ಕಾರವಾರ: ತಾಲೂಕಿನ ಹಣಕೋಣದಲ್ಲಿನ ಉದ್ಯಮಿ ವಿನಾಯಕ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಅಸ್ಸಾಂ ಮೂಲದ ಮೂವರು ಆರೋಪಿಗಳನ್ನು ಬಂಧಿಸಿದ್ದು, ಗೋವಾದಲ್ಲಿ ಉದ್ಯಮ ನಡೆಸುತ್ತಿದ್ದ ಮುಖ್ಯ ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗೋಷ್ಟಿ ನಡೆಸಿ ಮಾಹಿತಿ ನೀಡಿದ ಅವರು, "ಆರೋಪಿಗಳಾದ ಲಕ್ಷ ಜೋತಿನಾಥ್, ಬಿಹಾರ ಮೂಲದ ಅಜ್ಮಲ್ ಹಾಗೂ ಮಾಸೂಮ್ ಎಂಬುವರನ್ನು ಬಂಧಿಸಲಾಗಿದೆ. ಇನ್ನು ಘಟನೆ ನಡೆದ ನಂತರ ಪ್ರಕರಣದ ಎ1 ಆರೋಪಿಯಾಗಿರುವ ಗುರುಪ್ರಸಾದ್ ರಾಣೆ ಆತ್ಮಹತ್ಯೆ ಮಾಡಿಕೊಂಡಿರುವುದು ಖಚಿತವಾಗಿದೆ" ಎಂದರು.
ಎಸ್ಪಿ ಎಂ ನಾರಾಯಣ್ (ETV Bharat) "ಸೆ.22ರಂದು ಘಟನೆ ನಡೆಯುತ್ತಿದ್ದಂತೆ ಪೊಲೀಸರು ತನಿಖೆಗೆ ಇಳಿದಿದ್ದರು. ಸಣ್ಣ ಸುಳಿವು ಹಿಡಿದು ಕಾರ್ಯಾಚರಣೆಗೆ ಇಳಿಯಲಾಗಿತ್ತು. ಪ್ರಕರಣದಲ್ಲಿ ಸ್ಥಳೀಯ ಮಾಹಿತಿದಾರರನ್ನು ಸಂಪರ್ಕಿಸಿ ಮಾಹಿತಿ ಪಡೆಯಲಾಗಿತ್ತು. ಉದ್ಯಮ ವಿಚಾರದಲ್ಲಿ ಕೊಲೆಯಾಗಿರಬಹುದು ಎಂದು ವಿಚಾರಿಸಿದಾಗ ಅದು ಸಹ ಇಲ್ಲ ಎನ್ನುವ ಮಾಹಿತಿ ಲಭ್ಯವಾಗಿತ್ತು. ಹಣಕೋಣದ ಮನೆಯಲ್ಲಿ ಕೊಲೆಯಾದ ವ್ಯಕ್ತಿ ವಿನಾಯಕನ ಕುಟುಂಬದವರು ಸರಿಯಾದ ಮಾಹಿತಿ ನೀಡಿರಲಿಲ್ಲ. ಬಿಳಿ ಬಣ್ಣದ ಮಾರುತಿ ಸ್ವಿಫ್ಟ್ ಕಾರು ಗ್ರಾಮಕ್ಕೆ ಬಂದ ಮಾಹಿತಿ ಪಡೆದು ತನಿಖೆ ಪ್ರಾರಂಭಿಸಿದ್ದೆವು. ಕಾರು ಗೋವಾ ಕಡೆ ಹೋಗಿರುವುದು ಪತ್ತೆಯಾಗಿತ್ತು" ಎಂದು ಹೇಳಿದರು.
"ವಾಹನದ ನಂಬರ್ ಪಡೆದು ವಿಚಾರಿಸಿದಾಗ ಅದು ಫೇಕ್ ನಂಬರ್ ಎಂದು ತಿಳಿದಿತ್ತು. ಆದರೆ ಕಾರನ್ನು ಹಿಂದೆಯೇ ಪ್ರವೀಣ್ ಸುಧೀರ್ ಎಂಬಾತ ಅಶೋಕ್ ರಾಣೆ ಎಂಬಾತನಿಗೆ ಮಾರಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಆತ ತಾಲೂಕಿನವನೇ ಎಂಬ ಮಾಹಿತಿ ತಿಳಿದಾಗ ಆ ವಾಹನ ಗೋವಾದಲ್ಲಿ ಡಿಸ್ಟಿಲರಿ ಕಂಪನಿ ನಡೆಸುತ್ತಿದ್ದ ಗುರುಪ್ರಸಾದ್ ರಾಣೆ ಎಂಬಾತ ತೆಗೆದುಕೊಂಡು ಹೋಗಿದ್ದ ಎನ್ನುವ ಮಾಹಿತಿ ದೊರಕಿತ್ತು" ಎಂದು ತಿಳಿಸಿದರು.
