ಬೆಂಗಳೂರು:ಮುಖ್ಯಮಂತ್ರಿಯಾಗಿ ಮುಂದುವರೆಯುವ ನೈತಿಕತೆ ಸಿದ್ದರಾಮಯ್ಯ ಅವರಿಗೆ ಇಲ್ಲ. ತಾಕತ್ತಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬರಲಿ ನೋಡೋಣ ಎಂದು ಸಿಎಂ ಸಿದ್ದರಾಮಯ್ಯಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸವಾಲೆಸೆದಿದ್ದಾರೆ.
ಅರಮನೆ ಮೈದಾನದಲ್ಲಿ ನಡೆದ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಲೋಕಸಭಾ ಚುನಾವಣೆ ಮುಗಿದಿದೆ. ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಎನ್ಡಿಎ ಅಧಿಕಾರಕ್ಕೆ ಬಂದಿದೆ. ರಾಜ್ಯದಲ್ಲಿಯೂ ಮೈತ್ರಿಗೆ 19 ಸ್ಥಾನ ಬಂದಿದೆ. ಸಿಎಂ, ಡಿಸಿಎಂ, 17 ಸಚಿವರ ಕ್ಷೇತ್ರದಲ್ಲೇ ಕಾಂಗ್ರೆಸ್ ಹಿನ್ನಡೆಯಾಗಿದೆ. ಕಾಂಗ್ರೆಸ್ನ ಸರ್ವ ಪ್ರಯತ್ನ, ಹಣ ಬಲ, ತೋಳ್ಬಲ, ಹತ್ತು ಹಲವು ಆಮಿಷಗಳ ನಡುವೆಯೂ ಬಿಜೆಪಿಗೆ ಜನಮತ ನೀಡಿದ್ದಾರೆ. ಈಗ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದಲ್ಲಿ ಬಿಜೆಪಿ 130-135 ಸ್ಥಾನ ಗೆಲ್ಲಲಿದೆ ಎಂದರು.
ನಮ್ಮ ತಪ್ಪಿನಿಂದ ಹಿನ್ನಡೆ:ಲೋಕಸಭೆಯಲ್ಲಿಕೆಲ ಕ್ಷೇತ್ರದಲ್ಲಿ ನಮ್ಮ ಕಡೆಯಿದ ಆದ ತಪ್ಪಿನಿಂದ ಸ್ವಲ್ಪ ಹಿನ್ನಡೆ ಅನುಭವಿಸಿದ್ದೇವೆ. ಆದರೆ ಜನರು ಸ್ಪಷ್ಟವಾಗಿ ಕಾಂಗ್ರೆಸ್ನ ದುರಾಡಳಿತದ ವಿರುದ್ಧ ಮತ ನೀಡಿದ್ದಾರೆ. ರಾಜ್ಯ ಸರ್ಕಾರ ತಪ್ಪು ನೀತಿಗಳಿಂದ ದಿವಾಳಿ ಅಂಚಿಗೆ ಬಂದಿದೆ, ಶಾಸಕರಿಗೆ ಅನುದಾನ ನೀಡಿಲ್ಲ, ಎಲ್ಲ ತೆರಿಗೆ ಹೆಚ್ಚಿಸಿ ಬೆಲೆ ಏರಿಕೆಗೆ ನಾಂದಿ ಹಾಡಿದ್ದಾರೆ. ಅಭಿವೃದ್ಧಿ ಕಾರ್ಯ ನಿಂತಿದೆ, ಖಜಾನೆ ಬರಿದಾಗಿದೆ. ಗ್ಯಾರಂಟಿಗಳನ್ನು ರದ್ದು ಮಾಡಿ ಅಭಿವೃದ್ಧಿಗೆ ಹಣ ನೀಡಿ ಎಂದು ಕಾಂಗ್ರೆಸ್ ಮುಖಂಡರೇ ಹೇಳುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ಸಿಕ್ಕ ಸಿಕ್ಕ ಕಡೆ ತೆರಿಗೆ ಹೆಚ್ಚಿಸಿ ಜನರ ಸುಲಿಗೆ ಮಾಡಿ ಸಂಪನ್ಮೂಲ ಕ್ರೋಢೀಕರಿಸುತ್ತಿದೆ, ಸರ್ಕಾರ ಪಾಪರ್ ಆಗದೇ ಇದ್ದಿದ್ದರೆ ತೈಲ ತೆರಿಗೆ ಹೆಚ್ಚಿಸುವ ಅಗತ್ಯ ಇರಲಿಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಡಿದೆ, ರಾಮೇಶ್ವರಂ ಕೆಫೆ ಸ್ಫೋಟ, ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ, ಚನ್ನಗಿರಿ ಠಾಣೆ ಗಲಾಟೆ ಸೇರಿ ಹಲವು ಘಟನಾವಳಿಗಳ ಉಲ್ಲೇಖಿಸಿ ವಾಗ್ದಾಳಿ ನಡೆಸಿದರು.
ವಾಲ್ಮೀಕಿ ನಿಗಮ ಹಗರಣದ ಬೆನ್ನಲ್ಲೇ ಮೈಸೂರು ಮುಡಾ ಹಗರಣ ಬೆಳಕಿಗೆ ಬಂದಿದೆ. ಸಿಎಂ ಕುಟುಂಬದವರು ಇದರಲ್ಲಿ ಭಾಗಿಯಾಗಿದ್ದು, ಸಿಎಂ ಕೈವಾಡ ಇದರಲ್ಲಿದೆ. ಇದನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕಿದೆ, ರಾಜ್ಯದ ದುರಾಡಳಿತ ಮತ್ತು ಕೇಂದ್ರದ ಜನಪರ ಕಾರ್ಯಗಳನ್ನು ಜನರಿಗೆ ತಿಳಿಸಬೇಕು ಎಂದು ಮಾಜಿ ಸಿಎಂ ಕರೆ ನೀಡಿದರು.
ವಿಧಾನಸಭೆ ಅಧಿವೇಶನದಲ್ಲಿ ಎಲ್ಲ ಹಗರಣ ಬಯಲು ಮಾಡಿ ಒಂದು ಕ್ಷಣ ಅಧಿಕಾರದಲ್ಲಿ ಮುಂದುವರೆಯುವ ಹಕ್ಕಿಲ್ಲ ಎಂದು ಹೋರಾಟ ಮಾಡಬೇಕು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದಾರೆ. ಸದನದಲ್ಲಿ ನಮ್ಮ ಶಾಸಕರು ಹೋರಾಡಿ ರಾಜ್ಯದ ಜನರ ಗಮನ ಸೆಳೆಯಬೇಕು, ಎಲ್ಲ ಹಗರಣ ಬೆಳಕಿಗೆ ತರಬೇಕು ಎಂದರು.