಯೋಗಿ ಮಹಾಸ್ವಾಮೀಜಿ ಪ್ರಶಸ್ತಿ ನೀಡಿ ಗೌರವಿಸಿದರು.