"ಕಾರನ್ನು ಗುರುಪ್ರಸಾದ್ ರಾಣೆಯ ಜೊತೆ ಕೆಲಸ ಮಾಡುತ್ತಿದ್ದ ಅಸ್ಸೋಂ ಮೂಲದ ಲಕ್ಷ ಜೋತಿನಾಥ್ ಓಡಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದು ಆತನನ್ನು ವಿಚಾರಣೆ ಮಾಡಲು ಮುಂದಾದೆವು. ಆತ ಅಸ್ಸೋಂಗೆ ಹೋಗಲು ಸಿದ್ಧನಾಗಿದ್ದ ವೇಳೆಯಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿತ್ತು. ಗುರುಪ್ರಸಾದ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಅಜ್ಮಲ್ ಹಾಗೂ ಮಾಸೂಮ್ ಅವರನ್ನು ಲಕ್ಷ ಜೋತಿನಾಥ್ ಕರೆದುಕೊಂಡು ಬಂದು ಗುರುಪ್ರಸಾದ್ ರಾಣೆ ಆದೇಶದ ಮೇರೆಗೆ ವಿನಾಯಕನ ಹತ್ಯೆ ಮಾಡಿದ್ದ ಎನ್ನುವ ಮಾಹಿತಿ ಲಭ್ಯವಾಗಿತ್ತು" ಎಂದು ವಿವರಿಸಿದರು.
"ಕೊಲೆ ಮಾಡಿದ ನಂತರ ಕಾರನ್ನು ತೆಗೆದುಕೊಂಡು ಹೋಗಿ ಸರ್ವಿಸ್ ಸೆಂಟರ್ನಲ್ಲಿ ಸ್ವಚ್ಛಗೊಳಿಸಿ ಮನೆಗೆ ತೆರಳಲು ಸಿದ್ಧರಾಗಿದ್ದರು. ಲಕ್ಷ ಜೋತಿನಾಥ್ಗೆ ಗುರುಪ್ರಸಾದ್ ಒಂದು ಲಕ್ಷ ಹಾಗೂ ಅಜ್ಮಲ್ ಹಾಗೂ ಮಾಸೂಮ್ಗೆ ತಲಾ 50 ಸಾವಿರ ರೂಪಾಯಿ ಕೊಟ್ಟು ಊರಿಗೆ ತೆರಳಲು ತಿಳಿಸಿದ್ದನು. ಆದರೆ ಲಕ್ಷ ಜೋತಿನಾಥ್ನನ್ನು ಗೋವಾದಲ್ಲಿಯೇ ವಶಕ್ಕೆ ಪಡೆಯಲಾಗಿತ್ತು. ಇನ್ನು ಫೋನ್ ಡೀಟೈಲ್ಸ್ ಪಡೆದು ಅಜ್ಮಲ್ ಹಾಗೂ ಮಾಸೂಮ್ ದೆಹಲಿಗೆ ಹೋಗುತ್ತಿದ್ದ ಮಾಹಿತಿ ಪಡೆದು ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ದೆಹಲಿ ಪೊಲೀಸರ ಸಹಾಯದಿಂದ ಅಜ್ಮಲ್ ಹಾಗೂ ಮಾಸೂಮ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ" ತಿಳಿಸಿದರು.
ಇನ್ನು, ಸಾಮಾಜಿಕ ಜಾಲತಾಣದಲ್ಲಿ ಹತ್ಯೆ ಹಿಂದೆ ಗುರುಪ್ರಸಾದ್ ಇದ್ದ ಬಗ್ಗೆ ಸುದ್ದಿ ಬಂದ ಹಿನ್ನೆಲೆ ತನ್ನನ್ನು ಬಂಧಿಸಬಹುದು ಎನ್ನುವ ಭಯದಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ" ಎಂದು ಎಂ. ನಾರಾಯಣ್ ಹೇಳಿದರು.
ಈ ವೇಳೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ.ಟಿ.ಜಯಕುಮಾರ್, ಜಗದೀಶ್, ಡಿಎಸ್ಪಿ ಗಿರೀಶ್, ಪಿಐ ರಮೇಶ್ ಹೂಗಾರ್, ಪಿಎಸ್ಐ ಮಹಾಂತೇಶ ವಾಲ್ಮೀಕಿ, ನರಸಿಂಹಲು ಉಪಸ್ಥಿತರಿದ್ದರು.
ಇದನ್ನೂ ಓದಿ:ಕಾರವಾರ: ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಉದ್ಯಮಿ ಕೊಲೆ, ಪತ್ನಿ ಗಂಭೀರ - Businessman Killed