ದಾವಣಗೆರೆ:"ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ನಮ್ಮ ಮಾತು ಕೇಳುವುದಿಲ್ಲ" ಎಂದು ಚನ್ನಗಿರಿಯ ಶಾಸಕ ಶಿವಗಂಗಾ ಬಸವರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಕೆಡಿಪಿ ಸಭೆ ಬಳಿಕ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಮಾತನಾಡಿದ ಅವರು, "ಚನ್ನಗಿರಿಯಲ್ಲಿ ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆಯ ಪಕ್ಕದಲ್ಲೇ ಬಾರ್ಗೆ ಅನುಮತಿ ಕೊಡಲಾಗಿದೆ. ಕೇಳಿದರೆ ನಾನು ಕೊಟ್ಟಿಲ್ಲ, ಹಿಂದಿದ್ದವರು ಕೊಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳ್ತಿದ್ದಾರೆ. ಜಿಲ್ಲಾಧಿಕಾರಿ ಲಂಚ ಪಡೆದು ಇದಕ್ಕೆ ಅನುಮತಿ ಕೊಟ್ಟಿದ್ದಾರೆ. ಡಿಸಿ ಡಾ. ವೆಂಕಟೇಶ್ ಎಂ ವಿ ಅವರು ಈ ರೀತಿ ನಡೆದುಕೊಳ್ಳುವುದು ನಮಗೆ ಅಸಹ್ಯ ಎನ್ನಿಸುತ್ತದೆ" ಎಂದರು.
"ಒಂದು ಆಯುರ್ವೇದಿಕ್ ಆಸ್ಪತ್ರೆ ಹಾಗು ಕಾಲೇಜು ಪಕ್ಕದಲ್ಲೇ ಸಿಎಲ್7 ಅನ್ನು ನನ್ನ ಗಮನಕ್ಕೆ ತಾರದೆ ಮಂಜೂರು ಮಾಡಿರುವುದು ನನಗೆ ನೋವು ತಂದಿದೆ. ಈ ರೀತಿಯ ವ್ಯವಸ್ಥೆಯಲ್ಲಿ ಅವರು ಹಣ ಹೊಡೆಯುವ ಕೆಲಸಕ್ಕೆ ಕೈಹಾಕಿದ್ದಾರೆ. ಒಬ್ಬ ಶಾಸಕನ ಗಮನಕ್ಕೆ ತರದೆ ಜಿಲ್ಲಾಧಿಕಾರಿ ಈ ರೀತಿಯ ಕೆಲಸ ಮಾಡಿದ್ದಾರೆ. ಜಿಲ್ಲಾಧಿಕಾರಿ ಅಬಕಾರಿ ಇಲಾಖೆಯ ಗಮನಕ್ಕೆ ತಂದ್ರು ಕೂಡ ಜಿಲ್ಲಾಮಟ್ಟದ ಅಧಿಕಾರಿಗಳಿಂದ ಇಲ್ಲಿ ಶಾಸಕನಿಗೆ ಬೆಲೆ ಇಲ್ಲದಂತಾಗಿದೆ" ಎಂದು ಆರೋಪಿಸಿದರು.
"ನಮ್ಮ ಸರ್ಕಾರ ಆಡಳಿತದಲ್ಲಿದೆ ಎನ್ನುವುದಕ್ಕೂ ನಾಚಿಕೆ ಆಗುತ್ತೆ. ಬಾರ್ಗೆ ಅನುಮತಿ ನೀಡಿರುವ ಬಗ್ಗೆ ಸಿಎಂ ಹಾಗೂ ಡಿಸಿಎಂ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಇವರು ಹೊಸದಾಗಿ ಗೆದ್ದಿದ್ದಾರೆ, ಇವರದ್ದೇನು ಎಂಬಂತೆ ಆಗಿದೆ. ಕೆಲವರು ಜಿಲ್ಲಾಧಿಕಾರಿಯನ್ನು ಇಟ್ಟುಕೊಂಡು ರಾಜಕೀಯ ಮಾಡ್ತಿದ್ದಾರೆ, ಮಾಡಲಿ. ಜಿಲ್ಲಾ ಮಟ್ಟದ ಅಧಿಕಾರಿಗಳು ನಮಗೆ ಯಾವುದೇ ಸಹಕಾರ ಕೊಡುತ್ತಿಲ್ಲ. ಈ ಅಧಿಕಾರಿಗಳ ವರ್ತನೆಯಿಂದ ರಾಜಕಾರಣದಿಂದ ಬೇಸರ ಆಗಿದೆ. ಸಮಯ ಬಂದರೆ ರಾಜೀನಾಮೆ ಕೊಡುವ ಮಾತುಗಳನ್ನಾಡಬೇಕಾಗುತ್ತದೆ. ಜಿಲ್ಲಾಧಿಕಾರಿ, ಎಸ್ಪಿ ಇಬ್ಬರೂ ನಾನೊಬ್ಬ ಶಾಸಕ ಎನ್ನುವ ಗೌರವವನ್ನೂ ಕೊಡುವುದಿಲ್ಲ. ಸಮಯ ಬರಲಿ ಉತ್ತರ ಕೊಡುತ್ತೇನೆ" ಎಂದು ಶಾಸಕ ಶಿವಗಂಗಾ ಹೇಳಿದರು.
ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಬೆವರಿಳಿಸಿದ ಶಿವಗಂಗಾ ಬಸವರಾಜ್:ಬುಧವಾರ ನಡೆದ ಜಿ.ಪಂ ಕೆಡಿಪಿ ಸಭೆಯಲ್ಲಿ ಶಾಸಕ ಶಿವಗಂಗಾ ಬಸವರಾಜ್ ಕೃಷಿ ಅಧಿಕಾರಿಗೆ ಬೆವರಿಳಿಸಿದರು. ರೈತರಿಗೆ ಪರಿಹಾರ ಕೊಡುವ ವಿಚಾರದ ಬಗ್ಗೆ ಮಾತನಾಡಿದ ಅವರು ಹಲವು ಬಾರಿ ಗಮನಕ್ಕೆ ತಂದರೂ ಜವಾಬ್ದಾರಿ ಇಲ್ಲದಂತೆ ನಡೆದುಕೊಳ್ಳುತ್ತಿದ್ದೀರಾ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಸಭೆಯಲ್ಲಿ ಬೇರೆ ವಿಚಾರ ಮಾತನಾಡಲು ಮುಂದಾದ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಅವರನ್ನು, "ಇರೀ ಸರ್ ಒಂದು ನಿಮಿಷ ಸಭೆ ಎಂದರೇ ನೀವೇ ಮಾಡಿಕೊಳ್ಳಿ" ಎಂದು ಶಾಸಕ ಬಸವರಾಜ್ ಗದರಿದರು. "ಇದು ಗಂಭೀರ ವಿಷಯ, ಜವಾಬ್ದಾರಿ ಇಲ್ಲವೆಂದರೆ ಹೇಗೆ?" ಎಂದು ಪ್ರಶ್ನಿಸಿದರು.
ಜಾತಿಗಣತಿ ವಿಚಾರದಲ್ಲಿ ಶಾಮನೂರ ಶಿವಶಂಕರಪ್ಪ ನಿರ್ಧಾರಕ್ಕೆ ನಾನು ಬದ್ಧ: "ಜಾತಿಗಣತಿ ವಿಚಾರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನಿರ್ಧಾರಕ್ಕೆ ನಾನು ಬದ್ಧ. ಜಾತಿಗಣತಿ ಮಾಡಲು ಯಾರೂ ಬಂದಿಲ್ಲ. ಅಗತ್ಯ ಬಿದ್ದರೆ ಆಯಾ ಜಾತಿಯವರೇ ಗಣತಿ ಮಾಡಿಕೊಡಲಿ. ಈಗಾಗಲೇ ವೀರಶೈವ ಶಾಸಕರು ವೀರಶೈವ ಮಹಾಸಭಾದ ಪರವಾಗಿದ್ದೇವೆ ಎಂದು ಪತ್ರ ಕೊಡಲಾಗಿದೆ. ಜಾತಿಗಣತಿ ಮಾಡಿದವರು ಯಾರ ಮನೆಗೆ ಬಂದಿದ್ದಾರೆ ಹೇಳಿ. ಶಾಮನೂರು ಶಿವಶಕರಪ್ಪ ನೀಡುತ್ತಿರುವ ಹೇಳಿಕೆಯಲ್ಲಿ ಸತ್ಯವಿದೆ. ಕೆಲ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಅವರ ವೈಯಕ್ತಿಕ" ಎಂದರು.
ಇದನ್ನೂ ಓದಿ:ರಮೇಶ್ ಜಾರಕಿಹೊಳಿ ಆಟ ಈ ಸಾರಿ ನಡೆಯಲ್ಲ, ಎಲ್ಲ ಶಾಸಕರೂ ಒಗ್ಗಟ್ಟಾಗಿದ್ದೇವೆ: ಶಾಸಕ ಶಿವಗಂಗಾ ಬಸವರಾಜ್